Advertisement

ಸಾಂಸ್ಕೃತಿಕ ಅನನ್ಯತೆ ಉಳಿಸಲು ಸುಸಂಸ್ಕೃತರಾಗಿ: ಈಶ್ವರಪ್ಪ

08:37 AM Jan 31, 2019 | |

ದಾವಣಗೆರೆ: ಜಿಲ್ಲೆಯು ವಿಶಿಷ್ಟ ಬಗೆಯ ಅನನ್ಯತೆ ಒಳಗೊಂಡಿದ್ದು, ಅದನ್ನು ಉಳಿಸಿಕೊಳ್ಳಲು ಪ್ರತಿಯೊಬ್ಬರು ಸುಸಂಸ್ಕೃತರಾಗಬೇಕು ಎಂದು ನಿವೃತ್ತ ಪ್ರಾಂಶುಪಾಲ ಎಂ.ಜಿ. ಈಶ್ವರಪ್ಪ ಹೇಳಿದರು.

Advertisement

ವಿದ್ಯಾನಗರದ ಕುವೆಂಪು ಕನ್ನಡ ಭವನದಲ್ಲಿ ಬುಧವಾರ ನಡೆದ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಥಮ ಗೋಷ್ಠಿಯಲ್ಲಿ ಶೈಕ್ಷಣಿಕ ಅನನ್ಯತೆ ಕುರಿತು ಅವರು ಮಾತನಾಡಿದರು.

ದಾವಣಗೆರೆ 1900ರಲ್ಲಿ ಎಣ್ಣೆ ನಗರಿ ಆಗಿತ್ತು. ನಂತರ ನಿಧಾನಕ್ಕೆ ಹತ್ತಿ ಗಿರಣಿಗಳಾದವು. ಆಗ ಜನರು ಶೇಂಗಾ ಬಿಟ್ಟು ಹತ್ತಿ ಬೆಳೆದರು. ಆಗ ಡಿಸಿಎಂ ಟೌನೌಶಿಪ್‌ ಅಂತಾರಾಷ್ಟ್ರೀಯ ಕಾಟನ್‌ ಮಿಲ್‌ ಆಗಿ ಪ್ರಸಿದ್ಧವಾಯಿತು. ಆಮೇಲೆ ಹತ್ತಿ ಬೆಳೆಯುವುದು ಕಡಿಮೆ ಮಾಡಿದರು. ಹತ್ತಿ ಗಿರಣಿ ಕಡಿಮೆಯಾದವು. ನಂತರ ಕಾರ್ಮಿಕರ ಸಮಸ್ಯೆ ಹೆಚ್ಚಾಯಿತು. ಆಗ ಜನ ಅಕ್ಕಿ ಬೆಳೆದ ಬಳಿಕ ಅಕ್ಕಿ ಗಿರಣಿಗಳಾದವು. ಇನ್ನೂ ಹೆಚ್ಚಾಗಿ ಮೆಕ್ಕೆಜೋಳ ಬೆಳೆಯುತ್ತಿದ್ದು, ಅವನ್ನು ಕೋಳಿಗಳು ತಿನ್ನುತ್ತಿವೆ, ಕೋಳಿಗಳನ್ನು ನಾವು ತಿನ್ನುತ್ತಿದ್ದೇವೆ ಎಂದು ಜಿಲ್ಲೆಯಲ್ಲಿ ಬದಲಾದ ಅನನ್ಯತೆ ಬಗ್ಗೆ ವಿವರಿಸಿದರು.

ಬ್ರಿಟಿಷ್‌ ಅಧಿಕಾರಿ ಪ್ರಾಂಚೀಸ್‌ ಬುಕಾನ್‌ ಇಲ್ಲಿ ಏನೇನು ಸಂಪತ್ತು ಇದೆ ಎಂದು ದಾವಣಗೆರೆ ಜಿಲ್ಲೆಯ ಅಧ್ಯಯನಕ್ಕೆ ಬಂದರು. ಸಾಸ್ವೇಹಳ್ಳಿ, ಬಸವಾಪಟ್ಟಣ, ಮಲೇಬೆನ್ನೂರು, ಹರಿಹರಕ್ಕೆ ಹೋಗಿ ಅಲ್ಲಿನ ಶಾಸನಗಳನ್ನು ಅಭ್ಯಾಸ ಮಾಡಿದರು. ಈ ಬಗ್ಗೆ ಜನರಲ್ಲಿ ಏನು ಬರೆದಿದೆ ಎಂದು ಜನರನ್ನು ಕೇಳಿದರು. ಆಗ ಗೊತ್ತಿಲ್ಲ ಎಂದು ತಿಳಿಸುತ್ತಾರೆ. ಆನಂತರ ದಾವಣಗೆರೆಗೆ ಬರುತ್ತಾನೆ. ಕುದುರೆಗೆ ಜ್ವರ ಬರುತ್ತದೆ. ಒಂದು ದಿನ ಹೆಚ್ಚು ಇಲ್ಲಿಯೇ ನೆಲೆಸುತ್ತಾನೆ. ಆಗ ದಾವಣಗೆರೆ ನಗರದಲ್ಲಿ ಕೇವಲ 500 ಮನೆಗಳಿದ್ದವು. ನಂತರ ಹರಪನಹಳ್ಳಿಯಿಂದ ಕುರಬರನ್ನು ಕರೆಸಿ ಕುರಿಗಳ ಪೋಷಣೆ ಮತ್ತು ಅದರ ಉಣ್ಣೆಯಿಂದ ಮಾಡುವ ಕಂಬಳಿ ಬಗ್ಗೆ ಮಾಹಿತಿ ಪಡೆದುಕೊಂಡು ಹೋಗುತ್ತಾನೆ. ಆದರೆ, ಎಲ್ಲಿಯೂ ಕೂಡ ಶಿಕ್ಷಣದ ಬಗ್ಗೆ ಮಾತನಾಡುವುದಿಲ್ಲ. ನಮ್ಮಲ್ಲಿನ ಸಂಪತ್ತಿನ ಬಗ್ಗೆ ಮಾತ್ರ ಮಾಹಿತಿ ಪಡೆಯುತ್ತಾರೆ ಎಂದು ತಿಳಿಸಿದರು.

ಗಿರಣಿಗಳು ರೋಗಗ್ರಸ್ಥವಾದಾಗ ದಾವಣಗೆರೆ ಮ್ಯಾಂಚೆಸ್ಟರ್‌ ಹೋಗಿ ಆಕ್ಸ್‌ಫರ್ಡ್‌ ಆಗಿ ಬದಲಾಯಿತು. ಇದೀಗ ವೆಟರ್ನರಿ, ಅಗ್ರಿಕಲ್ಚರ್‌ ಬಿಟ್ಟರೆ ಮಿಕ್ಕೆಲ್ಲಾ ಶಿಕ್ಷಣ ಸಂಸ್ಥೆಗಳು ಇವೆ. ಆದರೆ, ಅಕ್ಷರ ಸಂಸ್ಕೃತಿ ಬಂದ ಮೇಲೆ ನಮ್ಮಲ್ಲಿ ಸಂಸ್ಕೃತಿ ಬಂತಾ ಎಂದು ಪ್ರಶ್ನಿಸಿಕೊಳ್ಳಬೇಕಿದೆ. ಏಕೆಂದರೆ ಒಬ್ಬ ವಿದ್ಯಾರ್ಥಿಗೆ ಒಂದು ತರಕಾರಿಯ ಸೊಪ್ಪಿನ ಬಗ್ಗೆ ಮಾಹಿತಿ ಇಲ್ಲದಿದ್ದರೆ, ನಮ್ಮ ಪಠ್ಯಪುಸ್ತಕಗಳಲ್ಲಿ ಏನನ್ನು ತಿಳಿಸಲಾಗುತ್ತಿದೆ ಎಂಬುದನ್ನು ವಿಚಾರ ಮಾಡಬೇಕು. ಮೊದಲು ಪಠ್ಯೇತರ ಮೌಲ್ಯಯುತ ಶಿಕ್ಷಣದ ಜ್ಞಾನ ಬಿತ್ತುವುದು ಎಲ್ಲ ಶಿಕ್ಷಕರು, ಪೋಷಕರ ಜವಾಬ್ದಾರಿಯಾಗಿದೆ ಎಂದರು.

Advertisement

ಪ್ರಸ್ತುತ ನಾವು ಓದುತ್ತಿದ್ದೇವೆ. ಆದರೆ, ಅದನ್ನು ಅನ್ವಯ ಮಾಡುತ್ತಿಲ್ಲ. ಹಳಬರÇ್ಲೆ ಜನಪದ ಅಡಗಿದೆ ವಿನಃ ಹೊಸಬರಲಿಲ್ಲ. ಡೊಳ್ಳು ಬೀರಲಿಂಗೇಶ್ವರ ಜಾತ್ರೆಗೆ ಸೀಮಿತವಾಗಿದ್ದು, ಇದೀಗ ಮೆರವಣಿಗೆಗೆ ಬಂತು ನಿಂತಿದೆ. ಹಾಗಾಗಿ ಸಾಂಸ್ಕೃತಿಕ ಅನನ್ಯತೆ ಉಳಿಸಲು ಸುಸಂಸ್ಕೃತವಾಗಬೇಕಿದೆ ಎಂದರು.

ನಿವೃತ್ತ ಪ್ರಾಂಶುಪಾಲ ಎಚ್.ವಿ. ವಾಮದೇವಪ್ಪ ಅಭಿವೃದ್ಧಿ ಅನನ್ಯತೆ ಕುರಿತು ಮಾತನಾಡಿ, ಮಧ್ಯಕರ್ನಾಟಕದ ಕೇಂದ ಸ್ಥಾನದಲ್ಲಿರುವ ಜಿಲ್ಲೆ ದಾವಣಗೆರೆ. ಯಾವುದೇ ಪ್ರಕೃತಿ ವಿಕೋಪ ಇಲ್ಲದ ಸುರಕ್ಷಿತ ಜಿಲ್ಲೆಯಾಗಿದೆ. ಅದಕ್ಕಾಗಿ ಈ ಭಾಗಕ್ಕೆ ಬರುವ ಜನಸಂಖ್ಯೆ ಹೆಚ್ಚಿದೆ. 6 ತಾಲ್ಲೂಕುಗಳಲ್ಲಿ 4 ಕಡೆ ನೀರಾವರಿ ಸಮೃದ್ಧವಾಗಿದ್ದರೂ, ಜಗಳೂರು, ಹರಪನಹಳ್ಳಿ 2 ಅತ್ಯಂತ ಹಿಂದುಳಿದ ಬಿಸಿಲ ತಾಲೂಕುಗಳಾಗಿವೆ. ಅವುಗಳನ್ನು ಇಂದು ಅಭಿವೃದ್ಧಿ ಮಾಡದೇ ಬಿಟ್ಟಿರುವುದರಿಂದಲೇ ಅವು ಬೇರೆ ತಾಲೂಕು ಆಗಲು ಕಾರಣವಾಗಿದೆ. ನ್ಯಾಮತಿ, ಹೊನ್ನಾಳಿ, ಚನ್ನಗಿರಿ ಜನರಲ್ಲೂ ಭಾವನಾತ್ಮಕ ಬೆಸುಗೆ ಆಗಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲಾ ಭಾಗಗಳನ್ನು ಭಾವನಾತ್ಮಕವಾಗಿ ಸ್ವೀಕರಿಸಬೇಕು ಎಂದು ತಿಳಿಸಿದರು.

ರಂಗಕರ್ಮಿ ಮಲ್ಲಿಕಾರ್ಜುನ ಕಡಕೋಳ ಸಾಂಸ್ಕೃತಿಕ ಅನನ್ಯತೆ ಕುರಿತು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮನುಷ್ಯ ಸಂಸ್ಕೃತಿ ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಧರ್ಮವೇ ಸಂಸ್ಕೃತಿ ಎಂಬಂತಾಗಿದೆ. ಧರ್ಮ ಸಂಸ್ಕೃತಿಯ ಒಂದು ಭಾಗ ಎಂಬುದು ನೇಪತ್ಯಕ್ಕೆ ಸರಿದುಹೋಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಪ್ಪಟ ಜೀವ ಸಂಸ್ಕೃತಿಯ ಹುಡುಕಾಟ ಕಷ್ಟಕರವಾದುದು. ಮನುಷ್ಯ ಮನುಷ್ಯರ ನಡುವೆ ಅಂತರ ಹೆಚ್ಚುತ್ತಿದೆ. ಹಾಗಾಗಿ ಒಂಟಿ ಎಂಬ ಭಾವನೆ ಮೂಡುತ್ತಿದೆ. ಆದರೂ ಪಠ್ಯಕೇಂದ್ರವಾಗಿದ್ದ ಸಾಹಿತ್ಯ ಅಧ್ಯಯನ ಸಂಸ್ಕೃತಿಯ ಕೇಂದ್ರವಾಗುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಬಿ. ವಾಮದೇವಪ್ಪ ಸ್ವಾಗತಿಸಿದರು. ಮಂಜುನಾಥ ಇ.ಎಂ. ವಂದಿಸಿದರು. ಸಾಲಿಗ್ರಾಮ ಗಣೇಶ್‌ ಶೆಣೈ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next