ಉಡುಪಿ: ಉಡುಪಿ ನಗರಕ್ಕೆ ಕುಡಿಯುವ ನೀರು ಸಂಗ್ರಹವಾಗಲು ಶೀರೂರಿನಿಂದ ಬಜೆ ಅಣೆಕಟ್ಟು ಪ್ರದೇಶದ ವರೆಗೆ ತುಂಬಿರುವ ಹೂಳನ್ನು ತೆಗೆಯಲು ನಗರಸಭೆ ಕರೆದ ಟೆಂಡರ್/ ಹರಾಜು ಪ್ರಕ್ರಿಯೆ ಇನ್ನೇನು ನಡೆದು ಈಗಲ್ಲವಾದರೂ ಮುಂದಿನ ವರ್ಷಕ್ಕೆ ಸ್ವಲ್ಪ ನೆರವಾಗಬಹುದು ಎಂಬ ಆಸೆಗೆ ಮತ್ತೆ ಕಲ್ಲು ಬಿದ್ದಿದೆ.
ಟೆಂಡರ್‌ದಾರರು ಅರ್ಜಿ ಸಲ್ಲಿಸಲು ಸೋಮವಾರ ಕೊನೆಯ ದಿನವಾಗಿತ್ತು. ಆದರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಇದಕ್ಕೆ ತಡೆ ವ್ಯಕ್ತವಾಯಿತು.
ಕಳೆದ ವರ್ಷ ಗಣಿ ಮತ್ತು ಭೂವಿಜ್ಞಾನ ಇಲಾಖೆಯವರು ಇದೇ ಪ್ರದೇಶದಲ್ಲಿ ಮರಳು ತೆಗೆಯಲು ಸರಕಾರದಿಂದ ಅನುಮತಿ ಕೋರಿದ್ದರು. ಇತ್ತೀಚೆಗೆ ಸಚಿವರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ನಗರಸಭೆಯವರು ಸ್ಥಳಕ್ಕೆ ಭೇಟಿ ಕೊಟ್ಟಾಗ ಈ ವಿಷಯ ಪ್ರಸ್ತಾವಗೊಳ್ಳಲಿಲ್ಲ. ಆಗ ಭೇಟಿ ಕೊಟ್ಟ ಜಿಲ್ಲಾಡಳಿತ ಹೂಳೆತ್ತಲು ಅನುಮತಿ ನೀಡಿ ನಗರಸಭೆ ಅದರಂತೆ ಟೆಂಡರ್ ಕರೆಯಿತು. ಸೋಮವಾರದ ಸಭೆಯಲ್ಲಿ ಗಣಿ ಇಲಾಖೆ ಹಿಂದೆ ಮರಳು ತೆಗೆಯಲು ಗುರುತಿಸಿದ ಸ್ಥಳವೂ ನಗರಸಭೆ ಈಗ ಹೂಳೆತ್ತಲು ಗುರುತಿಸಿದ ಸ್ಥಳವೂ ಒಂದೇ ಆದ ಕಾರಣ ನಗರಸಭೆ ಕರೆದ ಟೆಂಡರ್‌ಗೆ ಜಿಲ್ಲಾಡಳಿತ ತಡೆ ನೀಡಿತು.
“ಇತ್ತೀಚೆಗೆ ಹೂಳು ತುಂಬಿದ ಸ್ಥಳಕ್ಕೆ ಹೋದಾಗ ಹಿಂದೆ ಗುರುತಿಸಿದ ಸ್ಥಳದ ಕುರಿತು ಗಣಿ ಇಲಾಖೆಯವರು ಸ್ಪಷ್ಟ ಮಾಹಿತಿ ನೀಡಿರಲಿಲ್ಲ. ಆಗ ಮರಳುಗಾರಿಕೆ ನಡೆಸಲು ಸಲ್ಲಿಸಿದ ಪ್ರಸ್ತಾವ ಸರಕಾರದ ಹಂತದಲ್ಲಿದೆ ಎಂದು ಹೇಳಿದರು. ಈ ಕಾರಣದಿಂದ ಸರಕಾರದ ಮಾರ್ಗಸೂಚಿ ಬರುವವರೆಗೆ ನಿರ್ಧಾರ ತೆಗೆದುಕೊಳ್ಳುವುದು ಬೇಡವೆಂದು ನಿರ್ಧರಿಸಲಾಯಿತು. ಹಿಂದೆ ಸ್ಥಳಕ್ಕೆ ಭೇಟಿ ಕೊಟ್ಟಾಗ ಹೇಳಿದ್ದರೆ ಟೆಂಡರ್ ಕರೆಯುವ ಪ್ರಶ್ನೆಯೇ ಬರುತ್ತಿರಲಿಲ್ಲ’ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು “ಉದಯವಾಣಿ’ಗೆ ತಿಳಿಸಿದರು.
ಮುಂಡ್ಲಿಯಲ್ಲೂ ಬಿತ್ತು ಕಲ್ಲು!
ಕಾರ್ಕಳ ಪುರಸಭೆಯವರು ಕುಡಿಯುವ ನೀರಿನ ಪೂರೈಕೆಗಾಗಿ ತೆಳ್ಳಾರು ಮುಂಡ್ಲಿಯಲ್ಲಿ ತುಂಬಿದ ಹೂಳು ತೆಗೆಯಲು ಟೆಂಡರ್ ಕರೆದಿದ್ದರು. ಬಿಡ್‌ದಾರರು ಹಣವನ್ನೂ ಕಟ್ಟಿ ಹೂಳು ಎತ್ತಿದ್ದರು. ಇದು ಸುಮಾರು 15 ದಿನಗಳ ಹಿಂದಿನ ಕಥೆ. ಇದಕ್ಕೆ ಕೂಡ ಮರಳುಗಾರಿಕೆ ಎಂಬ ಹೆಸರಿನಲ್ಲಿ ತಡೆಯಾಜ್ಞೆ ನೀಡಲಾಗಿದೆ.
“ಪುರಸಭೆಯವರು ತಜ್ಞರ ಅಧ್ಯಯನ ನಡೆಸಿ ಅವರು ಹೂಳೆತ್ತುವಿಕೆಯಿಂದ ಕುಡಿಯುವ ನೀರಿಗೆ ಅನುಕೂಲವಾಗುತ್ತದೆಂಬ ಅಭಿಪ್ರಾಯ ನೀಡಿದರೆ ಮತ್ತೆ ನಿರ್ಣಯ ಮಾಡಿ ಹೂಳೆತ್ತಬಹುದು. ಸಂಗ್ರಹವಾದ ಮರಳನ್ನು ಸರಕಾರದ ಕಾಮಗಾರಿಗಳಿಗೆ ನೀಡಲು ತಿಳಿಸಿದ್ದೇವೆ. ಈಗ ಮರಳುಗಾರಿಕೆ ಕಾರಣಕ್ಕೆ ಕಾಮಗಾರಿಗೆ ತಡೆಯಾಜ್ಞೆ ನೀಡಿದ್ದೇವೆ’ ಎಂದು ಡಿಸಿ ತಿಳಿಸಿದ್ದಾರೆ.
10 ದಿನಗಳಿಗೆ ನೀರು
ಸದ್ಯ ಉಡುಪಿ ನಗರಕ್ಕೆ ನೀರುಣಿಸಲು 10ರಿಂದ 12 ಗಂಟೆ ಕಾಲ ನೀರು ತುಂಬಿದ ಹೊಂಡಗಳಿಂದ ನೀರೆತ್ತಲಾಗುತ್ತಿದೆ. ಪುತ್ತಿಗೆ, ಭಂಡಾರಿಬೆಟ್ಟು, ಮಾಣಾçಯಲ್ಲಿ ಒಟ್ಟು 9 ಪಂಪುಗಳಿಂದ ಬಜೆ ಅಣೆಕಟ್ಟಿಗೆ ನೀರು ಹಾಯಿಸಲಾಗುತ್ತಿದೆ. ಹಾಗೋ ಹೀಗೋ 10-12 ದಿನಗಳಿಗೆ ನೀರುಣಿಸಬಹುದು; ಅಷ್ಟರೊಳಗೆ ಮಳೆ ಬರಬಹುದು ಎಂಬ ಆಶಾವಾದವಿದೆ.