ವಿಜಯಪುರ: ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ನಕಲು ಮಾಡಲು ಚೀಟಿ ಕೊಡಲು ಹೋಗಿದ್ದ ಯುವಕ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ಜಿಲ್ಲೆಯಲ್ಲಿ ಶನಿವಾರ ಜರುಗಿದೆ.
ಅನುಮಾನಾಸ್ಪ ರೀತಿಯಲ್ಲಿ ಮೃತಪಟ್ಟ ಯುವಕನನ್ನು ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕಾನಾಳ ಗ್ರಾಮದ ಸಾಗರ ಚಲವಾದಿ (19) ಎಂದು ಗುರುತಿಸಲಾಗಿದೆ.
ಹೂವಿನಹಿಪ್ಪರಗಿ ಗ್ರಾಮದ ವಿಶ್ವಚೇತನ ಪರೀಕ್ಷಾ ಕೇಂದ್ರಕ್ಕೆ ಇಂದು ಈತ ನುಗ್ಗಿ ನಕಲು ಮಾಡಲು ಕಾಪಿ ಚೀಟಿ ಕೊಡುವ ಪ್ರಯತ್ನ ಮಾಡಿದ್ದ. ಈ ವೇಳೆ ಪೊಲೀಸರು ಯುವಕನನ್ನು ಬೆನ್ನಟ್ಟಿ ಹಿಡಿದು, ಲಾಠಿ ರುಚಿ ತೋರಿಸಿದ್ದಾರೆ. ಈ ಹಂತದಲ್ಲಿ ಯುವಕ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಪೊಲೀಸರ ಹೊಡೆತಕ್ಕೆ ತಮ್ಮ ಮಗ ಮೃತಪಟ್ಟಿದ್ದಾನೆ ಎಂದು ಯುವಕ ಕುಟುಂಬ ಸದಸ್ಯರು ಆರೋಪಿಸುತ್ತಿದ್ದಾರೆ. ಆದರೆ ಹೃದಯ ಸಂಬಂಧಿ ಕಾಯಿಲೆ ಇದ್ದ ಕಾರಣ ಯುವಕ ಪೊಲೀಸರ ಬಂಧನದಿಂದ ಗಾಬರಿಗೊಂಡು ಹೃದಯಾಘಾತವಾಗಿ ಮೃತಪಟ್ಟಿದ್ದಾನೆಂದು ಪೊಲೀಸರು ವಾದಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ಪಾರದರ್ಶಕವಾಗಿ ನಡೆಸಲು ಜಿಲ್ಲಾಡಳಿತ ಕೈಗೊಂಡಿರುವ ಬಿಗಿ ಕ್ರಮಗಳ ಮಧ್ಯೆಯೂ ಹಲವು ಪರೀಕ್ಷಾ ಕೇಂದ್ರಗಳಲ್ಲಿ ನಕಲು ಹಾವಳಿ ಮಿತಿ ಮೀರಿದೆ. ಯುವಕರು ಪರೀಕ್ಷಾ ಕೇಂದ್ರದ ಸುತ್ತಲೂ ಮುಳ್ಳುಬೇಲಿ, ಪೊಲೀಸ್ ಬಿಗಿ ಕಾವಲು ಹಾಕಿದ್ದರೂ ತಮ್ಮ ಜೀವದ ಹಂಗು ತೊರೆದು ಕಟ್ಟಡ ಏರಿ ಅಪಾಯಕಾರಿ ಸ್ಥಿತಿಯಲ್ಲಿ ನಕಲು ಚೀಟಿ ಪೂರೈಕೆ ಮಾಡಲು ಮುಂದಾಗುತ್ತಿದ್ದಾರೆ.
ಇದೀಗ ಜಿಲ್ಲೆಯಲ್ಲಿ ಎಸ್ಎಸ್ಎಲ್ ಸಿ ಪರೀಕ್ಷಾ ನಕಲು ಹಾವಳಿಗೆ ಸಾಗರ ಚಲವಾದಿ ಸಾವು ಸಂಶಯ ಮೂಡಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಬಸವನಬಾಗೇವಾಡಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.