ಹೊಸದಿಲ್ಲಿ: ಭಾರತದ ಸ್ವಪ್ನಿಲ್ ಕುಸಾಲೆ ಮತ್ತು ಆಶಿ ಚೌಕ್ಸಿ ಅವರು ಅಜರ್‌ಬೈಜಾನ್‌ನ ಬಾಕುನಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವ ಕಪ್ ರೈಫಲ್/ಪಿಸ್ತೂಲ್/ಶಾಟ್‌ಗನ್ ಸ್ಪರ್ಧೆಯ 50 ಮೀ. ರೈಫಲ್ ತ್ರಿ ಪೊಸಿಶನ್‌ನ ಮಿಕ್ಸೆಡ್ ತಂಡ ವಿಭಾಗದಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ. ಇಲ್ಲಿಗೆ ಭಾರತೀಯ ಶೂಟರ್‌ಗಳ ಅಭಿಯಾನ ಅಂತ್ಯಗೊಂಡಿತು.
ಸ್ವಪ್ನಿಲ್ ಮತ್ತು ಆಶಿ ಅವರು ಉಕ್ರೇನಿನ ಸೆಹಿì ಕುಲಿಶ್ ಮತ್ತು ದಾರಿಯಾ ಟಿಕೋವಾ ಅವರನ್ನು 16-12 ಅಂಕಗಳಿಂದ ಸೋಲಿಸಿ ಚಿನ್ನದ ಪದಕ ಗೆದ್ದರು. ಇದು ಈ ಕೂಟದಲ್ಲಿ ಭಾರತ ಗೆದ್ದ ಎರಡನೇ ಚಿನ್ನವಾಗಿದೆ. ಈ ಮೊದಲು ವನಿತೆಯರ 10 ಮೀ. ಏರ್ ರೈಫಲ್ ತಂಡ ಸ್ಪರ್ಧೆಯಲ್ಲಿ ಇಲಾವೆನಿಲ್ ವಲರಿವಾನ್, ಶ್ರೇಯಾ ಅಗರ್ವಾಲ್ ಮತ್ತು ರಮಿತಾ ಅವರು ಚಿನ್ನ ಜಯಿಸಿದ್ದರು.
ಎರಡು ಚಿನ್ನವಲ್ಲದೇ ಭಾರತೀಯ ಶೂಟರ್‌ಗಳು ಈ ಕೂಟದಲ್ಲಿ ಮೂರು ಬೆಳ್ಳಿಯ ಪದಕ ಜಯಿಸಿದ್ದರು. ಈ ಮೂಲಕ ಪದಕಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದರು. ಕೊರಿಯ ಅಗ್ರಸ್ಥಾನ ಪಡೆದಿದೆ.
ಬಾಕು ವಿಶ್ವಕಪ್‌ನಲ್ಲಿ ಇದು ಸ್ವಪ್ನಿಲ್ ಅವರ ಮೊದಲ ಚಿನ್ನ ಮತ್ತು ಒಟ್ಟಾರೆ ಮೂರನೇ ಪದಕವಾಗಿದೆ. ಅವರು ಪುರುಷರ ತ್ರಿ ಪೊಸಿಶನ್ ವೈಯಕ್ತಿಕ ಮತ್ತು ತಂಡ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಜಯಿಸಿದ್ದರು.