ರಾಮನಗರ/ಬೆಂಗಳೂರು: ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮಿ ಮತ್ತೆ ಸುದ್ದಿಯಾಗಿದ್ದಾರೆ. ಚಿತ್ರನಟಿಯೊಬ್ಬರೊಂದಿಗೆ ರಾಸಲೀಲೆಯಲ್ಲಿ ತೊಡಗಿದ್ದರೆನ್ನಲಾದ ವಿಡಿಯೋದಲ್ಲಿ ಇರುವವರು ಅವರೇ ಎಂದು ನವದೆಹಲಿಯ ವಿಧಿವಿಜ್ಞಾನ ಪ್ರಯೋಗಾಲಯ ದೃಢಪಡಿಸಿದೆ. ಏಳು ವರ್ಷಗಳ ನಂತರ ಈ ವರದಿ ಬಹಿರಂಗಗೊಂಡಿದ್ದು, ಹಲವು ಜಿಜ್ಞಾಸೆಗಳಿಗೆ ಕಾರಣವಾಗಿದೆ.
2010ರಲ್ಲಿ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಐಡಿ ಅಧಿಕಾರಿಗಳಿಗೆ ದೆಹಲಿಯ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಕೈಸೇರಿತ್ತು. ನಂತರ ನ್ಯಾಯಾಲಯಕ್ಕೂ ಸಲ್ಲಿಸಿದ್ದರು. ಸದ್ಯ ಬಹಿರಂಗಗೊಂಡಿರುವ ವರದಿಯಲ್ಲಿ ರಾಸಲೀಲೆ ವಿಡಿಯೋದಲ್ಲಿರುವುದು ನಿತ್ಯಾನಂದ ಸ್ವಾಮೀಜಿ ಮತ್ತು ಈತನ ಅನುಯಾಯಿ ರಂಜಿತಾ ಎಂಬುದು ದೃಢಪಟ್ಟಿದೆ.
2010ರ ಮಾರ್ಚ್‌ನಲ್ಲಿ ಬಿಡದಿ ಬಳಿಯ ಧ್ಯಾನಪೀಠದಲ್ಲಿ ರಾಸಲೀಲೆ ನಡೆಸಿದ್ದಾರೆನ್ನಲಾದ ವಿಡಿಯೋ ವೈರಲ್ ಆಗಿತ್ತು. ಈ ಪ್ರಕರಣದಿಂದಾಗಿ ಇಡೀ ರಾಜ್ಯದಲ್ಲಿ ನಿತ್ಯಾನಂದ ಸ್ವಾಮೀಜಿ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು. ಈ ಪ್ರಕರಣ ಬಿಡದಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ರಾಮನಗರದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಬಿಡದಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 295(ಎ) ಧಾರ್ಮಿಕ ಭಾವನೆಗಳಿಗೆ ಕುಂದುಂಟು ಮಾಡಿರುವುದು, 376 – ಅತ್ಯಾಚಾರ, 377-ಅಸ್ವಾಭಾವಿಕ ಲೈಂಗಿಕ ಕ್ರಿಯೆ, 420 – ವಂಚನೆ, 506(1) -ಬೆದರಿಕೆ, 120ಬಿ – ಪಿತೂರಿ ಆರೋಪದಡಿಯಲ್ಲಿ ನಿತ್ಯಾನಂದರ ವಿರುದ್ದ ಪ್ರಕರಣ ದಾಖಲಾಗಿದೆ.
ನಿತ್ಯಾನಂದರ ಕಾರಿನ ಡ್ರೈವರ್ ಆಗಿದ್ದ ಲೆನಿನ್ ಎಂಬಾತ ರಾಸಲೀಲೆಯ ವಿಡಿಯೋದ ಸಿಡಿಗಳನ್ನು ಬಿಡುಗಡೆ ಮಾಡಿದ್ದರು. ರಾಸಲೀಲೆ ವಿಡಿಯೋದಲ್ಲಿರುವುದು ತಾವಲ್ಲ ಎಂದು ನಿತ್ಯಾನಂದ ಸ್ವಾಮೀಜಿ ಲೆನಿನ್ ವಿರುದ್ಧವೇ ರಾಮನಗರ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು. ಇನ್ನೊಂದೆಡೆ ಚಿತ್ರನಟಿ ರಂಜಿತ ಸಹ ಲೆನಿನ್ ವಿರುದ್ಧ ನ್ಯಾಯಾಲಯದಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿದ್ದರು.
ಬಿಡದಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿತ್ತು. ಪ್ರಕರಣದ ತನಿಖೆ ಕೈಗೊಂಡ ಸಿಐಡಿ ಪೊಲೀಸರು ನಿತ್ಯಾನಂದರ ವಿರುದ್ಧ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ವಿಡಿಯೋದಲ್ಲಿರುವುದು ಆರೋಪಿ ನಿತ್ಯಾನಂದ ಮತ್ತು ರಂಜಿತಾ ಹೌದೋ ಅಲ್ಲವೋ ಎಂಬುದನ್ನು ಪತ್ತೆ ಮಾಡಿಕೊಡಿ ಎಂದು ಸಿಐಡಿ ಪೊಲೀಸರು ವಿಧಿವಿಜ್ಞಾನ ಪ್ರಯೋಗಾಲಯದ ಮೊರೆ ಹೋಗಿದ್ದರು. “ಸ್ಪೈ ಕ್ಯಾಮೆರಾ” ಬಳಿಸಿ ಚಿತ್ರೀಕರಿಸಿಕೊಂಡಿದ್ದು ಎನ್ನಲಾದ ಈ ವಿಡಿಯೋದಲ್ಲಿರುವುದು ಆರೋಪಿ ನಿತ್ಯಾನಂದ ಮತ್ತು ರಂಜಿತಾ ಎಂಬುದನ್ನು ದೃಢಪಡಿಸಿರುವ ಪ್ರಯೋಗಾಲಯ ವರದಿಯನ್ನು 2010ರಲ್ಲೇ ಕೊಟ್ಟಿದೆ. ಸದರಿ ವರದಿ ಇದೀಗ ಬಹಿರಂಗಗೊಂಡಿದೆ.
ವಿಧಿವಿಜ್ಞಾನ ಪ್ರಯೋಗಾಲಯದಿಂದ ಬಂದ ವರದಿಯನ್ನು ಮುಚ್ಚಿದ ಲಕೋಟೆಯಲ್ಲೇ ಸಿಐಡಿ ಪೊಲೀಸರು ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಸದರಿ ಲಕೋಟೆ ಇನ್ನು ಮುಚ್ಚಿದ ಸ್ಥಿತಿಯಲ್ಲೇ ಇದೆ, ಮಾರ್ಕ್ ಸಹ ಆಗಿಲ್ಲ ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ. ಹೀಗಾಗಿ ವರದಿ ಸೋರಿಕೆ ಹೇಗಾಯ್ತು? ಎಂಬ ಯಕ್ಷ ಪ್ರಶ್ನೆ ಕಾಡುತ್ತಿದೆ.
ಅತ್ಯಾಚಾರ ಪ್ರಕರಣವೂ ವಿಚಾರಣೆಯಲ್ಲಿ:
ನಿತ್ಯಾನಂದ ಸ್ವಾಮೀಜಿ ಅವರ ಮಾಜಿ ಭಕ್ತೆ ಆರತಿ ರಾವ್ ಎಂಬುವರು ನಿತ್ಯಾನಂದ ಸ್ವಾಮೀಜಿ ತಮ್ಮ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ದಾಖಲಿಸಿರುವ ಪ್ರಕರಣದ ವಿಚಾರಣೆ ಸಹ ಸ್ಥಳೀಯ ನ್ಯಾಯಾಲಯದಲ್ಲಿ ನಡೆಯುತ್ತಿದೆ.