Advertisement

ತಪ್ಪಿಗೆಲ್ಲ ಯುವ ಜನಾಂಗವೇ ಹೊಣೆಯೇ?

04:08 PM Mar 26, 2019 | |

ಅಮೆರಿಕದ ಶಿಕಾಗೊ ನಗರದ ಸರ್ವಧರ್ಮ ಸಮ್ಮೇಳನದಲ್ಲಿ ಪ್ರಪಂಚದ ಸಮಸ್ತ ಧರ್ಮಗಳ ಮೂಲತತ್ವಗಳನ್ನು ಭಾರತದ ಧರ್ಮದೊಂದಿಗೆ ಹೋಲಿಸಿ, ಧಾರ್ಮಿಕ ಸಮನ್ವಯತೆಯನ್ನು ವಿಶ್ವಕ್ಕೆ ಪರಿಚಯಿಸಿದ ಸ್ವಾಮಿ ವಿವೇಕಾನಂದರ ಜನ್ಮ ಜಯಂತಿಯನ್ನು (ಜ.12) ನಾವು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸುತ್ತಿದ್ದೇವೆ. ಅವರ ಭಾಷಣದಲ್ಲಿ ರಾಷ್ಟ್ರೀಯ ಭಾವೈಕ್ಯತೆ ಮತ್ತು ಧಾರ್ಮಿಕ ಸ್ವಾತಂತ್ರ್ಯದ ತಿರುಳು ಅಡಗಿತ್ತು. ಅಂದು ಅವರು ವಿಶ್ವದ ಒಬ್ಬ ಶ್ರೇಷ್ಟ ವಾಗ್ಮಿ ಎಂದು ಗುರುತಿಸಿಕೊಂಡು ಇಡೀ ಸಮ್ಮೆಳನದ ಕೇಂದ್ರ ಬಿಂದು ಎಂದೆನಿಸಿಕೊಂಡಿದ್ದರು.

Advertisement

ಪ್ರಸಕ್ತ ಸನ್ನಿವೇಶದಲ್ಲಿ ಯುವ ಜನತೆ ಮತ್ತು ಸಮಾಜದ ಬಗ್ಗೆ ಚರ್ಚಾಸ್ಪದವಾಗಿರುವ ಮಹತ್ವದ ವಿಚಾರವೆಂದರೆ ಸಾಮಾಜಿಕ ಬದಲಾವಣೆಗೆ ಸಂಬಂಧಿಸಿದ ಮೌಲ್ಯಗಳು ಅದರಲ್ಲೂ ಯುವಜನತೆ ಮತ್ತು ಮೌಲ್ಯ. ಮೌಲ್ಯಗಳೇ ಇಲ್ಲದ ಸಮಾಜವನ್ನು ನಿರ್ಮಿಸುವತ್ತ ಭಾರತ ಸಾಗುತ್ತಿದೆ. ಇದಕ್ಕೆ ಕಾರಣ ಯಾರು ಎನ್ನುವುದಕ್ಕಿಂತ ಏಕೆ ಹೀಗಾಗುತ್ತಿದೆ ಎಂದು ಯೋಚಿಸುವುದು ಒಳಿತು. ಯುವ ಪೀಳಿಗೆಯ ದೃಷ್ಟಿಯಲ್ಲಿ ನೋಡಿದಾಗ ಮೌಲ್ಯ, ಬದ್ಧತೆ, ಸಿದ್ಧಾಂತ, ಸಂಸ್ಕೃತಿ ಎಂಬಿತ್ಯಾದಿ ವಿಚಾರಗಳು ಅಪ್ರಸ್ತುತವೋ ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಬದಲಾಗಿದೆ. ಇದಕ್ಕೆ ಯುವಕರು ಕಾರಣರಲ್ಲ. ಬಾಲ್ಯ ಮತ್ತು ಯೌವನದ ಪ್ರಾರಂಭದಲ್ಲಿ ಹೆತ್ತವರು, ರಕ್ಷಕರು ಮತ್ತು ಶಿಕ್ಷಕರು. ಇದು ಆರೋಗ್ಯವೇ ಇರಲಿ, ಶಿಕ್ಷಣವೇ ಇರಲಿ. ಏತನ್ಮಧ್ಯೆ ಪರಿಸರದ ಪ್ರಭಾವ ಮತ್ತು ಪರಿಣಾಮವು ವ್ಯಕ್ತಿಯ ಜೀವನದ ಅಭ್ಯುದಯ ಮತ್ತು ಉದ್ದೇಶ ಸಾಧನೆಗೆ ಮಾರ್ಗವಾಗುತ್ತದೆ ಎನ್ನುವುದನ್ನು ಹದಿಹರೆಯದಲ್ಲಿಯೇ ಮನದಟ್ಟು ಮಾಡಬೇಕು.

ಸಮಕಾಲೀನ ಸಂದರ್ಭದಲ್ಲಿ ತಲೆಮಾರಿನ ಅಂತರದಿಂದಾಗಿ ಸಾಮಾನ್ಯವಾಗಿ ಕೇಳಿ ಬರುವ ಸಂಗತಿಯೆಂದರೆ ಯುವ ಸಮಾಜ ಹಾದಿ ತಪ್ಪುತ್ತಿದೆ ಎಂಬ ಆರೋಪ. ಇದು ನಮ್ಮ ದೇಶಕ್ಕೆ ಮಾತ್ರ ಸೀಮಿತವಲ್ಲ. ಪ್ರಪಂಚದಾದ್ಯಂತ ಇದರ ಪ್ರಭಾವ ಕಂಡು ಬರುತ್ತದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಒಳಿತು ಕೆಡುಕುಗಳೆರಡೂ ಅನ್ವಯಿಸುವ ಪರಿವರ್ತನೆಗಳೆಂಬ ಸ್ವರೂಪಗಳು ಹಿಂದಿನ ಪದ್ಧತಿಗಳಿಗೆ ನಾಂದಿ ಹಾಡಿ ಹೊಸ ಪದ್ಧತಿಗೆ ದಾರಿ ಮಾಡಿಕೊಟ್ಟಿವೆ. ಆದರೆ ಯುವ ಜನಾಂಗ ಹಾದಿ ತಪ್ಪುತ್ತಿದೆ ಎಂಬ ಆರೋಪಕ್ಕೆ ಇತಿಮಿತಿ ಇಲ್ಲ. ಈ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಾಗುತ್ತಲೇ ಇದೆ. ಯುವಕರಿಗೆ ರಾಜಕೀಯದಲ್ಲಿ ಇಚ್ಛೆ ಇಲ್ಲ. ಇತಿಹಾಸದ ಪರಿವೆಯಿಲ್ಲ. ಸಂಸ್ಕೃತಿಯ ಅರಿವಿಲ್ಲ, ಹಿರಿಯರಲ್ಲಿ ಗೌರವವಿಲ್ಲ, ಸಾಮಾಜಿಕ ಕಳಕಳಿಯಿಲ್ಲ, ಭವಿಷ್ಯದ ಚಿಂತೆಯಿಲ್ಲ. ಹೀಗೆಯೇ ಹಲವಾರು ನಕಾರಾತ್ಮಕ ಅಭಿಪ್ರಾಯಗಳೇ ಹೆಚ್ಚಾಗಿ ವ್ಯಕ್ತವಾಗುತ್ತಿವೆ.

ಈ ಆರೋಪಗಳನ್ನು ಸಾರ್ವತ್ರೀಕರಿಸಲಾಗುವುದಿಲ್ಲವಾದರೂ ಅಲ್ಲಗಳೆಯಲಾಗುವುದೂ ಇಲ್ಲ. ಆದರೆ ಯುವ ಜನಾಂಗವನ್ನೇ ಹೊಣೆ ಮಾಡುವುದು ತಪ್ಪು.

ಸ್ವಾತಂತ್ರ್ಯಪೂರ್ವ ಹಾಗೂ ಅನಂತರದ ಸಂತತಿಯಲ್ಲಿ ಸಾಕಷ್ಟು ಅಂತರವಿದೆ. ತಮ್ಮ ಮಕ್ಕಳು ಏನನ್ನು ಕಲಿಯಬೇಕು, ಓದಬೇಕು, ಏನು ಕೆಲಸ ಮಾಡಬೇಕು, ಯಾರೊಡನೆ ವಿವಾಹವಾಗಬೇಕು ಎಂಬ ವಿಷಯ ಮತ್ತು ವಿಚಾರಗಳ ಬಗ್ಗೆ ಮಕ್ಕಳು ಮತ್ತು ತಂದೆ ತಾಯಿ ಹಾಗೂ ಹಿರಿಯರು ಹೇಳಿದಂತೆ ಕೇಳುವುದನ್ನು, ಗೌರವಿಸುವುದನ್ನು ಕಲಿಸಿ ಅದರಂತೆ ಬೆಳೆಸಿರುತ್ತಾರೆ. ಇಲ್ಲಿ ಕಿರಿಯರು ಹಿರಿಯರ ಮಾತನ್ನು ಮನ್ನಣೆಯಿಂದ ದಸ್ತಾವೇಜಿನಂತೆ ಪಾಲಿಸುತ್ತಿದ್ದರು. ಒಬ್ಬ ವ್ಯಕ್ತಿ ಸಮಾಜವನ್ನು ನೋಡುವ ವಿಧಾನ, ಇದು ಹಿರಿಯರು ಕಿರಿಯರನ್ನು ಬೆಳೆಸಿದ ದಾಮಾಶಯ ಮತ್ತು ಅನುಪಾತಕ್ಕೆ ಅನುಗುಣವಾಗಿರುತ್ತದೆ ಎಂದಾದರೆ ಮಕ್ಕಳು ಮತ್ತು ಯುವಕರನ್ನು ದೂಷಿಸುವುದು ತಪ್ಪು ಮತ್ತು ಅವರಿಗೆ ಪೂರಕ ಪರಿಸರವನ್ನು ನಿರ್ಮಿಸಿ ಕೊಡುವುದು ಹಿರಿಯರ ಆದ್ಯ ಕರ್ತವ್ಯವೂ ಹೌದು ಮತ್ತು ಅವರ ಆಸಕ್ತಿಗನುಗುಣವಾದ ವಿದ್ಯಾಭ್ಯಾಸವನ್ನು ನೀಡಬೇಕು.

Advertisement

ಇವತ್ತು ಮಕ್ಕಳು, ವಿದ್ಯಾರ್ಥಿಗಳು, ಯುವ ಜನತೆ ಸನ್ಮಾರ್ಗದಲ್ಲಿ ನಡೆಯುತ್ತಿಲ್ಲವೆಂದಾದರೆ ಅದಕ್ಕೆ ಗರಿಷ್ಠ ಹೊಣೆಗಾರರು ಹೆತ್ತವರು, ಹಿರಿಯರು ಮತ್ತು ರಕ್ಷಕರು ಮತ್ತು ಪರಿಸರ. ಎಲ್ಲಾ ಕ್ಷೇತ್ರಗಳಲ್ಲಿಯೂ ಇರುವ ಅಪವಾದಗಳು ಇಲ್ಲಿಯೂ ಇಲ್ಲದೇ ಇಲ್ಲ. ಚೈತನ್ಯಯುತ ಉತ್ಸಾಹ ತರುಣರಿಗೆ ಹಿರಿಯರ ಅನುಭವ, ವಿವೇಚನೆ ಮತ್ತು ಮಾರ್ಗದರ್ಶನದ ಕೊರತೆಯೇ ಕಾರಣ. ಸಾರಾಸಗಟಾಗಿ ಯುವಕರು ಹಾದಿ ತಪ್ಪುತ್ತಿದ್ದಾರೆ. ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ. ಸಂಸ್ಕಾರ ಮತ್ತು ಸಂಸ್ಕೃತಿಗೆ ಬೆಲೆ ಕೊಡದೆ ಸಾಮಾಜಿಕ ಜಾಲತಾಣಗಳ ಗೀಳಿಗೆ ದಾಸರಾಗಿದ್ದಾರೆ ಎಂದು ಹೇಳುತ್ತಲೇ ಕಾಲ ಕಳೆಯುತ್ತಾರೆ ನಮ್ಮ ಹಿರಿಯರು. ಆದರೆ ಬಾಲ್ಯದಿಂದಲೇ ಮಕ್ಕಳಿಗೆ ಸನ್ಮಾರ್ಗವನ್ನು ತೋರಿಸುವ ಗೋಜಿಗೆ ಹೋಗುವುದಿಲ್ಲ. ಮೂರು ವರ್ಷದ ಬುದ್ಧಿ ನೂರು ವರ್ಷದ ತನಕ, ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ? ಎಂಬುದನ್ನು ರಕ್ಷಕರು ಕಾಯಾ, ವಾಚಾ, ಮನಸಾ ಅರಿತು ಲಾಲನೆ, ಪಾಲನೆ ಮಾಡಿ ಸನ್ಮಾರ್ಗವನ್ನು ತೋರಿಸಬೇಕು ಮತ್ತು ಪ್ರಪಂಚದ ವಿಪುಲ ಸಂಪತ್ತು ಮಾನವನ ಶರೀರದಲ್ಲಿ ಅಡಗಿದೆ ಅನ್ನುವುದನ್ನೂ ಅರಿವು ಮಾಡಿಕೊಡಬೇಕು. ಸಾಮಾಜಿಕ ಜಾಲತಾಣಗಳು ದೈನಂದಿನ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಆದರೆ ಅದರಲ್ಲಿ ಅಂತರ್ಗತವಾಗಿರುವ ಅಪಾಯಗಳ ಬಗ್ಗೆ ಕ್ಲಪ್ತ ಸಮಯದಲ್ಲಿ ಮಕ್ಕಳು ಮತ್ತು ಯುವಕರಿಗೆ ಮನವರಿಕೆ ಮಾಡಿಕೊಡಬೇಕು.
ಮಕ್ಕಳ ಮತ್ತು ಯುವಕರ ಬೇಕು ಬೇಡಗಳನ್ನು ನಿಧಾನವಾಗಿ ಮನವರಿಕೆ ಮಾಡಲು ಪ್ರಯತ್ನಿಸಬೇಕು. ಹದಿಹರೆಯದ ವಯಸ್ಸಿನಲ್ಲಿ ಆಕಾಶವೇ ತನ್ನದಾಗಬೇಕೆಂಬ ಹಠ. ಈ ಸಂದರ್ಭದಲ್ಲಿ ಪೋಷಕರು ಮಕ್ಕಳಿಗೆ ಸಲಹೆ, ಪ್ರೀತಿ, ಸಂಯಮವನ್ನು ತೋರಿಸಬೇಕು.

ಮಕ್ಕಳು ಖುಷಿಯಾಗಿರುವ ಸಂದರ್ಭದಲ್ಲಿ ಮಾತನಾಡಿಸಬೇಕು. ಮಕ್ಕಳನ್ನು ಮುಕ್ತವಾಗಿರಲು ಬಿಡಬೇಕು. ಬದಲಾಗಬೇಕಾದದ್ದು ಪೋಷಕರು, ಮಕ್ಕಳಲ್ಲ. ಮಕ್ಕಳನ್ನು ಏಕಾಏಕಿ ಬಲತ್ಕಾರವಾಗಿ ಸ್ವಾಧೀನಕ್ಕೆ ತರಬೇಕು ಎಂದು ಯತ್ನಿಸಿದರೆ ಪರಿಣಾಮ ವ್ಯತಿರಿಕ್ತವಾಗುತ್ತದೆ. ಪೋಷಕರು ಎಂದೂ ದುಡುಕಬಾರದು. ಇಲ್ಲಿ ಒಂದು ವಿಷಯವನ್ನು ಉಲ್ಲೇಖೀÓ ಬಹುದು. ಅದೇನೆಂದರೆ ಒಬ್ಬ ವಿದ್ಯಾರ್ಥಿ ಒಂದು ಉತ್ತಮ ಶೈಕ್ಷಣಿಕ ಸಂಸ್ಥೆಯಲ್ಲಿ ನಾಲ್ಕು ಗೋಡೆಗಳ ಮಧ್ಯೆ ಕಲಿಯುವುದಕ್ಕಿಂತಲೂ ಪರಿಸರ, ಸುತ್ತಲಿನ ಪ್ರಭಾವದಿಂದ ಹೆಚ್ಚು ತಿಳಿದುಕೊಳ್ಳುತ್ತಾನೆ. ಪ್ರತಿಭಾವಂತರು ವಿದೇಶಕ್ಕೆ ಪಲಾಯನ ಮಾಡುವುದನ್ನು ನಿಲ್ಲಿಸಬೇಕು. ಮಾತೃ ಭೂಮಿಯ ಸೇವಕರಾಗಬೇಕು.

ಇಂದಿನ ಯುವ ಸಮಾಜದ ಎದುರು ಸವಾಲುಗಳು ಬೆಟ್ಟದಷ್ಟಿವೆ. ಅನಿಶ್ಚಿತ ಭವಿಷ್ಯ ಕಾಡುತ್ತಿದೆ. ಆದುದರಿಂದ ಯುವಕರು ಭ್ರಮಾ ಲೋಕದಲ್ಲಿ ವಿಹರಿಸದೆ ಸಾಮಾಜಿಕ ಮೌಲ್ಯ, ಕೌಟುಂಬಿಕ ಮೌಲ್ಯ ಮತ್ತು ಭಾವನಾತ್ಮಕ ಸಂಬಂಧಗಳನ್ನು ಯಾವ ಕಾರಣಕ್ಕೂ ಬಲಿಗೊಡದೆ ಚಟುವಟಿಕೆಯಿಂದ ಕರ್ತವ್ಯಶೀಲ ಜವಾಬ್ದಾರಿಯುತ ಪ್ರಜೆಗಳಾಗಬೇಕು.

ಸ್ವಾತಂತ್ರ್ಯಪೂರ್ವ ಇತಿಹಾಸದ ಪುಟಗಳ ಮೇಲೆ ಕಣ್ಣು ಹಾಯಿಸಿದರೆ ಅದೆಷ್ಟೋ ಯುವಕರು ಸ್ವಾತಂತ್ರ್ಯ ಸಂಗ್ರಾಮದ ಪ್ರಧಾನ ಸ್ಥಾನದಲ್ಲಿದ್ದರು. ಸಮಾಜವಾದಿ ಕ್ರಾಂತಿ, ದಲಿತ ಚಳವಳಿ, ಮಹಿಳಾ ಆಂದೋಲನ ಹೀಗೆ ವಿವಿಧ ಆಯಾಮಗಳಲ್ಲಿ ತೊಡಗಿಸಿ ಕೊಂಡು ಭವಿಷ್ಯದ ಪೀಳಿಗೆಗೆ ಭದ್ರ ಬುನಾದಿಯನ್ನು ನಿರ್ಮಿಸಿದ್ದಾರೆ. ಅದನ್ನು ಯುವಜನತೆ ಮನಗಂಡು ಈ ದೇಶ ಶತಮಾನಗಳಿಂದ ಕಾಪಾಡಿಕೊಂಡು ಬಂದ ಭಾÅತೃತ್ವ ಮತ್ತು ಸೌಹಾರ್ದತೆಯನ್ನು ಅಂಧಾಭಿಮಾನದಿಂದ ಕಾಣದೆ, ಮೂಕ ಪ್ರೇಕ್ಷಕರಂತೆ ಗಮನಿಸದೆ ಕರ್ತವ್ಯಶೀಲ ಪ್ರಜ್ಞಾವಂತ ಪ್ರಜೆಗಳಾಗಬೇಕಾಗಿದೆ. ಹಿರಿಯರು ಸೂಕ್ತಕಾಲದಲ್ಲಿ ಈ ವಿಷಯಗಳಿಗೆ ಸೂಕ್ತ ಮಾರ್ಗದರ್ಶನ ಕೊಡುವವರಾಗಬೇಕು.

ನಾವೀಗ ಸಂಘರ್ಷದ ವಾತಾವರಣದಲ್ಲಿ ಬಾಳುತ್ತಿದ್ದೇವೆ. ಪ್ರಭುತ್ವ, ಪ್ರಾಯೋಜಕ ಕೋಮುವಾದ, ಜಾಗತೀಕರಣ, ಪ್ರಾದೇಶಿಕತೆ, ಭಯೋತ್ಪಾದನೆ ಇತ್ಯಾದಿಗಳು ನಮ್ಮ ನೆಲದಲ್ಲಿ ಸಮಸ್ಯೆಗಳಾಗಿ ಬೆಳೆದು ನಮ್ಮ ಬುಡವನ್ನೇ ಅಲ್ಲಾಡಿಸುವಷ್ಟು ಶಕ್ತವಾಗಿವೆ. ಸಂದರ್ಭಕ್ಕೆ ಅನು ಗುಣವಾಗಿ ಈ ನಿಟ್ಟಿನಲ್ಲಿ ಯುವಕರು ಕಾರ್ಯಪ್ರವೃತ್ತರಾಗಿ ತಮ್ಮ ನಿಲುವಿನಲ್ಲಿನ ಸಂಪೂರ್ಣ ಬದಲಾವಣೆಗೆ ಷರತ್ತುಬದ್ಧರಾಗಬೇಕು.

ಕೆಳಗೆ ಹೇಳಿದ ವಿವೇಕಾನಂದರ ಕೆಲವು ವಿವೇಕವಾಣಿಗಳನ್ನು ಯುವ ಜನತೆ ಮನದಟ್ಟು ಮಾಡಿಕೊಂಡರೆ ರಾಷ್ಟ್ರೀಯ ಭಾವೈಕ್ಯತೆ ಮತ್ತು ಧಾರ್ಮಿಕ ಸ್ವಾತಂತ್ರ್ಯ ಮತ್ತು ಭಾವೀ ಭವಿಷ್ಯಕ್ಕೆ ಪುಷ್ಟಿ ನೀಡಿದಂತಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

“ಯಾವುದನ್ನು ನನ್ನ ಧರ್ಮ ಎಂದು ಹೆಮ್ಮೆಯಿಂದ ಹೇಳುವಿರೋ ಅದನ್ನು ಆಚರಣೆಯಲ್ಲಿ ತೋರಿಸಿ’. “ಧರ್ಮ ಇರುವುದು ಪ್ರೀತಿಯಲ್ಲಿ ಬಾಹ್ಯಾಚಾರದಲ್ಲಿ ಅಲ್ಲ, ಧರ್ಮಕ್ಕೆ ಶುದ್ಧ ನಿಷ್ಕಪಟ ಹೃದಯವೇ ಮುಖ್ಯ’. “ಒಬ್ಬನ ದೇಹ ಮತ್ತು ಮನಸ್ಸು ಪರಿಶುದ್ಧವಿಲ್ಲದೆ ಇದ್ದರೆ ಅವನು ದೇವಸ್ಥಾನಕ್ಕೆ ಅಥವಾ ಪ್ರಾರ್ಥನಾ ಸ್ಥಳಕ್ಕೆ ಹೋಗಿ ಪ್ರಾರ್ಥಿಸಿದರೆ ಪ್ರಯೋಜನವಿಲ್ಲ’. “ನಮ್ಮ ದೇಶವನ್ನು ನಿಂದಿಸದೇ ಇರೋಣ’. ಹಲವು ಶತಮಾನಗಳ ಕಾಲ ಪೆಟ್ಟು ತಿಂದು ಜರ್ಝರಿತವಾದ ಜನಾಂಗದ ಮೇಲೆ ನಿಂದೆಯ ಮಳೆಗರೆಯ ಬೇಡಿ. “ನಿಮ್ಮಲ್ಲಿ ನೀವು ಶ್ರದ್ಧೆ ಇಡಿ, ನಿಮಗೆ ಲೌಕಿಕ ಸಂಪತ್ತು ಬೇಕಾದರೆ ಮಾನಸಿಕ ಭೂಮಿಕೆಯಲ್ಲಿ ಸಾಧನೆ ಮಾಡಿ ಮಹಾ ಮೇಧಾವಿಗಳೇ ಆಗುತ್ತೀರಿ’, “ಒಂದೊಂದು ರಾಷ್ಟ್ರದ ಇತಿಹಾಸವನ್ನು ತೆಗೆದುಕೊಂಡರೂ ಆತ್ಮ ಶ್ರದ್ಧೆಯುಳ್ಳ ವ್ಯಕ್ತಿಗಳೇ ಶ್ರೇಷ್ಠರೂ, ಶಕ್ತಿವಂತರೂ ಆಗಿದ್ದರೆಂಬುದು ಸ್ಪಷ್ಟವಾಗುತ್ತದೆ.’, “ಸ್ವಾರ್ಥ ಬೇಡ, ಹೆಸರು ಬೇಡ, ಕೀರ್ತಿ ಬೇಡ, ನಿಮಗೂ ಬೇಡ, ನಮಗೂ ಬೇಡ, ನಮ್ಮ ಗುರು ದೇವನಿಗೂ ಬೇಡ, ಕೀರ್ತಿ ಗೌರವಗಳೆಂಬ ಹೀನ ವಿಷಯಗಳನ್ನು ಹಿಂದಿರುಗಿ ನೋಡುವುದಕ್ಕೂ ನಿಲ್ಲಬೇಡಿ’.

“ಸ್ವಾರ್ಥವನ್ನು ಸಂಪೂರ್ಣ ತ್ಯಾಗ ಮಾಡಿ ಕೆಲಸಕ್ಕೆ ಕೈ ಹಾಕಿ. ಹಲವು ಹುಲ್ಲನೆಸಳುಗಳನ್ನು ಸೇರಿಸಿ ಹಗ್ಗ ಮಾಡಿದರೆ ಮದಿಸಿದ ಆನೆಯನ್ನಾದರೂ ಕಟ್ಟಿ ಹಾಕಬಹುದು.’ “ಶಿಕ್ಷಣವೆಂದರೆ ಮೊದಲೇ ಮನುಷ್ಯನಲ್ಲಿರುವ ಪರಿಪೂರ್ಣತೆಯನ್ನು ಪ್ರಕಾಶ ಮಾಡಿಸುವುದು. ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ’.

ಎದ್ದು ನಿಲ್ಲಿ! ಧೀರರಾಗಿ! ಬಲಾಡ್ಯರಾಗಿ! ಜವಾಬ್ದಾರಿಯೆಲ್ಲಾ ನೀವು ವಹಿಸಿ ನಿಮ್ಮ ಅದೃಷ್ಟಕ್ಕೆ ನೀವೇ ಹೊಣೆಯೆಂದು ತಿಳಿದುಕೊಳ್ಳಿ. ನಿಮಗೆ ಬೇಕಾದ ಶಕ್ತಿ ಸಹಾಯವೆಲ್ಲಾ ನಿಮ್ಮಲ್ಲೇ ಇದೆ. ಕೇವಲ 39 ವರ್ಷ ಬದುಕಿದರೂ ಬಾಳಿ ಬೋಧಿಸಿದ ವಿಷಯಗಳ ಸಾರಾಂಶ ಎಂದೆಂದಿಗೂ ಪ್ರಸ್ತುತ. ಯುವಕರು ನಮ್ಮ ವೇದ ಉಪನಿಷತ್ತು, ಬೈಬಲ್‌, ಕುರಾನ್‌, ರಾಮಾಯಣ, ಮಹಾಭಾರತಗಳನ್ನು ಅಜ್ಜಿ ಕಥೆಗಳಿಗೆ ಸೀಮಿತಗೊಳಿಸದೆ ಅದರ ತಿರುಳುಗಳನ್ನು ಜೀವನದ ಮೌಲ್ಯಕ್ಕೆ ಆಧಾರವೆಂದು ಪರಿಗಣಿಸಬೇಕು. ವಿವೇಕಾನಂದರು ತಮ್ಮ ಗುರುವಿನ ನೆನಪಿಗೆ ಸ್ಥಾಪಿಸಿದ ರಾಮಕೃಷ್ಣ ಮಿಷನ್‌ ಎಂಬ ಸಂಸ್ಥೆಯು ಪ್ರಪಂಚದಾದ್ಯಂತ ಹರಡಿ ವಿದ್ಯಾದಾನ ಮತ್ತು ಆರೋಗ್ಯ ಸೇವೆಯನ್ನು ನೀಡುತ್ತಿದೆ.

ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.ಅವರ ಆದರ್ಶ ನಮ್ಮ ಯುವ ಜನಾಂಗಕ್ಕೆ ಮಾದರಿಯಾಗಬೇಕು, ಅವರ ದೇಶ ಪ್ರೇಮ, ಧಾರ್ಮಿಕ ಶ್ರದ್ಧೆ ಮತ್ತು ಆತ್ಮವಿಶ್ವಾಸ ಸೇವಾ ಮನೋಭಾವನೆ ಪ್ರೇರಣೆಯಾಗಬೇಕು. ದೇಶ ಕಟ್ಟುವ ಅಭಿವೃದ್ಧಿಗೊಳಿಸುವ ಕಾರ್ಯಕ್ಕೆ ಕೈ ಹಾಕಬೇಕು. ದೇಶವೂ ಕೂಡಾ ಅಂತಹ ಯುವ ಪೀಳಿಗೆಯನ್ನು ನಿರೀಕ್ಷಿಸುತ್ತದೆ. ಯುವ ಜನರು ಈ ಪವಿತ್ರದಿನದಂದು ದೇಶದ ಪ್ರಗತಿಗಾಗಿ ಅಪರ್ಣಾ ಮನೋಭಾವದಿಂದ ಕೆಲಸ ಮಾಡುವ ದೀಕ್ಷೆ ತೊಟ್ಟು ಕಾರ್ಯ ಪ್ರವೃತ್ತರಾಗಬೇಕಾಗಿದೆ.

– ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ 

Advertisement

Udayavani is now on Telegram. Click here to join our channel and stay updated with the latest news.

Next