Advertisement

ನೀರಿಲ್ಲದೇ ಒಣಗಿ ನಿಂತ ಸುವರ್ಣಾವತಿ ಜಲಾಶಯ

11:07 PM May 03, 2019 | Lakshmi GovindaRaj |

ಚಾಮರಾಜನಗರ: ತಾಲೂಕಿನ ಅಟ್ಟುಗುಳಿಪುರ ಗ್ರಾಮದ ಸಮೀಪವಿರುವ ಸುವರ್ಣಾವತಿ ಜಲಾಶಯ ಮಳೆಯ ಅಭಾವದಿಂದ ಬರಿದಾಗಿದ್ದು, ನೀರಿಲ್ಲದೇ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಗಳು ಒಣಗುತ್ತಿವೆ. ಅಟ್ಟುಗುಳಿಪುರ ಗ್ರಾಮದ ಬಳಿ ಈ ಜಲಾಶಯವನ್ನು ಸುವರ್ಣಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಇದರ ಒಟ್ಟು ಸಾಮರ್ಥ್ಯ 1.25 ಟಿಎಂಸಿ. ಪ್ರಸ್ತುತ ಜಲಾಶಯದಲ್ಲಿ ಕೇವಲ 0.4 ಟಿಎಂಸಿ ನೀರಿದೆ.

Advertisement

ಜಲಾಶಯದ ಒಟ್ಟು ಎತ್ತರ 55 ಅಡಿಗಳಿದ್ದು, ಪ್ರಸ್ತುತ 33 ಅಡಿಯಷ್ಟು ನೀರಿದೆ. 21 ಅಡಿಗಿಂತ ಕಡಿಮೆ ಇದ್ದರೆ ನೀರನ್ನು ಬಳಸಲಾಗುವುದಿಲ್ಲ. ಕಳೆದ ವರ್ಷ ಮೇ 3ರಂದು ಜಲಾಶಯದಲ್ಲಿ 31 ಅಡಿಯಷ್ಟು ನೀರಿತ್ತು. ಸುವರ್ಣಾವತಿ ಜಲಾಶಯದ ವ್ಯಾಪ್ತಿಗೆ ಒಟ್ಟು 7 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶ ಒಳಪಡುತ್ತದೆ. ಇದರಲ್ಲಿ ಬಲದಂಡೆ ನಾಲೆಗೆ 6,600 ಎಕರೆ ಪ್ರದೇಶ ಹಾಗೂ ಎಡದಂಡೆ ನಾಲೆಗೆ 400 ಎಕರೆ ಪ್ರದೇಶ ಒಳಪಡುತ್ತದೆ.

ತಮಿಳುನಾಡಿನ ದಿಂಬಂ, ಹಾಸನೂರು ಪ್ರದೇಶ, ಕರ್ನಾಟಕಕ್ಕೆ ಸೇರಿದ ಬೇಡಗುಳಿ ಜಲಾನಯನ ಪ್ರದೇಶಗಳಾಗಿವೆ. ಸಾಮಾನ್ಯವಾಗಿ ಈ ಜಲಾಶಯ ಮುಂಗಾರು ಮಳೆಗೆ ಭರ್ತಿಯಾಗುವುದಿಲ್ಲ. ಚಾಮರಾಜನಗರ ಜಿಲ್ಲೆಗೆ ಮುಂಗಾರು ಮಳೆ ಪ್ರತಿ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯುವುದಿಲ್ಲ. ಹಿಂಗಾರು ಮಳೆಯನ್ನೇ ನೆಚ್ಚಿಕೊಳ್ಳಬೇಕಾಗಿದೆ. ಸುವರ್ಣಾವತಿ ಜಲಾಶಯ ಸಹ ಹಿಂಗಾರು ಮಳೆಗೆ ಅಂದರೆ ಅಕ್ಟೋಬರ್‌ ಸಮಯದಲ್ಲಿ ಭರ್ತಿಯಾಗುತ್ತದೆ.

ಸುವರ್ಣಾವತಿ ಜಲಾಶಯದಿಂದ ಪೂರ್ಣ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ನೀರು ಹರಿಸಬೇಕೆಂದರೆ ಜಲಾಶಯ ಒಂದೇ ವರ್ಷದಲ್ಲಿ ಮೂರು ಬಾರಿ ಭರ್ತಿಯಾಗಬೇಕು. ಒಮ್ಮೆ ಭರ್ತಿಯಾದರೂ, ಕೆಲ ಭಾಗಗಳಿಗೆ ಮಾತ್ರ ನೀರು ಹರಿಸಲು ಸಾಧ್ಯ.

ಜಲಾಶಯದಿಂದ ನದಿ ನಾಲೆಗಳ ಮೂಲಕ ನೀರು ಹರಿಸಿದಾಗ ನೀರಿಲ್ಲದೇ ಒಣಗಿದ ನಾಲೆಗಳು, ಹಳ್ಳಗಳಿಂದಾಗಿ ಅರ್ಧಪ್ರದೇಶಕ್ಕೆ ಮಾತ್ರ ನೀರು ದೊರೆತು ಮುಂದಿನ ಜಮೀನುಗಳಿಗೆ ನೀರು ದೊರಕುವುದಿಲ್ಲ. ಕಳೆದ ವರ್ಷ ಸಮರ್ಪಕ ಮಳೆಯಾಗದೇ ಜಲಾಶಯ ಭರ್ತಿಯಾಗಲಿಲ್ಲ. ಹಾಗಾಗಿ ಈ ಬಾರಿ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ದೊರೆತಿಲ್ಲ.

Advertisement

ಅಚ್ಚುಕಟ್ಟು ಪ್ರದೇಶದ ಗ್ರಾಮಗಳಲ್ಲೊಂದಾದ ಆಲೂರಿನ ಅಚ್ಚುಕಟ್ಟು ವ್ಯಾಪ್ತಿಯ ರೈತರು ನೀರು ಬಿಟ್ಟಿಲ್ಲವೆಂದು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಿದ ಘಟನೆಯೂ ನಡೆಯಿತು.

ವರ್ಷದಲ್ಲಿ ಮೂರು ಬಾರಿ ಭರ್ತಿಯಾಗಬೇಕು: ಅಚ್ಚುಕಟ್ಟು ಪ್ರದೇಶಕ್ಕೆ ಸಂಪೂರ್ಣ ನೀರೊದಗಿಸಲು ಸುವರ್ಣಾವತಿ ಜಲಾಶಯ ವರ್ಷದಲ್ಲಿ ಮೂರು ಬಾರಿ ಭರ್ತಿಯಾಗಬೇಕು. ಆ ರೀತಿಯಾದರೆ ಮಾತ್ರ ಸಮರ್ಪಕ ನೀರು ಹರಿಸಲು ಸಾಧ್ಯ. ಕಳೆದ ಬಾರಿ ಸರಿಯಾಗಿ ಮಳೆಯಾಗದೇ ಜಲಾಶಯ ಭರ್ತಿಯಾಗಲಿಲ್ಲ.

ಮಲ್ಲೂಪುರ ಗ್ರಾಮದವರೆಗೆ ಮಾತ್ರ ನದಿ ನಾಲೆ ಮೂಲಕ ನೀರು ತಲುಪಿದೆ. ಮುಂದಿನ ಪ್ರದೇಶಗಳಲ್ಲಿ, ನೀರಿನ ಕೊರತೆ, ಮರಳಿನ ದೊಡ್ಡ ಹೊಂಡಗಳಿರುವುದರಿಂದ ನೀರು ಅಲ್ಲಲ್ಲೇ ಇಂಗಿ ಹೋಗಿದೆ. ಹೀಗಾಗಿ ಆಲೂರು ಪ್ರದೇಶಕ್ಕೆ ಜಲಾಶಯದಿಂದ ಬಿಟ್ಟ ನೀರು ತಲುಪುತ್ತಿಲ್ಲ ಎನ್ನುತ್ತಾರೆ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್‌ ರಾಜೇಂದ್ರಪ್ರಸಾದ್‌.

* ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next