ಎರಡು ವರ್ಷಗಳ ಹಿಂದಿನ ಘಟನೆಯಿದು. ನಾನು ಕಚೇರಿ ಕೆಲಸ ಮುಗಿಸಿ ಊರಿಗೆ ಹೋಗುವ ಸಂಭ್ರಮದೊಂದಿಗೆ ಬಸ್‌ಸ್ಟಾಂಡ್‌ಗೆ ಪ್ರಯಾಣ ಬೆಳೆಸಿದೆ. ಆದಾಗಲೇ ಬಸ್ ಹೊರಡುವ ಸಮಯವಾಗಿದ್ದರಿಂದ ತರಾತುರಿಯಲ್ಲಿ ಬಸ್ ಹತ್ತಿ ನನ್ನ ಸೀಟ್ ಸಿಕ್ಕ ಖುಷಿಯಲ್ಲಿ ದೀರ್ಘ ನಿಟ್ಟುಸಿರು ಬಿಡುತ್ತಾ ಆರಾಮಾಗಿ ಕುಳಿತೆ. ಕೆಲಸದ ಆಯಾಸದಿಂದ ಅಲ್ಲೇ ನಿದ್ರಾಲೋಕಕ್ಕೆ ಜಾರಿದೆ.
ಬಸ್ ಹೊರಟು ಒಂದು ಗಂಟೆ ನಂತರ, ನನ್ನ ಪಕ್ಕದ ಸೀಟಿನಲ್ಲಿ ಒಂದು ಹುಡುಗ- ಹುಡುಗಿ ಬಂದು ಕುಳಿತರು. ನಾನು ನಿದ್ರಾಲೋಕದಲ್ಲಿ ಇದ್ದುದರಿಂದ ಅಷ್ಟಾಗಿ ಅವರನ್ನು ಗಮನಿಸಲಿಲ್ಲ. ಗಾಢ ನಿದ್ದೆಯಲ್ಲಿದ್ದ ನನಗೆ ಕಂಡಕ್ಟರ್ ಚಾ/ತಿಂಡಿಗೆ ಹತ್ತು ನಿಮಿಷ ಸಮಯವಿದೆ ಎಂದು ಜೋರಾಗಿ ಹೇಳುತ್ತಾ ನಮ್ಮ ಸೀಟಿನ ಬದಿಗೆ ಬಂದಾಗ ಎಚ್ಚರವಾಯಿತು.
ಆದಾಗಲೇ ಪಕ್ಕದ ಸೀಟಿನವರು ಚಾ ಕುಡಿಯಲು ಹೊರಟು ಹೋಗಿಯಾಗಿತ್ತು. ನಾನು ಚಾ ಕುಡಿದು ನನ್ನ ಸೀಟಿನಲ್ಲಿ ಕುಳಿತು, ಆಗಸದ ಚಂದ್ರನನ್ನು ದಿಟ್ಟಿಸಿ ನೋಡುತ್ತಿರುವಾಗ ನಮ್ಮ ಕಚೇರಿಯ ಮಹಿಳಾ ಸಹೋದ್ಯೋಗಿ ನಮ್ಮ ಬಸ್ ಕಡೆ ಬರುವುದನ್ನು ಗಮನಿಸಿದೆ. ನನ್ನ ಮುಖವನ್ನು ಬಾಟಲಿ ನೀರಿನಲ್ಲಿ ತೊಳೆದು ಮತ್ತೆ ಸರಿಯಾಗಿ ನೋಡಿದೆ. ಹೌದು ಅವಳೇ… ನೀಲಿ ಕಣ್ಣಿನ ಸುಂದರಿ!
ಅವಳು ಬಂದು ನನ್ನ ಪಕ್ಕದ ಸೀಟಿನಲ್ಲಿ ಹುಡುಗನೊಬ್ಬನ ಜೊತೆ ಕುಳಿತಾಗ ನನಗೆ ಅಚ್ಚರಿ. ವಾರೆ ಕಣ್ಣಿನಲ್ಲಿ ನೋಡುತ್ತಾ ಗಾಢ ನಿದ್ರೆಯಲ್ಲಿ ಇರುವ ಹಾಗೆ ನಟನೆ ಮಾಡಿದೆ. ಆದರೆ ಮನದಲ್ಲಿ ನೂರಾರು ಆಲೋಚನೆ! ಅವಳ ಬಳಿಯಿದ್ದ ದೃಢಕಾಯ ಶರೀರದ ಹುಡುಗ ಯಾರಿರಬಹುದು? ಇವರಿಬ್ಬರೂ ಎಲ್ಲಿಗೆ ಹೋಗುತ್ತಿರಬಹುದು? ಸಂಬಂಧಿಕನಾ? ಅಥವಾ ಪರಿಚಯದವನಾ? ಹೀಗೆ ಏನೇನೋ ಆಲೋಚನೆಗಳಿಗೆ ಉತ್ತರ ಹುಡುಕುತ್ತಿರುವಾಗ ಆ ಹುಡುಗಿ ನನ್ನನ್ನು ನೋಡಿ “ನೀವಾ ಸಾರ್! ನಾನು ನೋಡಿರಲೇ ಇಲ್ಲ. ಸಾರೀ ಸಾರ್. ಅಜ್ಜಿ ಮನೆಯಲ್ಲಿ ಕಾರ್ಯಕ್ರಮ ಇರುವುದರಿಂದ ನಾನು ಮತ್ತು ಅಣ್ಣ ಹಾಸನಕ್ಕೆ ಹೋಗುತ್ತಿದ್ದೇವೆ’ ಎಂದಾಗ ನನ್ನ ಮನಸ್ಸು ನಿರಾಳವಾಯಿತು. ಸಾವರಿಸಿಕೊಂಡು ಹ್ಯಾಪಿ ಜರ್ನಿ ಹೇಳುತ್ತಾ ನನ್ನ ಸ್ಟಾಪ್‌ನಲ್ಲಿ ಇಳಿದೆ. ಇದೇ ಕಾರಣಕ್ಕೆ ಹಿರಿಯರು ಹೇಳಿರಬಹುದು, “ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು’ ಎಂದು.
– ಅಶೋಕ್ ಕುಲಾಲ್ ಬಂಟ್ವಾಳ