ಪ್ಯಾರಿಸ್: ಮನು ಭಾಕರ್, ಸರಭ್ಜೋತ್ ಸಿಂಗ್ ಅವರ ಸಾಧನೆಯ ಬಳಿಕ ಇದೀಗ ಸ್ವಪ್ನಿಲ್ ಕುಸಾಲೆ ಪ್ಯಾರಿಸ್ ಶೂಟಿಂಗ್‌ನಲ್ಲಿ ಭಾರತದ ಪದಕದ ಕನಸು ಬಿತ್ತಿದ್ದಾರೆ. ಅವರು 50 ಮೀ. ರೈಫಲ್ 3 ಪೊಸಿಶನ್‌ನಲ್ಲಿ ಫೈನಲ್‌ಗೆ ಲಗ್ಗೆ ಹಾಕಿದ್ದು, ಗುರುವಾರ ಪದಕ ಸ್ಪರ್ಧೆ ನಡೆಯಲಿದೆ.
ಬುಧವಾರದ ಅರ್ಹತಾ ಸುತ್ತಿನಲ್ಲಿ ಸ್ವಪ್ನಿಲ್ ಕುಸಾಲೆ 7ನೇ ಸ್ಥಾನಿಯಾಗಿ ಫೈನಲ್ ಪ್ರವೇಶಿಸಿದರು. ಆದರೆ ಇದೇ ವಿಭಾಗದಲ್ಲಿದ್ದ ಭಾರತದ ಮತ್ತೋರ್ವ ಸ್ಪರ್ಧಿ ಐಶ್ವರಿ ಪ್ರತಾಪ್ ಸಿಂಗ್ ತೋಮರ್ 11ನೇ ಸ್ಥಾನಕ್ಕೆ ಕುಸಿದು ಫೈನಲ್ ಅರ್ಹತೆಯಿಂದ ವಂಚಿತರಾದರು.
ಸ್ವಪ್ನಿಲ್ ಕುಸಾಲೆ ಒಟ್ಟು 590 ಅಂಕ ಸಂಪಾದಿಸುವಲ್ಲಿ ಯಶಸ್ವಿಯಾದರು. ನೀಲಿಂಗ್ ಪೊಸಿಶನ್‌ನಲ್ಲಿ 198 ಅಂಕ (99, 99), ಪ್ರೋನ್‌ನಲ್ಲಿ 197 ಅಂಕ (98, 99) ಮತ್ತು ಸ್ಟಾಂಡಿಂಗ್ ಪೊಸಿಶನ್‌ನಲ್ಲಿ 195 ಅಂಕ (98, 97) ಗಳಿಸಿದರು. ಅರ್ಹತಾ ಸುತ್ತಿನಲ್ಲಿ ಒಟ್ಟು 44 ಶೂಟರ್‌ಗಳಿದ್ದರು. ಇವರಲ್ಲಿ ಅಗ್ರ 8 ಮಂದಿ ಫೈನಲ್ ಅರ್ಹತೆ ಸಂಪಾದಿಸಿದರು. ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಒಟ್ಟು ಗಳಿಕೆ 589 ಅಂಕ (197, 199 ಮತ್ತು 193).
ಚೀನದ ಲಿಯು ಯುಕುನ್ 594 ಅಂಕಗಳೊಂದಿಗೆ ಅಗ್ರಸ್ಥಾನ ಅಲಂಕರಿಸಿದರು. ನಾರ್ವೆಯ ಜಾನ್ ಹರ್‌ಮ್ಯಾನ್ ದ್ವಿತೀಯ (593) ಮತ್ತು ಉಕ್ರೇನ್‌ನ ಸೆರಿಹ್ ಕುಲಿಶ್ ತೃತೀಯ ಸ್ಥಾನ ಗಳಿಸಿದರು (592).
ಭರವಸೆಯ ಶೂಟರ್
29 ವರ್ಷದ ಸ್ವಪ್ನಿಲ್ ಕುಸಾಲೆ ಮಹಾರಾಷ್ಟ್ರ ದವರು. ಕೊಲ್ಹಾಪುರದಲ್ಲಿ ತೇಜಸ್ವಿನಿ ಸಾವಂತ್ ಅವರಿಂದ ತರಬೇತಿ ಪಡೆದಿದ್ದಾರೆ. ಇವರ ಮೊದಲ ಕೋಚ್ ದೀಪಾಲಿ ದೇಶಪಾಂಡೆ.
ಭೋಪಾಲ್‌ನಲ್ಲಿ ನಡೆದ ಕೊನೆಯ ಅರ್ಹತಾ ಸುತ್ತಿನಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಟಿಕೆಟ್ ಪಡೆದ ಸ್ವಪ್ನಿಲ್, 2015ರ ಕುವೈಟ್ ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ನ 50 ಮೀ. ರೈಫಲ್ ಪ್ರೋನ್ 3 ಜೂನಿಯರ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. 59ನೇ ಹಾಗೂ 61ನೇ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲೂ ಬಂಗಾರಕ್ಕೆ ಗುರಿ ಇರಿಸಿದ್ದಾರೆ. ಕಳೆದ ಏಷ್ಯಾಡ್‌ನಲ್ಲಿ 4ನೇ ಸ್ಥಾನಕ್ಕೆ ಕುಸಿದು ಪದಕ ವಂಚಿತರಾಗಿದ್ದರು.
ಧೋನಿಯಂತೆ ಟಿಕೆಟ್ ಕಲೆಕ್ಟರ್!
ಕೊಲ್ಹಾಪುರ ಸಮೀಪದ ಕಂಬಲ್ವಾಡಿ ಗ್ರಾಮದ ಮಹಿಳಾ ಸರಪಂಚರೊಬ್ಬರ ಮಗನಾಗಿರುವ ಸ್ವಪ್ನಿಲ್ ಕುಸಾಲೆ ಒಲಿಂಪಿಕ್ಸ್‌ನ 50 ಮೀ. ರೈಫಲ್ 3 ಪೊಸಿಶನ್‌ನಲ್ಲಿ ಫೈನಲ್ ತಲುಪಿದ ಭಾರತದ ಮೊದಲ ಶೂಟರ್. ಇವರಿಗೆ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಯೇ ಸ್ಫೂರ್ತಿ. ಕಾಕತಾಳೀಯವೆಂಬಂತೆ ಧೋನಿ ಅವರಂತೆ ಸ್ವಪ್ನಿಲ್ ಕೂಡ ಆರಂಭದ ದಿನಗಳಲ್ಲಿ ರೈಲ್ವೇ ಟಿಕೆಟ್ ಕಲೆಕ್ಟರ್ ಆಗಿದ್ದರು. 2015ರಲ್ಲಿ ಅವರು ಸೆಂಟ್ರಲ್ ರೈಲ್ವೇ ಉದ್ಯೋಗಿಯಾಗಿದ್ದರು.
ಧೋನಿ ಅವರ ಜೀವನಕಥನವನ್ನು ಅನೇಕ ಸಲ ವೀಕ್ಷಿಸಿದ ಸ್ವಪ್ನಿಲ್ ಮೇಲೆ ಈ ಚಾಂಪಿಯನ್ ಕ್ರಿಕೆಟಿಗ ಗಾಢ ಪ್ರಭಾವ ಬೀರಿದ್ದರು. ಆದರೆ, 2012ರಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಣಿಸಿಕೊಂಡರೂ ಒಲಿಂಪಿಕ್ಸ್ ಪ್ರವೇಶಕ್ಕಾಗಿ ಮತ್ತೆ 12 ವರ್ಷ ಕಾಯಬೇಕಾಯಿತು.
“ನಾನು ಶೂಟಿಂಗ್‌ನಲ್ಲಿ ಯಾರನ್ನೂ ಅನುಸರಿಸಿಲ್ಲ. ಅದರಾಚೆ ಹೇಳುವುದಾದರೆ ಧೋನಿ ನನ್ನ ಅಚ್ಚುಮೆಚ್ಚು ಹಾಗೂ ಸ್ಫೂರ್ತಿ. ಅವರ ಶಾಂತ ಸ್ವಭಾವ ನನಗಿಷ್ಟ. ಅವರ ಲೈಫ್ಸ್ಟೋರಿಯಿಂದ ಗಾಢ ಪ್ರಭಾವಿತನಾಗಿದ್ದೇನೆ. ಅವರಂತೆ ನಾನು ಕೂಡ ರೈಲ್ವೇಯಲ್ಲಿ ಟಿಕೆಟ್ ಕಲೆಕ್ಟರ್ ಆಗಿ ದುಡಿದಿದ್ದೆ’ ಎಂಬುದಾಗಿ ಸ್ವಪ್ನಿಲ್ ಹೇಳಿದರು.
ಪ್ಯಾರಿಸ್‌ನಲ್ಲಿ ರಾಷ್ಟ್ರೀಯ ಕೋಚ್ ಮನೋಜ್ ಕುಮಾರ್ ಒಹ್ಲಿಯಾನ್ ಅವರು ಸ್ವಪ್ನಿಲ್‌ಗೆ ಮಾರ್ಗದರ್ಶನ ನೀಡುತ್ತಿದ್ದಾರೆ.