Advertisement

ಸ್ವಾಮಿ ವಿವೇಕಾನಂದ ಅಕ್ಕ, ನಿವೇದಿತಾ ಸಾ.ಸಮ್ಮೇಳನಕ್ಕೆ ಸಿದ್ಧತೆ

03:45 AM Feb 10, 2017 | Team Udayavani |

ಮಂಗಳೂರು: ಸ್ವಾಮಿ ವಿವೇಕಾನಂದ, ಅಕ್ಕ ನಿವೇದಿತಾರ ಸಾಧನೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಮಂಗಳೂರಿನ ಕೇಂದ್ರ ಮೈದಾನಿನಲ್ಲಿ ಫೆ.11 ಮತ್ತು 12ರಂದು ಹಮ್ಮಿಕೊಂಡಿರುವ ಸಾಹಿತ್ಯ ಸಮ್ಮೇಳನದ ಪೂರ್ವ ಸಿದ್ಧತೆಗಳು ಅಂತಿಮ ಹಂತದಲ್ಲಿವೆ ಎಂದು ಯುವ ಬ್ರಿಗೇಡ್‌ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.

Advertisement

ಅವರು ಗುರುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ಯುವ ಬ್ರಿಗೇಡ್‌ ಸಂಸ್ಥೆ ತನ್ನ ಸೋದರಿ ಸಂಸ್ಥೆಯಾದ ನಿವೇದಿತಾ ಪ್ರತಿಷ್ಠಾನದೊಂದಿಗೆ ಸೇರಿ ನಿವೇದಿತಾ ಅವರ‌ 150 ನೇ ಜಯಂತಿಯನ್ನು ಆಚರಿಸುವ ವಿಶೇಷ ಪ್ರಯತ್ನ ಮೊದಲ ಬಾರಿಗೆ ಮಂಗಳೂರಿನಲ್ಲಿ ನಡೆಯುತ್ತಿದೆ. ಮಾತಾಜಿ ಯತೀಶ್ವರಿ ಕೃಷ್ಣಪ್ರಿಯ ಅಂಬಾಜಿ ಅವರು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿ ಸುವರು ಎಂದರು.

ಫೆ.11 ರಂದು ಬೆಳಗ್ಗೆ 9 ಗಂಟೆಗೆ ವಿವೇಕ-ನಿವೇದಿತೆಯರ ಸಾಹಿತ್ಯದ ಪಲ್ಲಕ್ಕಿ ಉತ್ಸವದೊಂದಿಗೆ ಆರಂಭಗೊಳ್ಳುವ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 500ಕ್ಕೂ ಅಧಿಕ ಯುವಕ, ಯುವತಿಯರು ಭಾಗವಹಿಸುವರು. ಅಲ್ಲದೆ ಮಂಗಳೂರು ಪರಿಸರದ 500 ಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಗೋಷ್ಠಿಗಳಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿವರಿಸಿದರು.

ಸಂಜೆ 6.30 ಕ್ಕೆ ನಡೆಯುವ “ನರೇಂದ್ರ ಭಾರತ’ ಕಾರ್ಯ ಕ್ರಮದಲ್ಲಿ ಸಮಾಜಕ್ಕಾಗಿ ಬದುಕಿದ ಅನೇಕ ಸಾಧಕರನ್ನು ಪರಿಚಯಿಸಲಾಗುವುದು. ಚಿತ್ರ ನಿರ್ದೇಶಕ, ನಟ ರಕ್ಷಿತ್‌ ಶೆಟ್ಟಿ ವಿಶೇಷ ಅತಿಥಿಯಾಗಿರುವರು. ಆದಿಚುಂಚನ ಗಿರಿ ಪೀಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡುವರು. ಸುಮಾರು 10 ಕಾಲೇಜುಗಳಲ್ಲಿ ಏಕಕಾಲದಲ್ಲಿ ನಿವೇದಿತಾ ಜಯಂತಿ ನಡೆಯಲಿದೆ. 

ಸಮ್ಮೇಳನದಲ್ಲಿ ಐದು ವಿಶೇಷ ಗೋಷ್ಠಿಗಳು ಜರಗಲಿದ್ದು, ಸಂವೇ ದನಾ ಮಕ್ಕಳೊಂದಿಗೆ ಮತ್ತು ಬಾಲಿಕಾಶ್ರಮ ಅಂಧರ ಶಾಲೆಯ ಮಕ್ಕಳೊಂದಿಗೆ ಪ್ರೇಮಪ್ರಸಾದ ಎಂಬ ವಿಶೇಷ ಕಾರ್ಯಕ್ರಮ ನಡೆಯಲಿದೆ. ವಿವೇಕಾನಂದರ ಮತ್ತು ನಿವೇದಿತಾ ಅವರ ವಿಚಾರಧಾರೆಯ ಕುರಿತು ನಿರ್ಮಿತವಾಗಿರುವ ವಿಶಿಷ್ಟ ವಸ್ತು ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
29×16 ಅಡಿಯ ವಿವೇಕಾನಂದರ ಕೊಲಾಜ್‌ ವಿಶ್ವದಲ್ಲೇ ಅತಿ ದೊಡ್ಡದಾಗಿರ ಬಹುದೆಂಬ ನಿರೀಕ್ಷೆ ಇದೆ. ಇದರ ಜತೆಗೆ ವೇದಿಕೆಯ ಮೇಲೆ 108 ಸೂರ್ಯ ನಮಸ್ಕಾರವನ್ನು ಕೇವಲ 10 ನಿಮಿಷಗಳಲ್ಲಿ ಪೂರೈಸಿ ದಾಖಲೆ ಮಾಡಲಿರುವ ನಿರಂಜನ್‌ ಶೆಟ್ಟಿ ಪ್ರದರ್ಶನ ನೀಡುವರು. ಈ ಸಂದರ್ಭ ಯುವಾ ಬ್ರಿಗೇಡ್‌ ಹೊರ ತಂದಿರುವ “ಗುರು-ಶಿಷ್ಯೆ’ ಮತ್ತು “ಸಾಗರದಾಚೆಯ ವಿವೇಕಾನಂದ’ ಪುಸ್ತಕ ಬಿಡುಗಡೆಯಾಗಲಿದೆ ಎಂದು ಅವರು ಹೇಳಿದರು.

Advertisement

ಯುವಬ್ರಿಗೇಡ್‌ ರಾಜ್ಯ ಸಂಚಾಲಕ ನಿತ್ಯಾನಂದ ವಿವೇಕವಂಶಿ, ಮಂಗಳೂರು ವಿಭಾಗ ಸಂಚಾಲಕ್‌ ಮಂಜಯ್ಯ ನೇರಂಕಿ, ನಿವೇದಿತಾ ಪ್ರತಿಷ್ಠಾನದ ಸ್ವಾತಿ, ಸಾಹಿತ್ಯ ಸಮ್ಮೇಳನದ ಸಮಿತಿ ಸಂಚಾಲಕ ಗಿರಿಧರ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next