ಕೊಪ್ಪ: ತಾಲೂಕಿನ ಭುವನಕೋಟೆಯಲ್ಲಿ ಕಳೆದ 15 ದಿನಗಳಿಂದ ಏಳು ಜಾನುವಾರುಗಳು ಅನುಮಾನಸ್ಪದವಾಗಿ ಮೃತಪಟ್ಟಿದ್ದು, ಒಂದು ದನ ಕಾಣೆಯಾಗಿದೆ. ಜಾನುವಾರುಗಳ ಸಾವಿಗೆ ವಿಷಾಹಾರ ಸೇವನೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.
ಘಟನೆಯ ಕುರಿತು ಕಿಶೋರ್ ಎಂಬವರು ಜಯಪುರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಭುವನಕೋಟೆಯ ಕಿಶೋರ್‌ರವರ ಒಂದು ಆಕಳು ಸಾವನ್ನಪ್ಪಿದ್ದರೆ, ಒಂದು ಆಕಳು ಕಾಣೆಯಾಗಿದೆ. ಜಯಲಕ್ಷ್ಮೀ ಎನ್ನುವವರ ಎರಡು ದನಗಳು ಸಾವಿಗೀಡಾಗಿವೆ.
ರತ್ನಾಕರ ಅವರ 3 ದನಗಳು ಶನಿವಾರ ಮೃತಪಟ್ಟಿದ್ದು, ಒಟ್ಟು 4 ದನಗಳು ಸಾವನ್ನಪ್ಪಿವೆ. ಈ ಪೈಕಿ 2 ದನಗಳು 20 ದಿನದ ಹಿಂದೆ ಕರು ಹಾಕಿದ್ದು ಇನ್ನೆರಡು ದನಗಳು 1 ತಿಂಗಳ ಹಿಂದೆ ಕರುಹಾಕಿವೆ. ಈಗ ನಾಲ್ಕೂ ಕರುಗಳು ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿವೆ. ಇವರ ಮನೆ ಪಕ್ಕದಲ್ಲಿ ಸುಬ್ರಹ್ಮಣ್ಯ ಎಂಬವರ ತೋಟವಿದ್ದು, 2 ದನಗಳು ತೋಟದೊಳಗೆ ಸಾವನ್ನಪ್ಪಿದ್ದರೆ ಇನ್ನುಳಿದವು ತೋಟದ ಹೊರಭಾಗದಲ್ಲಿ ಮೃತಪಟ್ಟಿವೆ.
ಜಾನುವಾರುಗಳು ಮೃತಪಟ್ಟಿದ್ದ ಜಾಗದಲ್ಲಿ ಗದ್ದೆಗೆ ಬಳಕೆ ಮಾಡುವ ಕೀಟನಾಶಕ ಟೀಮೇಟ್‌ನ ವಾಸನೆ ಬರುತ್ತಿದ್ದು, ದುಷ್ಕರ್ಮಿಗಳು ಜಾನುವಾರುಗಳನ್ನು ಸಾಯಿಸಲು ಟೀಮೇಟ್ ಬೆರೆಸಿದ ಆಹಾರ ಇಟ್ಟಿದ್ದು ಇದರ ಸೇವನೆಯಿಂದ ಜಾನುವಾರುಗಳು ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ.
ಕಳೆದ ಹತ್ತು ಹದಿನೈದು ದಿನಗಳಿಂದ ನಮ್ಮ ಮನೆ ಹಾಗೂ ಅಕ್ಕಪಕ್ಕದ ಮನೆಯ ದನಗಳು ಅನುಮಾನಸ್ಪದವಾಗಿ ಸಾವನ್ನಪ್ಪುತ್ತಿವೆ. ಈವರೆಗೆ 7 ದನಗಳು ಮೃತಪಟ್ಟಿದ್ದು ಒಂದು ದನ ಕಾಣೆಯಾಗಿದೆ. ವಿಷಾಹಾರ ಸೇವನೆಯಿಂದ ಜಾನುವಾರುಗಳು ಮೃತಪಟ್ಟಿರುವ ಶಂಕೆಯಿದ್ದು ಪಕ್ಕದ ತೋಟದ ಮಾಲೀಕರು ಟೀಮೇಟ್ ಮಿಶ್ರಿತ ವಿಷಾಹಾರ ಇಟ್ಟು ಜಾನುವಾರುಗಳನ್ನು ಸಾಯಿಸಿರಬಹುದು.ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಿ ನಮಗೆ ನ್ಯಾಯ ಕೊಡಿಸಬೇಕು ಕಿಶೋರ್ ಕುಮಾರ್, ಭುವನಕೋಟೆ, ದೂರುದಾರ