ಉಡುಪಿ – ಪರ್ಕಳದ ‘ಸರಿಗಮ ಭಾರತಿ’ ಸಭಾಂಗಣದಲ್ಲಿ ಆಗಸ್ಟ್ 31, 2017ರಂದು ‘ಸ್ವರ ಶತಕ’ ಎಂಬ ವಿಶೇಷ ಕಾರ್ಯಕ್ರಮ ನಡೆಯಿತು. ಬೆಂಗಳೂರಿನಲ್ಲಿರುವ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಪ್ರಾದೇಶಿಕ ವಲಯ ಕಚೇರಿಯು ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಸಂಗೀತ ಕಾರ್ಯಕ್ರಮ ನಡೆಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಅಭಿಯಾನಕ್ಕೆ ಉಡುಪಿ ಜಿಲ್ಲೆಯಲ್ಲಿ ಕೈಜೋಡಿಸಿದವರು ಪರ್ಕಳದ ‘ಸರಿಗಮ ಭಾರತಿ’ ಸಂಸ್ಥೆಯವರು. ಭಾರತ ರತ್ನ ಎಂ.ಎಸ್. ಸುಬ್ಬಲಕ್ಷ್ಮೀಯವರ ಜನ್ಮಶತಮಾನೋತ್ಸವದ ಅಂಗವಾಗಿ ಈ ಸರಣಿಯನ್ನು ಏರ್ಪಡಿಸಲಾಗಿತ್ತು. ಆ ಪ್ರಯುಕ್ತ ಶಾಸ್ತ್ರೀಯ ಸಂಗೀತ ಕಚೇರಿಯನ್ನು ನಡೆಸಿದವರು ವಿ| ಶಂಕರಿಮೂರ್ತಿ ಬಾಳಿಲ.
ಸಂತೋಷದ ಮುಖ ಮುದ್ರೆ! ಶ್ರೋತೃಗಳು ಮತ್ತು ಸಹ ಕಲಾವಿದರೊಂದಿಗೆ ಸಂವಹನ! ಇಡೀ ಕಛೇರಿಯಲ್ಲಿ ಮಿಂಚಿತ ಪಾಂಡಿತ್ಯದ ಮೆರುಗು! ತುಸುವೇ ಗಡುಸೆನಿಸುವ ಘನವಾದ ಶಾರೀರ! ಹಂಸಧ್ವನಿ ವರ್ಣದಿಂದ ತೊಡಗಿ ಕೊನೆಯ ಪ್ರಸ್ತುತಿಯವರೆಗೂ ಕಾಯ್ದುಕೊಳ್ಳಲಾದ ಬಿಗುತನ!
ಶುದ್ಧ ಧನ್ಯಾಸಿ (ಪಾಲಯಮಾಂ) ಸ್ವರಜತಿಯ ಅನಂತರ ಎತ್ತಿಕೊಳ್ಳಲಾದ
ವಸಂತ (ಸೀತಮ್ಮ) ಕೃತಿಯಲ್ಲಿ ಗಾಯಕಿಯ ಪ್ರಯೋಗಶೀಲತೆ ಎದ್ದುಕಂಡಿತು. ರೂಢಿಗತವಾದ ನ್ಯಾಸ ಸ್ವರಗಳು ಮಾತ್ರವಲ್ಲದೆ ಇತರ ಸ್ವರ ಮೆಟ್ಟಿಲುಗಳಲ್ಲಿ ನಿಂತು, ಅವುಗಳ ಸುತ್ತ ಸಂಚರಿಸುತ್ತ ರಾಗದ ಬೇರೆ ಬೇರೆ ಆಯಾಮಗಳನ್ನು ಈ ಕಲಾವಿದೆ ತೆರೆದಿಟ್ಟರು. ಮುಂದೆ ಅನುಪಲ್ಲವಿಯಲ್ಲಿ ನೆರವಲ್, ಸ್ವರ ಕಲ್ಪನೆಗಳನ್ನು ನೀಡಿದ ಕಾರಣ ಮುಂದೆ ಹಾಡಲಾದ ಚರಣ ತುಸು ಸಪ್ಪೆಯೆನಿಸಿತು.
ಪ್ರಧಾನ ರಾಗ
ಹೇಮವತಿಯ (ಶ್ರೀ ಕಾಂತಿಮತಿ) ಪ್ರತಿಯೊಂದು ಸಂಚಾರ ಮಾರ್ಗಗಳ ಸ್ವರಗಳಿಗೂ ಸೂಕ್ತವಾದ ಗಮಕಗಳ, ಮೂರ್ಛನೆಗಳ ಯಾ ಬಿರ್ಕಾಗಳ ಅಲಂಕಾರದಿಂದ ನ್ಯಾಯ ಒದಗಿಸಿದ ಕಲಾವಿದೆ, ಕೃತಿ ನಿರೂಪಣೆಯ ಅನಂತರ ವಿದ್ವತ್ಪೂರ್ಣವಾದ ಸ್ವರವಿನಿಕೆಗಳನ್ನು ನೀಡಿದರು.
ನೀಲಾಂಬರಿ (ಸುಂದರತರ),
ನಾದನಾಮಕ್ರಿಯೆ (ಕರುಣಾ ಜಲದೇ),
ಶಿವರಂಜಿನಿ (ತೊರೆದು ಜೀವಿಸಿ) ರಚನೆಗಳು ರಾಗ ಮತ್ತು ಸಾಹಿತ್ಯ ಭಾವಕ್ಕೆ ಅನುಗುಣವಾಗಿದ್ದು ಮನೋಜ್ಞವಾಗಿ ಮೂಡಿಬಂದವು.
ಈ ಗಾಯಕಿಯ ಕಂಠ ತಾರಸ್ಥಾಯಿ ಸಂಚಾರಗಳಿಗಿಂತಲೂ ಮಧ್ಯ ಮತ್ತು ಮಂದ್ರ ಸ್ಥಾಯಿಗಳಲ್ಲೇ ಆಪ್ಯಾಯಮಾನವಾಗಿ ಮತ್ತು ಆಪ್ತವಾಗಿ ಧ್ವನಿಸುತ್ತದೆ. ಅಂತೆಯೇ ರಸಿಕರನ್ನು ತಲುಪುತ್ತದೆ. ಆದ ಕಾರಣ ಅವರು ಮಂದ್ರ ಸಂಚಾರಗಳಿಗೆ ಇನ್ನೂ ಹೆಚ್ಚಿನ ಆದ್ಯತೆ ನೀಡಲೆಂದು ಆಶಯ. ವಯಲಿನ್‌ನಲ್ಲಿ ಹದವರಿತು ಸಹಕರಿಸಿದ ಗಣರಾಜ ಕಾರ್ಲೆ ಮತ್ತು ಮೃದಂಗ ಸಹವಾದಕ ಅನಿರುದ್ಧ ಭಟ್ ಇಬ್ಬರೂ ಈ ಕಛೇರಿಯ ಯಶಸ್ಸಿನಲ್ಲಿ ಸಮಭಾಗಿಗಳಾಗಿದ್ದಾರೆ.
ಸರೋಜಾ ಆರ್. ಆಚಾರ್ಯ