Advertisement

ಹಳ್ಳಿಗಳ ಸೌಂದರ್ಯ ವೃದ್ಧಿಗೆ ಸ್ವಚ್ಛ ಸಂಕೀರ್ಣ

12:18 PM Jan 02, 2022 | Team Udayavani |

ಬೆಂಗಳೂರು: ಹಳ್ಳಿಗಳನ್ನು ತ್ಯಾಜ್ಯಮುಕ್ತ ಮಾಡುವ ಉದ್ದೇಶದಿಂದ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಇದೀಗ ಗ್ರಾಮ ಪಂಚಾಯ್ತಿಗೊಂದು ಸ್ವಚ್ಛ ಸಂಕೀರ್ಣಯೋಜನೆ ರೂಪಿಸಿದೆ. ಸ್ವಚ್ಛ ಭಾರತ್‌ ಮಿಷನ್‌ಯೋಜನೆಯಡಿಯಲ್ಲಿ ಸ್ವಚ್ಛ ಸಂಕೀರ್ಣ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದೆ.

Advertisement

ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಐದು ತಾಲೂಕುಗಳು ಹಾಗೂ 20ಹೋಬಳಿಗಳಿವೆ. ಜತೆಗೆ 86 ಗ್ರಾಮ ಪಂಚಾಯ್ತಿಸೇರಿದಂತೆ ಒಟ್ಟು 588 ಹಳ್ಳಿಗಳಿವೆ. ಈ ಎಲ್ಲಾಪ್ರದೇಶಗಳನ್ನು ಕೇಂದ್ರಿಕರಿಸಿಯೇ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸ್ವಚ್ಛ ಸಂಕೀರ್ಣ ನಿರ್ಮಾಣ ಮಾಡುವ ಕಾರ್ಯದಲ್ಲಿ ಈಗಾಗಲೇ ನಿರತವಾಗಿದೆ.

ಎಂಭತ್ತಾರು ಗ್ರಾಮ ಪಂಚಾಯ್ತಿಗಳಲ್ಲಿ ಈಗ ಹದಿನಾರು ಸ್ವಚ್ಛ ಸಂಕೀರ್ಣಗಳು ನಿರ್ಮಾಣವಾಗಿದೆ.  ಹಾಗೆಯೇ ಐದು ನಿರ್ಮಾಣ ಹಂತದಲ್ಲಿವೆ. ಜತೆಗೆ 12 ಸ್ವಚ್ಛ ಸಂಕೀರ್ಣಗಳು ಟೆಂಡರ್‌ ಹಂತದಲ್ಲಿದೆ. ಇನ್ನೂ 12 ಟೆಂಡರ್‌ ಕರೆಯುವ ಹಂತದಲ್ಲಿದೆ ಎಂದು ಬೆಂಗಳೂರು ನಗರ ಜಿಪಂ ಸ್ವಚ್ಛ ಭಾರತ್‌ ಮಿಷನ್‌ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗ್ರಾಮಗಳಲ್ಲಿ ಜನಸಂಖ್ಯೆಯನ್ನು ಆಧರಿಸಿ ಸ್ವಚ್ಛ ಸಂಕೀರ್ಣ ನಿರ್ಮಾಣ ಮಾಡುವ ಕಾರ್ಯ ಈಗಾಗಲೇ ಸಾಗಿದೆ. ಸುಮಾರು 19 ಗ್ರಾಮ ಪಂಚಾಯ್ತಿಗಳಲ್ಲಿ ಜಾಗ ಗುರುತಿಸಲಾಗಿದೆ. ಇನ್ನೂ 11 ಗ್ರಾಮ ಪಂಚಾಯ್ತಿಗಳಲ್ಲಿ ಜಾಗ ಗುರುತಿಸುವಿಕೆ ಕಾರ್ಯ ನಡೆದಿದೆ. ಶೀಘ್ರದಲ್ಲೇ ಜಾಗ ಗುರುತಿಸಲಾಗುವುದು ಎಂದು ತಿಳಿಸಿದ್ದಾರೆ.

ಮಾರ್ಚ್‌ ಒಳಗೆ ಯೋಜನೆ ಪೂರ್ತಿ: ಕೆಲ ಗ್ರಾಮ ಪಂಚಾಯ್ತಿಗಳಲ್ಲಿ ಈಗಾಗಲೇ ಸ್ವಚ್ಛ ಸಂಕೀರ್ಣ ನಿರ್ಮಾಣ ಮಾಡಲಾಗಿದೆ. ಇನ್ನೂ ಕೆಲವು ಗ್ರಾಮ ಪಂಚಾಯ್ತಿಗಳಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಈ ವರ್ಷದ ಮಾರ್ಚ್‌ ಅಂತ್ಯದವೇಳೆಗೆ ಯೋಜನೆ ಪೂರ್ತಿಗೊಳಿಸಲಾಗುವುದುಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿಯ ಉಪ ಕಾರ್ಯದರ್ಶಿ ನೋಮೇಶ್‌ ಕುಮಾರ್‌ ಹೇಳಿದ್ದಾರೆ. ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಪ್ರತಿ ಹಳ್ಳಿಗಳು ಸ್ವಚ್ಛ ಮತ್ತು ಸುಂದರವಾಗಿ ಇರಿಸಬೇಕು ಎಂಬ ಉದ್ದೇಶದಿಂದ ಯೋಜನೆ ಈಗಾಗಲೇ ಜಾರಿಗೊಳಿಸಲಾಗಿದೆ ಮುಂದಿನ ದಿನಗಳಲ್ಲಿ ಯೋಜನೆ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ಜಾರಿಗೊಳಿಸುವ ಇರಾದೆ ಇದೆ ಎಂದು ತಿಳಿಸಿದ್ದಾರೆ.

Advertisement

ಸ್ವಚ್ಛ ಸಂಕೀರ್ಣಯೋಜನೆ ವೆಚ್ಚ ಎಷ್ಟು? :  ಸ್ವಚ್ಛ ಭಾರತ್‌ ಮಿಷನ್‌ ಮತ್ತು ಗ್ರಾಮ ಪಂಚಾಯ್ತಿಗಳ ಸ್ವಂತ ಅನುದಾನ ಬಳಕೆ ಮಾಡಿಕೊಂಡು ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಸ್ವಚ್ಛ ಸಂಕೀರ್ಣ ನಿರ್ಮಾಣ ಮಾಡಲಾಗುತ್ತದೆ. ಪ್ರತಿ ಗ್ರಾಮ ಪಂಚಾಯ್ತಿಗಳಲ್ಲಿ ಸ್ವಚ್ಛ ಸಂಕೀರ್ಣ ನಿರ್ಮಾಣ ಮಾಡಲು ಸುಮಾರು 20ರಿಂದ 30 ಲಕ್ಷ ರೂ. ವೆಚ್ಛವಾಗಲಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿಯಲ್ಲಿ ಹಳ್ಳಿಗಳನ್ನು ಸುಂದರವಾಗಿಡುವುದೇ ಮುಖ್ಯ ಉದ್ದೇಶವಾಗಿದೆ.ಆ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ವೈಜ್ಞಾನಿಕವಾಗಿ ಕಸವಿಲೇವಾರಿ ಮಾಡುವ ಕಾರ್ಯ ಈಗಾಗಲೆ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗಳಲ್ಲಿ ನಡೆಯುತ್ತಿದೆ. ಆದರೂ ಹಳ್ಳಿಗಳನ್ನು ಮತ್ತಷ್ಟು ತ್ಯಾಜ್ಯಮುಕ್ತ ಸುಂದರ ಹಳ್ಳಿಗಳನ್ನಾಗಿ ನಿರ್ಮಾಣ ಮಾಡುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯ್ತಿಗೊಂದು ಸ್ವಚ್ಛ ಸಂಕೀರ್ಣ ನಿರ್ಮಾಣ ಮಾಡುವ ಕೆಲಸ ಈಗಾಗಲೆ ಕೆಲವು ಕಡೆಗಳಲ್ಲಿ ಆರಂಭವಾಗಲಿದ್ದು, ಮಾರ್ಚ್‌ ಅಂತ್ಯದ ವೇಳೆ ಯೋಜನೆ ಪೂರ್ಣಗೊಳಿಸುವ ನಿರೀಕ್ಷೆಯಿದೆ. ನೋಮೇಶ್‌ ಕುಮಾರ್‌ , ಉಪ ಕಾರ್ಯದರ್ಶಿ ಬೆಂಗಳೂರು ನಗರ ಜಿಪಂ

ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next