ದರ್ಶನ್ ಅಭಿನಯದ “ಮುನಿರತ್ನ ಕುರುಕ್ಷೇತ್ರ’ ಮುಗಿದಿದೆ. ಮೇ 12ರಂದು “ಕುರುಕ್ಷೇತ್ರ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಭರ್ಜರಿಯಾಗಿಯೇ ನಡೆಯಲಿದೆ. ಅದಾದ ಬಳಿಕ ಬಹಳ ಕುತೂಹಲದಿಂದ ಕಾಯುತ್ತಿರುವ ಅವರ ಅಭಿಮಾನಿಗಳಿಗೆ “ಕುರುಕ್ಷೇತ್ರ’ ದರ್ಶನವೂ ಆಗಲಿದೆ. ಆದರೆ, ಯಾವಾಗ “ಕುರುಕ್ಷೇತ್ರ’ ದರ್ಶನ ಭಾಗ್ಯ ಎಂಬುದಿನ್ನೂ ಗೌಪ್ಯ. ಅದಕ್ಕೆ ಕಾರಣ, ನೀತಿ ಸಂಹಿತೆ.
ನಿರ್ಮಾಪಕ ಮುನಿರತ್ನ ಅವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವುದರಿಂದ ಚಿತ್ರದ ಬಗ್ಗೆ ಏನನ್ನೂ ಹೇಳುವಂತಿಲ್ಲ. ಮೇ12 ರಂದು ಚುನಾವಣೆ ನಡೆದು, ಸಂಜೆ ಹೊತ್ತಿಗೆ ನೀತಿ ಸಂಹಿತೆಗೆ ತೆರೆ ಬೀಳಲಿದೆ. ಅದಾದ ಬಳಿಕ ಅಂದೇ ಆಡಿಯೋ ಸಿಡಿಗೆ ಬಿಡುಗಡೆ ಭಾಗ್ಯ ದೊರೆಯಲಿದೆ. ಬಹುಶಃ ಅದೇ ವೇದಿಕೆ ಮೇಲೆ ಚಿತ್ರದ ಬಿಡುಗಡೆಯ ಘೋಷಣೆಯಾಗಲಿದೆ.
ಇದೆಲ್ಲಾ ಸರಿ, ದರ್ಶನ್ “ಕುರುಕ್ಷೇತ್ರ’ದ ದುಯೋಧನ ಆಗಿದ್ದಾಯ್ತು. ಮುಂದಾ? ಈ ಪ್ರಶ್ನೆಗೆ ಉತ್ತರ “ರಾವಣ’ ಎನ್ನಲಾಗುತ್ತಿದೆ ಒಂದು ಮೂಲ. ಹೌದು, ಮೂಲಗಳ ಪ್ರಕಾರ ದರ್ಶನ್ ಅವರು ಈಗ “ರಾವಣ’ ಎಂಬ ಸ್ಕ್ರಿಪ್ಟ್ ಓದುತ್ತಿದ್ದಾರೆ ಎನ್ನಲಾಗಿದೆ. ಈ ಹಿಂದೆ ದರ್ಶನ್ ಅವರು “ಪೌರಾಣಿಕ ಕಥೆಗಳು ಬಂದರೆ, ಅಂತಹ ಚಿತ್ರಗಳನ್ನು ಮಾಡಲು ಮುಂದೆ ಬಂದವರಿಗೆ ನನ್ನ ಮೊದಲ ಆದ್ಯತೆ.
ಕಮರ್ಷಿಯಲ್ ಚಿತ್ರಗಳಿದ್ದರೂ, ಅವೆಲ್ಲವನ್ನೂ ಬದಿಗೊತ್ತಿ, ಪೌರಾಣಿಕ ಚಿತ್ರಗಳಿಗೆ ಡೇಟ್ಸ್ ಕೊಡುತ್ತೇನೆ’ ಎಂದು ಹೇಳಿದ್ದರು. ಅದರಂತೆ, ಈಗ ದರ್ಶನ್ ಅವರು “ರಾವಣ’ ಎಂಬ ಸ್ಕ್ರಿಪ್ಟ್ ಕೇಳಿದ್ದು, ಅದನ್ನು ಓದುತ್ತಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಹಿರಿಯ ಕಲಾವಿದ ಶ್ರೀನಿವಾಸ ಮೂರ್ತಿ ಅವರು ದರ್ಶನ್ ಅವರಿಗೆ “ರಾವಣ’ ಕಥೆ ಹೇಳಿದ್ದು, ಅದರ ಸಂಪೂರ್ಣ ಸ್ಕ್ರಿಪ್ಟ್ ದರ್ಶನ್ ಓದಿದ ಬಳಿಕ ಅದಕ್ಕೆ ಒಂದು ಸ್ಪಷ್ಟತೆ ಸಿಗಲಿದೆ.
ಅಲ್ಲಿಗೆ ದರ್ಶನ್ “ಕುರುಕ್ಷೇತ್ರ’ ಬಳಿಕ “ರಾವಣ’ ಆದರೂ ಅಚ್ಚರಿ ಇಲ್ಲ. ದರ್ಶನ್ ಅವರಿಗೂ ಪೌರಾಣಿಕ ಚಿತ್ರಗಳ ಬಗ್ಗೆ ಅತೀವ ಪ್ರೀತಿ ಇದೆ. ಹಾಗಾಗಿ, ಅವರು ಅಂತಹ ಕಥೆಗಳನ್ನು ಕೇಳುವುದಾಗಿ ಹೇಳಿದ್ದರು. ಈ ಸಂದರ್ಭದಲ್ಲಿ ಪೌರಾಣಿಕ ಚಿತ್ರಗಳನ್ನು ಮಾಡುವುದೇ ಕಷ್ಟ. ಅಂತಹವರು ಮುಂದೆ ಬಂದರೆ, ದರ್ಶನ್ ಮಾಡದೇ ಇರುತ್ತಾರಾ?
ಒಂದಂತೂ ನಿಜ. ದರ್ಶನ್ ಈಗ ಆ ರೀತಿಯ ಸ್ಕ್ರಿಪ್ಟ್ ಬಂದರೆ ಖಂಡಿತ ಬಿಡೋದಿಲ್ಲ. ಅದರಲ್ಲೂ ಚಾಲೆಂಜಿಂಗ್ ಪಾತ್ರಗಳೆಂದರೆ ಅವರಿಗೆ ಮೊದಲಿನಿಂದಲೂ ಖುಷಿ. “ರಾವಣ’ ಆಗೋಕೆ ಅವರು ರೆಡಿನಾ? ಅದಕ್ಕೆ ಉತ್ತರ ಬೇಕಾದರೆ, ಇನ್ನಷ್ಟು ದಿನಗಳು ಬೇಕು.