Advertisement

29ಕ್ಕೆ ಮಂಡ್ಯದಲ್ಲಿ ಸ್ವಾಭಿಮಾನಿ ವಿಜಯೋತ್ಸವ: ಸುಮಲತಾ

01:54 AM May 25, 2019 | Team Udayavani |

ಬೆಂಗಳೂರು: ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜಯ ಗಳಿಸಿದ ಹಿನ್ನೆಲೆಯಲ್ಲಿ ಮೇ 29 ರಂದು ಮಂಡ್ಯದಲ್ಲಿ ಸ್ವಾಭಿಮಾನಿ ವಿಜಯೋತ್ಸವ ಆಚರಿಸುವುದಾಗಿ ನೂತನ ಸಂಸದೆ ಸುಮಲತಾ ಅಂಬರೀಶ್‌ ಹೇಳಿದ್ದಾರೆ.

Advertisement

ಶುಕ್ರವಾರ ತಮ್ಮ ಪತಿ ದಿ. ಅಂಬರೀಶ್‌ ಅವರ ಸಮಾಧಿಗೆ ತೆರಳಿ ಚುನಾವಣೆಯಲ್ಲಿ ಜಯ ಗಳಿಸಿದ ಹಿನ್ನೆಲೆಯಲ್ಲಿ ಜಯದ ಪ್ರಮಾಣ ಪತ್ರವನ್ನು ಅಂಬರೀಶ್‌ ಸಮಾಧಿಯ ಮೇಲೆ ಇಟ್ಟು ವಿಶೇಷ ಪೂಜೆ ಸಲ್ಲಿಸಿ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಮೇ 29 ರಂದು ಅಂಬರೀಶ್‌ ಅವರ ಹುಟ್ಟು ಹಬ್ಬ ಇರುವುದರಿಂದ ಅಂದು ಸ್ವಾಭಿಮಾನಿ ವಿಜಯೋತ್ಸವ ಆಚರಿಸಲು ನಿರ್ಧರಿಸಿದ್ದೇವೆ. ಈ ಸಮಾವೇಶದಲ್ಲಿ ನಟರಾದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ರಾಕಿಂಗ್‌ ಸ್ಟಾರ್‌ ಯಶ್‌ ಪಾಲ್ಗೊಳ್ಳಲಿದ್ದಾರೆ. ಚುನಾವಣೆಯ ಗೆಲುವಿನ ಹಿನ್ನೆಲೆಯಲ್ಲಿ ವಿಜಯೋತ್ಸವ ಆಚರಿಸುವ ಮೂಲಕ ಮಂಡ್ಯ ಜನತೆಗೆ ಅಭಿನಂದನೆ ಸಲ್ಲಿಸುತ್ತೇವೆ. ಮಂಡ್ಯದಲ್ಲಿ ನನ್ನ ಗೆಲುವಿನಲ್ಲಿ ಮಹಿಳೆಯರ ಪಾಲು ದೊಡ್ಡದಿದೆ ಎಂದರು.

ಚುನಾವಣೆ ಗೆಲುವಿಗೆ ನಟ ಚಿರಂಜೀವಿ, ಓಮರ್‌ ಅಬ್ದುಲ್ಲಾ ಸೇರಿ ಅನೇಕ ನಾಯಕರು ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ನಟ ಯಶ್‌ ಮೊದಲು ಕರೆ ಮಾಡಿ ಏನ್‌ ಎಂಪಿ ಮೇಡಂ ಅಂದರು, ದರ್ಶನ್‌ ಕರೆ ಮಾಡಿ, ಎಂಪಿ ಮದರ್‌ ಇಂಡಿಯಾ ಎಂದು ಹೇಳಿದರು. ಮುಖ್ಯ ಮಂತ್ರಿ ಕುಮಾರಸ್ವಾಮಿ, ದೇವೇಗೌಡರು ಹಾಗೂ ನಿಖೀಲ್ ಕುಮಾರಸ್ವಾಮಿ ಕರೆ ಮಾಡಿಲ್ಲ ಎಂದು ಹೇಳಿದರು.

ಸದ್ಯ ಜವಾಬ್ದಾರಿ ಹೆಚ್ಚಾಗಿರುವುದರಿಂದ ಚಲನಚಿತ್ರದಲ್ಲಿ ನಟಿಸುವುದಿಲ್ಲ. ರಾಜಕಾರಣದಿಂದ ಕಲಿಯುವುದು ಇನ್ನೂ ತುಂಬಾ ಇದೆ. ಚುನಾವಣಾ ಪ್ರಚಾರದ ವೇಳೆ ರಾಜಕಾರಣದಲ್ಲಿ ಏನು ಮಾಡಬಾರದು ಎನ್ನುವುದನ್ನು ಕಲಿತೆ. ನನ್ನ ಗೆಲುವನ್ನು ಎಲ್ಲರೂ ಇತಿಹಾಸ ಎಂದು ಕರೆಯುತ್ತಿದ್ದಾರೆ. ಇದು ಮಂಡ್ಯ ಜನತೆ ಬರೆದ ಇತಿಹಾಸ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನಕ್ಕೆ ಆಹ್ವಾನ ಬಂದರೆ ಹೋಗುವುದಾಗಿ ಇದೇ ವೇಳೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next