Advertisement

ನೀರಸವಾಯ್ತು ಜಾನವಾರು ಜಾತ್ರೆ

11:38 AM Jan 19, 2019 | |

ವಿಜಯಪುರ: ಉತ್ತರ ಕರ್ನಾಟಕದಲ್ಲಿ ಅತಿ ದೊಡ್ಡ ಜಾನುವಾರು ಜಾತ್ರೆ ಎಂದೇ ಹೆಸರಾಗಿರುವ ವಿಜಯಪುರದ ಸಿದ್ದೇಶ್ವರ ಜಾನುವಾರು ಜಾತ್ರೆ ಈ ಬಾರಿ ನೀರಸವಾಗಿ ಮುಕ್ತಾಯ ಕಂಡಿದೆ. ಭೀಕರ ಬರದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅನ್ನದಾತರು ಜಾನುವಾರು ಮಾರಾಟಕ್ಕೆ ಮುಂದಾಗಿದ್ದರೂ ಕೊಳ್ಳುವವರು ಮಾತ್ರ ವಿರಳವಾಗಿದ್ದರಿಂದ ಎರಡು ದಿನಗಳ ಹಿಂದೆಯೇ ಜಾನುವಾರು ಜಾತ್ರೆ ಖಾಲಿಯಾಗಿದೆ.

Advertisement

ತಮ್ಮ ಮಕ್ಕಳಿಗಿಂತ ಹೆಚ್ಚಿನ ಪ್ರೀತಿಯಿಂದ ಸಾಕಿದ್ದ ಜಾನುವಾರುಗಳನ್ನು ರೈತರು ಕಣ್ಣೀರು ಹಾಕುತ್ತ ಮಾರಾಟಕ್ಕೆ ತಂದಿದ್ದರು. ಭೀಕರ ಬರದ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಅಗತ್ಯ ಪ್ರಮಾಣದ ಮೇವು ಹಾಗೂ ಸಮರ್ಪಕ ನೀರು ಒದಗಿಸಲಾಗದೇ ಆನ್ನದಾತ ಕಂಗಾಲಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾರಾಟಕ್ಕೆ ಅನ್ನದಾತರು ತಂದಿದ್ದ ಜಾನುವಾರುಗಳ ಸಂಖ್ಯೆಯೂ ವಿರಳ, ಮಾರಾಟವಾಗಿರುವ ಜಾನುವಾರುಗಳು ಕೂಡ ವಿರಳವೇ. ಕಳೆದ ವರ್ಷ ಬರ ಇದ್ದರೂ ಜಾನುವಾರು ಜಾತ್ರೆಗೆ 13 ಸಾವಿರ ಜಾನುವಾರುಗಳು ಬಂದಿದ್ದವು. ಆದರೆ ಈ ಬಾರಿ 10 ಸಾವಿರ ಜನಾನುವಾರು ಮಾರಾಟಕ್ಕೆ ಬಂದಿದ್ದರೂ ಖರೀದಿ ಆಗಿದ್ದು ಕೇವಲ 1,800 ಮಾತ್ರ.

ಅಲ್ಲದೇ ಸದರಿ ಜಾತ್ರೆಯಲ್ಲಿ ವಿವಿಧ ತಳಿಗಳ ದೇಶಿ ಉತ್ತಮ ರಾಸುಗಳಿಗೆ ನೀಡುವ ಬಹುಮಾನವನ್ನು ಜ. 15ರಂದೇ ನೀಡಲಾಗಿದೆ. ಆದ್ದರಿಂದ ಬಹುತೇಕ ಜಾನುವಾರುಗಳ ಮಾಲೀಕರು ಅಂದೇ ಮನೆಗೆ ತೆರಳಿದ್ದು, ಮರುದಿನ ಬಹುತೇಕ ಜಾನುವಾರು ಪರಿಸೆ ಖಾಲಿ ಆಗಲು ಆರಂಭಿಸಿತ್ತು. ಜ. 17ರಂದು ಸಂಪೂರ್ಣ ತೆರವಾಗಿತ್ತು. ಮಾರುವರು ಹೆಚ್ಚಿನ ಪ್ರಮಾಣದಲ್ಲಿದ್ದರೂ ಕೊಳ್ಳುವವರು ನಿರೀಕ್ಷಿತ ಪ್ರಮಾಣದಲ್ಲಿ ಆಗಮಿಸದ ಕಾರಣ ಈ ಬಾರಿಯ ಜಾನುವಾರು ಜಾತ್ರೆ ಖಾಲಿಯಾಗಿದೆ.

ಕಳೆದ ಸಲ ನೀರಿನ ಮಾಲಿನ್ಯದಿಂದ ನಾಲ್ಕು ಜಾನುವಾರುಗಳು ಮೃತಪಟ್ಟಿದ್ದವು. ಇದರಿಂದ ಈ ಬಾರಿಯ ಜಾನುವಾರು ಜಾತ್ರೆಯಲ್ಲಿ ಜಾನುವಾರು ಜಾತ್ರೆಗೆ ಸರಬರಾಜು ಮಾಡುವ ನೀರಿನ ಟ್ಯಾಂಕರ್‌ ಸ್ವಚ್ಛಗೊಳಿಸಿ, ಶುದ್ದಗೊಳಿಸಿ ನೀರು ಪೂರೈಕೆ ಮಾಡಲಾಗಿತ್ತು. ಆಲ್ಲದೇ ಈ ಬಾರಿಯ ಜಾತ್ರೆಯಲ್ಲಿ ಜನ-ಜಾನುವಾರಿಗಳಿಗೆ ದಿನದ 24 ಗಂಟೆಗಳ ಕಾಲ ಉತ್ತಮ ನೀರು ಪೂರೈಸಲಾಗಿತ್ತು. ಜಾತ್ರೆಯಲ್ಲಿ ನಿರಂತರ ವಿದ್ಯುತ್‌ ಪೂರೈಕೆ ಮಾಡಿದ್ದು ರೈತರು ಕತ್ತಲಲ್ಲಿ ಸಂಕಷ್ಟ ಎದುರಿಸುವುದು ತಪ್ಪಿದೆ.

ಇನ್ನು ಈ ಬಾರಿಯ ಜಾನುವಾರು ಜಾತ್ರೆಯಲ್ಲಿ ಪಶು ವೈದ್ಯಕೀಯ ಚಿಕಿತ್ಸೆ ಕೂಡ ಉತ್ತಮವಾಗಿತ್ತು. ಹಿಂದಿನ ವರ್ಷಗಳ ಜಾತ್ರೆಯಲ್ಲಿ ಪಶು ವೈದ್ಯಕೀಯ ಸೇವೆ ಕುರಿತು ದೂರುಗಳಿದ್ದವು. ಪರಿಣಾಮವೇ ಕಳೆದ ವರ್ಷದ ಜಾನುವಾರು ಜಾತ್ರೆಯಲ್ಲಿ 4 ಜಾನುವಾರು ಸಾವಿಗೀಡಾಗಿ ರೈತರು ಕಣ್ಣೀರು ಹಾಕುವಂತಾಗಿತ್ತು. ಆದರೆ ಈ ಬಾರಿ ಬೆಳಗ್ಗೆ 9ರಿಂದ ರಾತ್ರಿ 10ರವರೆಗೆ ಪಶು ವೈದ್ಯರು ಉತ್ತಮ ಚಿಕಿತ್ಸೆ ನೀಡುವ ಮೂಲಕ ಆನ್ನದಾತರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇದರ ಹೊರತಾಗಿಯೂ ಒಂದು ಎತ್ತು ಮೃತಪಟ್ಟಿದೆ.

Advertisement

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಜಾನುವಾರು ಜಾತ್ರೆ ಎರಡು-ಮೂರು ದಿನ ಮೊದಲೆ ಖಾಲಿಯಾಗಿದ್ದು ಗುರುವಾರ ಸಂಜೆಯಿಂದಲೇ ಜಾನುವಾರು ಜಾತ್ರೆಯ ಸ್ಥಳವನ್ನು ಸ್ವಚ್ಛಗೊಳಿಸುವ ಕೆಲಸ ಆರಂಭಗೊಂಡಿದೆ. ಜಾನುವಾರುಗಳ ಸೆಗಣಿ, ಅರೆ ತಿಂದ ಮೇವು, ಇತರತೆ ತ್ಯಾಜ್ಯಗಳನ್ನು ಸಾವಿಸುವಲ್ಲಿ ಸ್ವಚ್ಛತಾ ಸಿಬ್ಬಂದಿ ಕಾರ್ಯೋನ್ಮುಖವಾಗಿದೆ.

ಪ್ರತಿ ವರ್ಷ ಸಿದ್ದೇಶ್ವರ ಜಾತ್ರೆಗೆ ಬರುವ ವಿವಿಧ ತಳಿಯ ಉತ್ತಮ ಜಾನುವಾರುಗಳಿಗೆ 15 ಬಹುಮಾನ ನೀಡಲಾಗುತ್ತಿದ್ದು, ಈ ಬಾರಿ ಎರಡು ಪ್ರಶಸ್ತಿ ನೀಡಿಕೆಯನ್ನು ಪ್ರಾಯೋಜಕರು ನಿರಾಕರಿಸಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಭೀಕರ ಬರದಂತೆ ಪ್ರಶಸ್ತಿ ನೀಡಿಕೆಯಲ್ಲೂ ಬರ ಆವರಿಸಿದೆ. ಕೆಎಂಎಫ್ ನೀಡುತ್ತಿದ್ದ 10 ಸಾವಿರ ರೂ. ಮೌಲ್ಯದ ಪ್ರಶಸ್ತಿ ಹಾಗೂ ಜಿಪಂ ನೀಡುತ್ತಿದ್ದ 25 ಸಾವಿರ ರೂ. ಮೌಲ್ಯದ ಪ್ರಶಸ್ತಿಗಳನ್ನು ನೀಡಲು ಈ ಎರಡೂ ಸಂಸ್ಥೆಗಳು ನಿರಾಕರಿಸಿವೆ.

ಈ ಬಾರಿಯ ಜಾತ್ರೆಯಲ್ಲಿ ನಿರಂತರ ನೀರು, ವಿದ್ಯುತ್‌, ಪಶು ವೈದ್ಯಕೀಯ ಸೇವೆ ಸೇರಿದಂತೆ ಎಲ್ಲವೂ ಅತ್ಯಂತ ವ್ಯವಸ್ಥಿತವಾಗಿತ್ತು. ಭೀಕರ ಬರದ ಹಿನ್ನೆಲೆಯಲ್ಲಿ ಜಾನುವಾರುಗಳ ಸಂಖ್ಯೆಯೂ ಕಡಿಮೆ ಇದ್ದು, ಮಾರಾಟಕ್ಕೆ ಬಂದಿರುವ ಜಾನುವಾರುಗಳ ಸಂಖ್ಯೆಯೂ ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆಯೇ ಇದೆ. ಇತ್ತೀಚಿನ ವರ್ಷಗಳಲ್ಲಿ ಪ್ರಶಸ್ತಿ ವಿತರಣೆ ಆದನಂತರ ಜಾನುವಾರುಗಳ ಮಾಲೀಕರು ಹೊರಟು ಹೋಗುತ್ತಾರೆ. ಈ ಬಾರಿ ಸ್ವಲ್ಪ ಬೇಗ ಜಾತ್ರೆ ಮುಗಿದಿದೆ ಅಷ್ಟೇ.
•ರಮೇಶ, ಕಾರ್ಯದರ್ಶಿ,ಎಪಿಎಂಸಿ, ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next