Advertisement

ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆ: 6ನೇ ಸ್ಥಾನದಲ್ಲಿ ಕರ್ನಾಟಕ !

01:57 PM Dec 23, 2020 | Mithun PG |

ಬೆಂಗಳೂರು: ವಿಶ್ವಸಂಸ್ಥೆಯು ನೀಡಿರುವ ಸುಸ್ಥಿರ ಅಭಿವೃದ್ಧಿಯ 17 ಗುರಿಗಳ ಸಾಧನೆಯಲ್ಲಿ ಕರ್ನಾಟಕವು ದೇಶದಲ್ಲಿ 6ನೇ ಸ್ಥಾನದಲ್ಲಿದೆ. ಇದನ್ನು ಇನ್ನಷ್ಟು ಉತ್ತಮಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Advertisement

ಯೋಜನಾ ಇಲಾಖೆಯು ಸಿದ್ಧ ಪಡಿಸಿರುವ ಇಂದು ಸುಸ್ಥಿರ ಅಭಿವೃದ್ಧಿ ಗುರಿಗಳ ಮುನ್ನೋಟ 2030 ರ ಕ್ರಿಯಾ ಯೋಜನೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಬಿಡುಗಡೆ ಮಾಡಿ ಮಾತನಾಡಿದರು.

ಸುಸ್ಥಿರ ಅಭಿವೃದ್ಧಿ ಗುರಿಗಳ ಮುನ್ನೋಟ 2030ರ ಕಾರ್ಯತಂತ್ರ ಮತ್ತು ಕ್ರಿಯಾ ಯೋಜನೆಯು ಮುಂದಿನ 10 ವರ್ಷಗಳ ರಾಜ್ಯದಲ್ಲಿ ಸುಸ್ಥಿರ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಪೂರಕವಾದ ಮಾರ್ಗಸೂಚಿಗಳನ್ನು ಒದಗಿಸುತ್ತದೆ. ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ದೃಷ್ಟಿಕೋನವನ್ನು ಅನುಷ್ಠಾನಕ್ಕೆ ತರಲು ಇದು ಸಹಕಾರಿಯಾಗಿದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

ರಾಜ್ಯದ ಎಲ್ಲ ಜನರಿಗೆ ಉತ್ತಮ ಜೀವನೋಪಾಯ, ಸ್ವಚ್ಛ ಪರಿಸರ, ಉತ್ತಮ ರೋಗ್ಯ, ಗುಣಮಟ್ಟದ ಶಿಕ್ಷಣ, ಪೌಷ್ಟಿಕ ಆಹಾರ ಇತ್ಯಾದಿ ಗುರಿಗಳನ್ನು ತಲುಪಲು ಈ ಕ್ರಿಯಾ ಯೋಜನೆ ಒತ್ತು ನೀಡುತ್ತದೆ. ಹೆಚ್ಚು ಸುಧಾರಣೆಯ ಅಗತ್ಯವಿರುವ ಪ್ರದೇಶ ಮತ್ತು ಕಾರ್ಯಕ್ರಮಗಳಿಗೆ ಮುಂದಿನ ಆಯವ್ಯಯದಲ್ಲಿ ಅಗತ್ಯ ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಇದನ್ನೂ ಓದಿ: ರಾಜ್ಯಾಂದ್ಯಂತ 9 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿ; ಹೊಸ ವರ್ಷಾಚರಣೆಗೆ ಬ್ರೇಕ್ !

Advertisement

ಕರ್ನಾಟಕ ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಅವರು ಮಾತನಾಡಿ, ತಾವು ಕರ್ನಾಟಕಕ್ಕಿಂತ ಉತ್ತಮ ಶ್ರೇಯಾಂಕ ಹೊಂದಿರುವ ಕೇರಳ, ಗುಜರಾತ್ ಮತ್ತು ಇತರ ರಾಜ್ಯಗಳಿಗೆ ಭೇಟಿ ನೀಡಿದ್ದು, ಆ ರಾಜ್ಯಗಳಲ್ಲಿ ಸುಸ್ಥಿರ ಅಭಿವೃದ್ಧಿ ಗುರಿ 2030 ಸಾಧನೆಗೆ ಕೈಗೊಂಡಿರುವ ಕ್ರಮಗಳ ಕುರಿತು ಅಧ್ಯಯನ ನಡೆಸಲಾಗಿದೆ. ಇದರ ವಿವರಗಳನ್ನು ಯೋಜನಾ ಮಂಡಳಿಯ ಸಭೆಯಲ್ಲಿ ಪ್ರಸ್ತುತ ಪಡಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು, ಕೇಂದ್ರ ಸರ್ಕಾರದ ನೀತಿ ಆಯೋಗದ ಸೂಚನೆಯಂತೆ ಸುಸ್ಥಿರ ಅಭಿವೃದ್ಧಿಯ 17 ಗುರಿ ಸಾಧನೆಗೆ ನಿವೃತ್ತ/ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು. ಈ ಅಧಿಕಾರಿಗಳ ಸಮಿತಿಗಳು ಕಾರ್ಯಯೋಜನೆಗಳನ್ನು ರೂಪಿಸಿ, ಸಲ್ಲಿಸಿದ್ದು, ಇವುಗಳನ್ನು ಆಯವ್ಯಯದಲ್ಲಿ ಅಳವಡಿಸುವ ಕುರಿತಾಗಿ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುತ್ತಿದೆ ಎಂದು ವಿವರಿಸಿದರು.

ಯೋಜನಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಮಾತನಾಡಿ, ನೀತಿ ಆಯೋಗ ಬಿಡುಗಡೆ ಮಾಡಿದ 2019ರ ಎಸ್ ಡಿ ಜಿ ಇಂಡಿಯಾ ಇಂಡೆಕ್ಸ್ ನಲ್ಲಿ ಕರ್ನಾಟಕ 66 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಕಡಿಮೆ ಅಂಕ ಪಡೆದಿರುವ ಗುರಿಗಳನ್ನು ಸಾಧಿಸಲು ಆದ್ಯತೆ ನೀಡುವ ಮೂಲಕ ಕರ್ನಾಟಕದ ಶ್ರೇಯಾಂಕವನ್ನು ಉತ್ತಮಪಡಿಸಬಹುದಾಗಿದೆ ಎಂದು ವಿವರಿಸಿದರು.

ಇದನ್ನೂ ಓದಿ:  ಜಮ್ಮು-ಡಿಡಿಸಿ ಚುನಾವಣೆ: 11 ಮತಗಳ ಅಂತರದಿಂದ ಬಿಜೆಪಿ ಮಾಜಿ ಸಚಿವ ಚೌಧರಿಗೆ ಸೋಲು

ಕಾರ್ಯಕ್ರಮದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next