ನವದೆಹಲಿ: ಈ ಬಾರಿ ಏಷ್ಯನ್ ಗೇಮ್ಸ್‌ನ ಹೆಪಾrಥ್ಲಾನ್‌ನಲ್ಲಿ ಬಂಗಾಳದ ಸ್ವಪ್ನಾ ಬರ್ಮನ್ ಚಿನ್ನ ಗೆದ್ದಿದ್ದು ಎಲ್ಲರಿಗೂ ಗೊತ್ತು. ಈ ಕ್ರೀಡೆಯಲ್ಲಿ ಭಾರತಕ್ಕೆ ಬಂದ ಮೊದಲ ಏಷ್ಯಾಡ್ ಪದಕವಿದು. ಆದರೆ ಸರಿಯಾದ ಶೂಗಳಿಲ್ಲದೇ ಅತ್ಯಂತ ನೋವಿನಲ್ಲಿ ಬರ್ಮನ್ ಸ್ಪರ್ಧಿಸಿದ್ದರೆನ್ನುವುದು ಬಹುತೇಕರಿಗೆ ಗೊತ್ತಿಲ್ಲ. ಎರಡೂ ಪಾದಗಳಲ್ಲಿ 6 ಬೆರಳು ಹೊಂದಿರುವ ಬರ್ಮನ್‌ಗೆ ಬೇಕಾದಂತಹ ರೀತಿಯಲ್ಲಿ ಶೂ ತಯಾರಿಸಿಕೊಡಲು ಯಾವ ಕಂಪನಿಯೂ ಮನಸ್ಸು ಮಾಡಿರಲಿಲ್ಲ. ಇದೀಗ ಅಡಿಡಾಸ್ ಕಂಪನಿ ಆ ಹೊಣೆ ಹೊತ್ತುಕೊಂಡಿದ್ದು ಬರ್ಮನ್‌ಗೆ 7 ಜೊತೆ ಶೂ ನೀಡುವುದಾಗಿ ಘೋಷಿಸಿದೆ.
ಮಾಮೂಲಿಯಾಗಿ ಉತ್ಪಾದನೆಯಾಗುವ ಶೂಗಳು ಬರ್ಮನ್‌ಗೆ ಹೊಂದುವುದಿಲ್ಲ. ಎರಡೂ ಪಾದದಲ್ಲಿ ಒಂದು ಬೆರಳು ಹೆಚ್ಚಾಗಿರುವುದರಿಂದ ಇಂತಹ ಸ್ಥಿತಿ. ಅದಕ್ಕೆ ಪ್ರತ್ಯೇಕವಾಗಿ ಬರ್ಮನ್‌ಗಾಗಿಯೇ ತಯಾರಿಸಲ್ಪಟ್ಟ ಶೂಗಳು ಬೇಕು. ಏಷ್ಯಾಡ್ ಮುಗಿದು ಬರ್ಮನ್ ಚಿನ್ನ ಗೆದ್ದ ಮೇಲೆ ಈ ಸಮಸ್ಯೆ ಮುಗಿಯುವ ಲಕ್ಷಣ ಕಂಡಿದೆ. ಬರ್ಮನ್ ಜರ್ಮನಿಗೆ ತೆರಳಿ ಅಡಿಡಾಸ್ ಲ್ಯಾಬ್‌ನಲ್ಲಿ ಪಾದ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.
ಸ್ವಪ್ನಾ ದೇಶದ ಹೆಮ್ಮೆ. ಆಕೆಗೆ ನೆರವು ನೀಡುವುದು ನಮ್ಮ ಕರ್ತವ್ಯ ಎಂದು ಅಡಿಡಾಸ್ ತಿಳಿಸಿದೆ. ಹೆಪಾrಥ್ಲಾನ್‌ನಲ್ಲಿ 7 ರೀತಿಯ ಕ್ರೀಡೆಗಳಿರುತ್ತವೆ. 7ರಲ್ಲೂ ನೀಡುವ ಒಟ್ಟಾರೆ ಫಲಿತಾಂಶ ಗಮನಿಸಿ ಪದಕ ನೀಡಲಾಗುತ್ತದೆ. ಅಡಿಡಾಸ್ ಏಳೂ ಕ್ರೀಡೆಗೆ ಪ್ರತ್ಯೇಕವಾಗಿ ಅನುಕೂಲವಾಗುವಂತೆ 7 ಪ್ರತ್ಯೇಕ ಶೂಗಳನ್ನು ತಯಾರಿಸುತ್ತಿದೆ. ಇನ್ನಾದರೂ ಬರ್ಮನ್ ದುಸ್ಥಿತಿ ನಿವಾರಣೆಯಾಗುತ್ತದೆನ್ನುವುದು ಕ್ರೀಡಾಭಿಮಾನಿಗಳಿಗೆ ಸಂತಸದ ವಿಷಯ.
ಏಷ್ಯಾಡ್‌ಗೂ ಮುನ್ನ ಬರ್ಮನ್ ಪಾದದ ಸ್ಥಿತಿ ಸುದ್ದಿಯಾಗಿತ್ತು. ಅತ್ಯಂತ ಹಳೆಯ ಶೂಗಳಲ್ಲಿ ಅವರು ಸ್ಪರ್ಧೆ ನಡೆಸಿದ್ದರು. ಕೆಲವು ಗೆಳೆಯರು ಆಕೆಗೆ ಈ ಬೆರಳನ್ನು ಕತ್ತರಿಸಿ ತೆಗೆಯಲೂ ಸಲಹೆ ನೀಡಿದ್ದರು. ಎಲ್ಲ ಸಮಸ್ಯೆಯನ್ನು ನುಂಗಿಕೊಂಡು ಪದಕ ಗೆದ್ದ ಬರ್ಮನ್ ತಮ್ಮ ಬೆರಳನ್ನು ಉಳಿಸಿಕೊಳ್ಳುವುದರ ಜೊತೆಗೆ ತಮಗೆ ಬೇಕಾದ ರೀತಿಯ ಶೂ ಪಡೆಯಲು ಯಶಸ್ವಿಯಾಗಿದ್ದಾರೆ.