ಬೆಂಗಳೂರು: ಬ್ಲ್ಯಾಕ್ ಆ್ಯಂಡ್ ವೈಟ್ ದಂಧೆಯಲ್ಲಿ ಬಂಧನಕ್ಕೊಳಗಾಗಿರುವ ಪಾಲಿಕೆ ಮಾಜಿ ಸದಸ್ಯ ನಾಗರಾಜ್ ಶಾಸಕನಾಗುವ ಭ್ರಮೆಯಿಂದ ಇನ್ನು ಹೊರಬಂದಿಲ್ಲ. ಅದಕ್ಕೆ ಮಂಗಳವಾರ ನ್ಯಾಯಾಲಯವೂ ಸಾಕ್ಷಿಯಾಗಿದೆ.
ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರಾಗಿದ್ದ ನಾಗರಾಜು, “ನನಗೆ ಮಾತನಾಡಲು ಅವಕಾಶ ನೀಡಬೇಕು,’ ಎಂದು ನ್ಯಾಯಾಧೀಶರಿಗೆ ಮನವಿ ಮಾಡಿದ. ಅವಕಾಶ ಕೊಡುತ್ತಿದ್ದಂತೆ “ಸ್ವಾಮಿ ನಾನು ಎಂಎಲ್‌ಎ ಅಭ್ಯರ್ಥಿ. ಪೊಲೀಸರು ದುರುದ್ದೇಶದಿಂದ ನನ್ನನ್ನು ಬಂಧಿಸಿ ಹಿಂಸೆ ನೀಡುತ್ತಿದ್ದಾರೆ. ನನಗೆ ಜೀವ ಭಯವಿದ್ದು, ನನ್ನ ವಿರುದ್ಧ ದಾಖಲಿಸಿರುವ ಯಾವ ಪ್ರಕರಣದಲ್ಲೂ ಸತ್ಯಾಂಶವಿಲ್ಲ’ ಎಂದು ನಾಗರಾಜು ಕಣ್ಣೀರು ಸುರಿಸಿದ್ದಾನೆ.
ನಂತರ “ನಾನು ಸಾಮಾಜಿಕ ಕಾರ್ಯಕರ್ತ, ಬಡ ಜನರಿಗೆ ಲಕ್ಷಾಂತರ ರೂಪಾಯಿಗಳನ್ನು ಕೊಟ್ಟು ಸಹಾಯ ಮಾಡಿದ್ದೇನೆ. ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆಸಿಲ್ಲ. ನನ್ನ ಕೈ ಮುರಿದಿದ್ದು, ಆರೋಗ್ಯ ತುಂಬಾ ಹದಗೆಟ್ಟಿದೆ. ಹೆಚ್ಚು ದಿನಗಳ ಕಾಲ ಜೈಲಿನಲ್ಲಿರಲು ಅವಕಾಶ ನೀಡಬೇಕು ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಜೈಲಿನಲ್ಲಿ ಎಲ್ಲಾ ಸೌಲಭ್ಯಗಳು ಇವೆ. ಜತೆಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಕೂಡ ಸಿಗುತ್ತದೆ ಎಂದು ನಾಗರಾಜ್‌ಗೆ ಪ್ರತಿಕ್ರಿಯೆ ನೀಡಿದರು.
ಮತ್ತೆ ಏಳು ದಿನ ಪೊಲೀಸರ ವಶಕ್ಕೆ: ನಾಗರಾಜ್ ಮತ್ತು ಇಬ್ಬರು ಪುತ್ರರು ಸೇರಿದಂತೆ ಐದು ಮಂದಿಯನ್ನು ಹೆಚ್ಚಿನ ವಿಚಾರಣೆಗಾಗಿ ಶ್ರೀರಾಮಪುರ ಠಾಣೆ ಪೊಲೀಸರು 7 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ. ಹೆಣ್ಣೂರು ಠಾಣೆ ಪೊಲೀಸರ ವಶದಲ್ಲಿದ್ದ ನಾಗರಾಜ್‌ನನ್ನು ಮಂಗಳವಾರ 7ನೇ ಎಸಿಎಂಎಂ ಕೋರ್ಟ್‌ಗೆ ಹಾಜರು ಪಡಿಸಿದ್ದರು.
ಇದೇ ವೇಳೆ ಶ್ರೀರಾಮಪುರ ಠಾಣೆ ಪೊಲೀಸರು, ತಮ್ಮ ಠಾಣೆಯಲ್ಲಿ ನಾಲ್ವರು ಉದ್ಯಮಿಗಳು ನಾಗರಾಜ್ ಮತ್ತು ಆತನ ಇಬ್ಬರು ಮಕ್ಕಳು ಸೇರಿದಂತೆ ಐವರ ವಿರುದ್ಧ ವಂಚನೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಗರಾಜ್ ಮತ್ತು ಮಕ್ಕಳಾದ ಶಾಸ್ತ್ರೀ, ಗಾಂಧಿ ಹಾಗೂ ಬೆಂಬಲಿಗರಾದ ಶರವಣ, ಜಯಕೃಷ್ಣನನ್ನು ವಶಕ್ಕೆ ಪಡೆಯಲು ಮನವಿ ಮಾಡಿದ್ದರು. ಇದಕ್ಕೆ ಪುರಸ್ಕರಿಸಿದ ನ್ಯಾಯಾಲಯ 7 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದೆ.