ಮಂಗಳೂರು: ಮಂಗಳೂರಿನ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ದೇವರ ಮಹೋತ್ಸವ ಕಾರ್ಯಕ್ರಮಕ್ಕೆ ನೂತನವಾಗಿ ನಿರ್ಮಿಸಲಾದ ಸ್ವರ್ಣ ಲಾಲ್ಕಿಯ ಪುರಪ್ರವೇಶ ಕಾರ್ಯಕ್ರಮ ಶುಕ್ರವಾರ ಜರಗಿತು.
ಸಂಘನಿಕೇತನದಿಂದ ಮಣ್ಣಗುಡ್ಡ, ಕುದ್ರೋಳಿ, ರಥಬೀದಿ ಮೂಲಕ ಶ್ರೀ ದೇವಸ್ಥಾನಕ್ಕೆ ವಿಜೃಂಭಣೆಯಿಂದ ತರಲಾಯಿತು.
ಸುಮಾರು 35 ಕೆ.ಜಿ. ಬಂಗಾರ, 70 ಕೆ.ಜಿ. ಬೆಳ್ಳಿಯಿಂದ ನಿರ್ಮಿಸಲಾದ ಸ್ವರ್ಣ ಲಾಲ್ಕಿಯನ್ನು ಬ್ರಹ್ಮರಥೋತ್ಸವದ ಹಿಂದಿನ ದಿನ ನಡೆಯುವ ಶ್ರೀ ದೇವರ ಮೃಗಬೇಟೆ ಉತ್ಸವದಂದು ಶ್ರೀ ಕಾಶೀ ಮಠಾಧೀಶರಾದ ಶ್ರೀಮತ್ ಸಂಯಮಿಂದ್ರತೀರ್ಥ ಸ್ವಾಮೀಜಿ ಅವರು ಸಮರ್ಪಿಸಲಿದ್ದಾರೆ.
ಈ ಸ್ವರ್ಣ ಲಾಲ್ಕಿಯನ್ನು ಸೇವಾರೂಪದಲ್ಲಿ ನೀಡಿದ ಡಾ| ಪಿ. ದಯಾನಂದ ಪೈ ಕುಟುಂಬಸ್ಥರು ಹಾಗೂ ಹತ್ತು ಸಮಸ್ತರ ಸೇವಾರೂಪದಲ್ಲಿ ನೀಡಲಾದ ಸ್ವರ್ಣ ಮತ್ತು ರಜತದಿಂದ ಸಮರ್ಪಿಸಲಾಗಿದೆ.
ಡಾ| ಪಿ. ದಯಾನಂದ ಪೈ, ಮೋಹಿನಿ ದಯಾನಂದ ಪೈ, ದೇವಸ್ಥಾನದ ಆಡಳಿತ ಮೊಕ್ತೇಸರ ಅಡಿಗೆ ಬಾಲಕೃಷ್ಣ ಶೆಣೈ, ಸಾಹುಕಾರ್ ಕಿರಣ್ ಪೈ, ಸತೀಶ್ ಪ್ರಭು, ಕೆ. ಗಣೇಶ್ ಕಾಮತ್, ಎಂ. ಜಗನ್ನಾಥ್ ಕಾಮತ್, ತಂತ್ರಿಗಳಾದ ಪಂಡಿತ್ ನರಸಿಂಹ ಆಚಾರ್ಯ, ಪಂಡಿತ್ ಕಾಶೀನಾಥ್ ಆಚಾರ್ಯ, ಉದ್ಯಮಿ ಸುರೇಶ ವಿ. ಕಾಮತ್, ಶಾಸಕ ಡಿ. ವೇದವ್ಯಾಸ ಕಾಮತ್ ಹಾಗೂ ಸಮಾಜ ಬಾಂಧವರು ಭಾಗವಹಿಸಿದ್ದರು.