Advertisement

ಅದಮ್ಯ ವಿವೇಕ ಆತ್ಮ ನಿರ್ಭರ ಭಾರತ

01:11 AM Jan 12, 2021 | Team Udayavani |

ಸ್ವಾಮಿ ವಿವೇಕಾನಂದರು ಯುವ ಪೀಳಿಗೆಯ ಮೇಲೆ ಅತಿಯಾದ ಕಾಳಜಿ ಮತ್ತು ವಿಶ್ವಾಸ ಹೊಂದಿದ್ದರು. ಯುವಶಕ್ತಿಯ ಮೇಲೆ ಅಪಾರವಾದ ನಂಬಿಕೆ ಅವರಿಗಿತ್ತು. ನೀವು ಎಂದಿಗೂ ಪರಾವಲಂಬಿಗಳಲ್ಲ, ನಿಮ್ಮ ಬದುಕಿನ ಶಿಲ್ಪಿಗಳು ನೀವೇ ಎಂಬ ಸ್ವಾಮೀಜಿ ಸಂದೇಶ ಎಂದೆಂದಿಗೂ ಯುವ ಮನಸ್ಸುಗಳನ್ನು ಜಾಗೃತಗೊಳಿಸುವಂಥದ್ದು.

Advertisement

ದೇಶವನ್ನು ಮುನ್ನಡೆಸಲು ಸಶಕ್ತವಾದ ಯುವಪಡೆ ಯನ್ನು ನಿರ್ಮಿಸುವುದೇ ನನ್ನ ಜೀವನದ ಗುರಿ. ಮಾನಸಿಕ, ದೈಹಿಕ, ಆಧ್ಯಾತ್ಮಿಕ, ನೈತಿಕ ಮತ್ತು ಸಾಮಾಜಿಕವಾಗಿ ಎಂದೂ ಶಕ್ತಿ ಕಳೆದು ಕೊಳ್ಳಬಾರದು ಎಂದು ವಿವೇಕಾನಂದರು ಕರೆ ನೀಡಿದ್ದರು. ವಿಶ್ವದ ಅನೇಕ ಜನ ಇಂದು ಭಾರತದ ಸಂಸ್ಕೃತಿ, ಹಿಂದೂ ಪರಂಪರೆಯ ಬಗ್ಗೆ ಗೌರವದಿಂದ ಕಾಣಲು ಹಾಗೂ ಅದರ ಬಗ್ಗೆ ಅಧ್ಯಯನ ನಡೆಸಲು ಮುಂದಾಗುತ್ತಿ ರುವುದಕ್ಕೆ ಕಾರಣ ವಿವೇಕವಾಣಿ.

ಸ್ವಾಮಿ ವಿವೇಕಾನಂದ ಅವರೂ ಸ್ವಾವ ಲಂಬನೆಯನ್ನು ಪ್ರತಿಪಾದಿಸಿದವರು. ಮುಖ್ಯವಾಗಿ ಸ್ವತಂತ್ರ ಪ್ರವೃತ್ತಿಯನ್ನು ಬೆಳೆಸಲು ಕರೆ ಕೊಟ್ಟವರು. ಮಕ್ಕಳಿಗೆ ಶಿಕ್ಷಣ ನೀಡುವಾಗಲೂ ಸ್ವತಂತ್ರ ವಾಗಿ ಯೋಚಿಸಲು ಪ್ರೋತ್ಸಾಹಿಸ ಬೇಕು. ಸ್ವತಂತ್ರ ಆಲೋಚನೆಯೇ ಭಾರತದ ಉಜ್ವಲ ಭವಿಷ್ಯಕ್ಕೆ ನಾಂದಿ ಎಂದಿದ್ದರು.

ಭಾರತವು ಸ್ವಾವಲಂಬಿಯಾಗಬೇಕು, ನಮ್ಮಲ್ಲಿ ಅಡಗಿರುವ ಪ್ರತಿಭೆ, ಕಲೆ, ಕೌಶಲ ಸಂಪಾದನೆಯ ಮೂಲವಾಗಿ ಬದುಕನ್ನು ಬೆಳಗಬೇಕು, ವಿದೇಶಿ ವಸ್ತುಗಳ ನಡುವೆ ದೇಶೀಯ ವಸ್ತುಗಳು ಬಹಳಷ್ಟು ಅಗ್ಗವೆನಿಸಿ ಸ್ವದೇಶಿ ಉದ್ದಿಮೆಗಳು ಯಶಸ್ಸು ಕಾಣಬೇಕು ಎನ್ನುವುದು ಅವರ ಕನಸು. ಅದೆಷ್ಟೋ ವಸ್ತುಗಳ ತಯಾರಿಕೆಯಲ್ಲಿ, ಉದ್ದಿಮೆಗಳಲ್ಲಿ ವಿದೇಶಿ ಸರಕುಗಳನ್ನು ನೆಚ್ಚಿಕೊಂಡಿರುವ ನಾವು ಸ್ವದೇಶಿ ಉದ್ಯಮಗಳನ್ನು ಕಟ್ಟಿದರೆ ಯಶಸ್ಸು ಸಾಧ್ಯ. ಇದು ವಿವೇಕರ ಆಶಯಕ್ಕೆ ಪೂರಕ.

ಯುವ ಜನತೆ ನಿರ್ಣಾಯಕ : 

Advertisement

ಯಾವುದೇ ದೇಶದ ಅಭಿವೃದ್ಧಿಯಲ್ಲಿ ಅಲ್ಲಿಯ ಯುವಶಕ್ತಿಯ ಕೊಡುಗೆ ನಿರ್ಣಾಯಕ. ಯುವಶಕ್ತಿಯನ್ನು ಸರಿಯಾದ ರೀತಿಯಲ್ಲಿ ಬಳಸಿದಾಗ ಮಾತ್ರ ಇದು ಸಾಧ್ಯ.ಯುವಕರೇ ದೇಶದ ಶಕ್ತಿ. ಇವರು ತಮ್ಮ ಇಚ್ಛಾಶಕ್ತಿ, ಸಂಕಲ್ಪಶಕ್ತಿ, ಕ್ರಿಯಾಶಕ್ತಿಗಳನ್ನು ಬಳಸಿ, ಸೃಜನಶೀಲತೆಯಿಂದ ಮುಂದುವರಿದರೆ ದೇಶದ ಸಂಪತ್ತಾಗುತ್ತಾರೆ. ಇವರು ಇಡುವ ಪ್ರತಿಯೊಂದು ಹೆಜ್ಜೆಯಲ್ಲೂ ದೇಶದ ಭವಿಷ್ಯ ಅಡಗಿದೆ ಎಂಬ ಮಾತು ಚಿರಸತ್ಯ. ಶಕ್ತಿಶಾಲಿ, ಉತ್ಸಾಹಿ, ಚೈತನ್ಯಯುಕ್ತ ಯುವಜನರಿಂದಲೇ ನಾಡುಕಟ್ಟುವ ಕಾರ್ಯವಾಗಬೇಕು.

“ಒಂದು ಭಾವನೆಯನ್ನು ತೆಗೆದು ಕೊಂಡು, ಅದನ್ನು ಜೀವನದಲ್ಲಿ ಅಭ್ಯಾಸ ಮಾಡಿ. ಅದನ್ನೇ ಆಲೋಚನೆ ಮಾಡಿ, ಅದನ್ನೇ ಕನಸು ಕಾಣಿ’ ಎಂದು ಯುವಜನರಿಗೆ ಕರೆ ಕೊಟ್ಟವರು ಸ್ವಾಮಿ ವಿವೇಕಾನಂದರು. “ಸ್ವಾವಲಂಬನೆ’ಯ ಭಾವನೆ ನಮ್ಮದಾಗಬೇಕು.  ಅದೇ ನಮ್ಮ ಆಲೋಚನೆಯಾಗಬೇಕು, ಆದೇ ಕನಸನ್ನು ಕಾಣಬೇಕು.

ಸ್ವಾವಲಂಬನೆ ಬಿತ್ತುವುದು ಹೇಗೆ? :

ಸ್ವಾವಲಂಬಿ ಬದುಕಿನ ನಿರ್ಮಾಣಕ್ಕೆ ವಿವೇಕಾ ನಂದರ ಚಿಂತನೆಯನ್ನು ಅಳವಡಿಸಿ ಕೊಳ್ಳುವಲ್ಲಿ ಭಾರತೀಯ ಶಿಕ್ಷಣ ಕ್ಷೇತ್ರ ವಿಫ‌ಲವಾಯಿತು. ನಮ್ಮ ನಡುವಿನ ಅದೆಷ್ಟೋ ಮಂದಿಗಳಲ್ಲಿ ವಿಶೇಷ ಕಲೆ, ಪ್ರತಿಭೆಗಳಿದ್ದರೂ ಅವು ಹವ್ಯಾಸಕ್ಕೆ ಸೀಮಿತವಾಗಿದೆ. ಕುಲಕಸುಬುಗಳು, ವಿಶಿಷ್ಠ ಕಲೆಯ ನೈಪುಣ್ಯ, ಜೀವನಾಧಾರದ ಉದ್ಯಮವಾಗಿಲ್ಲ. ವೃತ್ತಿಪರತೆ, ಕ್ರಿಯಾಶೀಲತೆ  ಹಾಗೂ ಕೌಶಲದ ಅಭಿವೃದ್ಧಿ ಯೊಂದಿಗೆ ನಮ್ಮ ನೆಲದ ತಣ್ತೀ ಸಿದ್ಧಾಂತಗಳು ಬೆಸೆದು ಕೊಂಡರೆ ಸ್ವದೇಶಿ ಉದ್ದಿಮೆಗಳು ಜಾಗತಿಕ ಮಟ್ಟದಲ್ಲಿ ಅಗ್ರಪಂಕ್ತಿಯಲ್ಲಿ ಗುರುತಿಸಿಕೊಂಡು ಆತ್ಮನಿರ್ಭರ ಭಾರತ ಎಂಬ ಪರಿಕಲ್ಪನೆ ಸಾರ್ಥಕವಾದೀತು.

ಅಳಸಿಂಗ ಎಂಬ  ಪ್ರಾಣ ಸ್ನೇಹಿತ  :

ಅಳಸಿಂಗ ಪೆರುಮಾಳ್‌ ಅವರು ವಿವೇಕಾನಂದರ ಜೀವನದ ಮಹಾತಿರುವಿಗೆ ಕಾರಣರಾದವರು. ಸರ್ವಧರ್ಮ ಸಮ್ಮೇಳನಕ್ಕೆ ಹೋಗಬೇಕೋ, ಬೇಡವೋ ಎಂಬ ಬಗ್ಗೆ ಗೊಂದಲದಲ್ಲಿದ್ದಾಗ ಒಪ್ಪಿಸಿ, ಹಣ ಸಂಗ್ರಹಿಸಿ ಕೊಟ್ಟಿದ್ದೂ ಅಳಸಿಂಗ ಪೆರುಮಾಳರೇ.

ಆದರೆ ಪೆರುಮಾಳ್‌ ಅವರನ್ನು ಕರ್ನಾಟಕ ಸರಕಾರ ಸೇರಿದಂತೆ ಎಲ್ಲರೂ ಮರೆತಿದ್ದಾರೆ. ಚಿಕ್ಕಮಗಳೂರು ನಗರದ ಬಸವನಹಳ್ಳಿಯಲ್ಲಿ ಅಳಸಿಂಗರು ಹುಟ್ಟಿದ್ದರು.ಈಗ ಆ ಪ್ರದೇಶದಲ್ಲಿ ಅವರ ಮನೆಯಿತ್ತು ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಸರಕಾರಗಳೂ ಆ ಪ್ರಯತ್ನವನ್ನೇ ಮಾಡಲಿಲ್ಲ. ಅಳಸಿಂಗರ ಪೂರ್ವಿಕರು ಮೂಲತಃ ಮಂಡ್ಯದವರು. ಪೆರುಮಾಳರ ತಂದೆ ಮಂಡಯಂ ಚಕ್ರವರ್ತಿ ನರಸಿಂಹಾಚಾರ್ಯರು ಗುಮಾಸ್ತ ಹುದ್ದೆಯಲ್ಲಿದ್ದು ಚಿಕ್ಕಮಗಳೂರಿಗೆ ಬಂದರು. ಅಲ್ಲಿಯೇ ಹುಟ್ಟಿದ್ದು ಪೆರುಮಾಳ್‌. ಆ ಬಳಿಕ ಪೆರುಮಾಳ್‌ ಕುಟುಂಬ ಉದ್ಯೋಗ ನಿಮಿತ್ತ ತಮಿಳುನಾಡಿಗೆ ಹೋಯಿತು. ಇಲ್ಲಿಯೇ 1892ರಲ್ಲಿ ವಿವೇಕಾನಂದ ಮತ್ತು ಅಳಸಿಂಗರ ಭೇಟಿಯಾದದ್ದು ಮನ್ಮಥಾನಾಥ ಭಟ್ಟಾಚಾರ್ಯ ಎಂಬವರ ಮನೆಯಲ್ಲಿ. ಅಲ್ಲಿಂದಲೇ ನಿಕಟಗೊಂಡ ಸಂಬಂಧ ಅವರ ಸಾವಿನವರೆಗೂ ಮುಂದುವರೆಯಿತು.

ವಿವೇಕಾನಂದರು ಅಮೆರಿಕದ ಭಾಷಣದ ಅನಂತರ ಜಗದ್ವಿಖ್ಯಾತರಾದರು. ಅಳಸಿಂಗರ ಪ್ರಯತ್ನದಿಂದ ಬೆಂಗಳೂರಿನಲ್ಲೂ ಅಂಥದೊಂದು ಸಭೆ ಏರ್ಪಾಟಾಗಿ ವಿವೇಕಾನಂದರನ್ನು ಅಭಿನಂದಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next