ಕಲಬುರಗಿ: ಡಾ| ಎಂ.ಎಸ್. ಸ್ವಾಮಿನಾಥನ್ ವರದಿ ಜಾರಿಗೆ ಒತ್ತಾಯಿಸಿ ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ರೈತ ಸಮ್ಮೇಳನದ ಅಂಗವಾಗಿ ನಗರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಿತು.
ತೊಗರಿಗೆ ಪ್ರತಿ ಕ್ವಿಂಟಾಲ್‌ಗೆ 7500 ರೂ.ಗಳ ಬೆಂಬಲ ಬೆಲೆ ಘೋಷಿಸಬೇಕು, ರೈತರು ಬೆಳೆದ ಎಲ್ಲ ತೊಗರಿಯನ್ನು ಖರೀದಿಸುವಂತೆ, ಬೆಳೆ ವಿಮೆಯನ್ನುರೈತರಿಗೆ ಅನುಕೂಲವಾಗುವಂತೆ ಜಾರಿಗೆ ತರಬೇಕು, ರೈತರ ಸಾಲ ಮನ್ನಾ ಮಾಡಬೇಕು, ಬಡವರು ಉಳುಮೆ ಮಾಡುತ್ತಿರುವ ಜಮೀನಿನ ಹಕ್ಕುಪತ್ರ ವಿತರಿಸಬೇಕು,
ನರೇಗಾ ಯೋಜನೆಯಡಿ 200 ದಿನಗಳ ಕೆಲಸಕ್ಕಾಗಿ 300 ರೂ.ಗಳ ಕೂಲಿ ಹೆಚ್ಚಿಸಬೇಕು, ಮುಪ್ಪಾದ ರೈತರು ಹಾಗೂ ಕೂಲಿ ಕಾರ್ಮಿಕರಿಗೆ 3000 ರೂ. ಮಾಸಾಶನ ನೀಡಬೇಕು, ನಿವೇಶನ ರಹಿತರಿಗೆ ಮನೆ ಹಾಗೂ ನಿವೇಶನ ಒದಗಿಸುವಂತೆ ರೈತರು ಆಗ್ರಹಿಸಿದರು. ನೆಹರೂ ಗಂಜ್‌ನಲ್ಲಿ ಬಹಿರಂಗ ಸಭೆ ನಡೆಯಿತು.
ಮಾಜಿ ಶಾಸಕ ಶೀÅರಾಮರೆಡ್ಡಿ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ಮಾತನಾಡಿ, ರೈತರ ನೆರವಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬರುತ್ತಿಲ್ಲ. ಉಭಯ ಸರ್ಕಾರಗಳು ಜನವಿರೋಧಿ ನೀತಿ ಅನುಸರಿಸುತ್ತಿವೆ ಎಂದು ತರಾಟೆಗೆ ತೆಗೆದುಕೊಂಡರು.
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ನೇತೃತ್ವದಲ್ಲಿ ನಗರದ ಜಗತ್ ವೃತ್ತದಿಂದ ನೆಹರೂ ಗಂಜ್‌ವರೆಗೆ ನಡೆದ ಮೆರವಣಿಗೆಯಲ್ಲಿ ಶರಣಬಸಪ್ಪ ಮಮಶೆಟ್ಟಿ, ಶಾಂತಪ್ಪ ಪಾಟೀಲ, ವಿಠಲ ಆಲಗೂಡೆ, ಮಲ್ಲಣ್ಣಗೌಡ ಪಾಟೀಲ, ಸಿದ್ದಾರ್ಥ ಠಾಕೂರ ಚಿಂಚೋಳಿ, ದೇವಿಂದ್ರಪ್ಪ ಪಾಟೀಲ ಕೊರವಿ, ಲಕೀಪುತ್ರ ಹೇಮಾಜಿ ಆಳಂದ,
ಕಲ್ಯಾಣಿ ತುಕ್ಕಾಣಿ, ಸಾಯಬಣ್ಣ ಗುಡಬಾ ಚಿತ್ತಾಪುರ, ರಸೂಲ್ ಪಟೇಲ್, ಅಶೋಕ ಮ್ಯಾಗೇರಿ, ಗ್ರಾ.ಪಂ.ನೌಕರರ ಸಂಘದ ಅಧ್ಯಕ್ಷ ಬಾಬುರಾವ್ ಧುತ್ತರಗಾಂವ, ಸಿಐಟಿಯುನ ಗಂಗಮ್ಮಾ ಬಿರಾದಾರ, ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ಶಾಂತಾ ಘಂಟಿ, ಆನಂದ ಎನ್.ಜೆ., ರಾಮು, ಪವನಕುಮಾರ ಹಾಗೂ ಇತರರಿದ್ದರು.