ನವದೆಹಲಿ:ಸ್ವಾಮಿ ವಿವೇಕಾನಂದ ಅವರ ಜನ್ಮ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ(ಜನವರಿ 12, 2021) ಎರಡನೇ ರಾಷ್ಟ್ರೀಯ ಯುವ ಸಂಸತ್ ಉತ್ಸವ ಬೀಳ್ಕೊಡುಗೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತ, ಈ ದಿನ ಭಾರತದ ಯುವಕರಿಗೆ ಹೊಸ ಬೆಳಕು ನೀಡಲಿದೆ ಎಂದು ಹೇಳಿದರು.
“ಸ್ವಾಮಿ ವಿವೇಕಾನಂದ ಪ್ರತಿಯೊಬ್ಬರಿಗೂ ಸ್ಫೂರ್ತಿ, ಅವರು ಭಾರತದ ಸಾಮರ್ಥ್ಯವನ್ನು ನೆನಪಿಸಿದ್ದರು. ಅಲ್ಲದೇ ಅವರು ಪ್ರತಿಯೊಬ್ಬರನ್ನು ಬಡಿದೆಬ್ಬಿಸಿದ್ದರು. ವಿವೇಕಾನಂದರಿಗೆ ಆಧುನಿಕ ಭಾರತದ ಬಗ್ಗೆ ಸ್ಪಷ್ಟ ಕಲ್ಪನೆ ಇತ್ತು” ಎಂದು ಮೋದಿ ತಿಳಿಸಿದರು.
ಆಯ್ದ ಯುವ ಸಂಸತ್ ನ ಅಭ್ಯರ್ಥಿಗಳನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ನಲ್ಲಿ ಪ್ರಧಾನಿ ಮಾತನಾಡಿದ್ದರು. ವಿವೇಕಾನಂದ ಜಯಂತಿ ನಿಟ್ಟಿನಲ್ಲಿ ಮೊದಲ ಮೂವರು ಮಂದಿ ಬಹುಮಾನತರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶ ನೀಡಲಾಗಿದೆ ಎಂದು ವರದಿ ತಿಳಿಸಿದೆ.
ಮೂವರು ವಿಜೇತರ ದೃಷ್ಟಿಕೋನವನ್ನು ನಾನು ನೇರವಾಗಿ ನನ್ನ ಟ್ವಿಟರ್ ನಲ್ಲಿ ಟ್ವೀಟ್ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಘೋಷಿಸಿದ್ದಾರೆ. ಈ ಸಮಾರಂಭದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಸೇರಿದಂತೆ ಕೆಲವು ಗಣ್ಯರು ಉಪಸ್ಥಿತರಿದ್ದರು.
ಆಧುನಿಕ ಶಿಕ್ಷಣದ ಸೇರಿದಂತೆ ನಾವು ಪ್ರತಿಯೊಂದು ಕ್ಷೇತ್ರದಲ್ಲಿಯೂ ಪರಿಸರ ಸ್ನೇಹಿ ವ್ಯವಸ್ಥೆಯನ್ನು ಅಭಿವೃದ್ದಿಪಡಿಸುತ್ತಿದ್ದೇವೆ. ಯುವ ಪೀಳಿಗೆ ವಿದೇಶಕ್ಕೆ ತೆರಳುವ ಬದಲು ದೇಶದಲ್ಲಿಯೇ ಉದ್ಯೋಗ ನಿರ್ವಹಿಸಲು ಅನುಕೂಲವಾಗಲು ಉತ್ತಮ ಅವಕಾಶ ಕಲ್ಪಿಸಲಾಗುವುದು ಎಂದು ಪ್ರಧಾನಿ ಮೋದಿ ಯುವ ಸಂಸತ್ ನಲ್ಲಿ ಘೋಷಿಸಿದರು.