Advertisement

ಜೇಬಲ್ಲಿ ಮೊಬೈಲ್ ಇದ್ದರೆ ಸಸ್ಪೆಂಡ್‌

12:38 PM Aug 15, 2019 | mahesh |

ಹುಬ್ಬಳ್ಳಿ: ರಾಜ್ಯದ ಎಲ್ಲ ನಾಲ್ಕು ಸಾರಿಗೆ ಸಂಸ್ಥೆಯ ನಿರ್ವಾಹಕರು ಹಾಗೂ ಚಾಲಕರು ಇನ್ನು ಮುಂದೆ ಕರ್ತವ್ಯದ ವೇಳೆ ಮೊಬೈಲ್ ಇಟ್ಟುಕೊಳ್ಳುವಂತಿಲ್ಲ. ಒಂದು ವೇಳೆ ಅವರ ಬಳಿ ಮೊಬೈಲ್ ಸಿಕ್ಕರೆ, ಮೊಬೈಲ್ ಬಳಸಿದ್ದು ಕಂಡು ಬಂದರೆ ಅಮಾನತು ಶಿಕ್ಷೆ ಕಟ್ಟಿಟ್ಟ ಬುತ್ತಿ. ಪತ್ತೆಯಾದ ಮೊಬೈಲ್ ಮುಟ್ಟುಗೋಲು ಖಚಿತ.

Advertisement

ಚಾಲಕ-ನಿರ್ವಾಹಕರು ಕರ್ತವ್ಯದ ವೇಳೆ ಮೊಬೈಲ್ ಇಟ್ಟುಕೊಳ್ಳುವ ಕುರಿತು ಸಾಕಷ್ಟು ಪರ-ವಿರೋಧಗಳಿದ್ದವು. ಸಂಪರ್ಕ ಸಂವಹನಕ್ಕೆ ಮೊಬೈಲ್ ಅಗತ್ಯ ಎನ್ನುವ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ 2012ರಲ್ಲಿ ಕರ್ತವ್ಯ ವೇಳೆ ಮೊಬೈಲ್ ಇಟ್ಟುಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಬಳಸಲು ಅನುಮತಿ ನೀಡಲಾಗಿತ್ತು. ಈ ಆದೇಶವನ್ನು ಹಿಂಪಡೆದು ಕರ್ತವ್ಯ ವೇಳೆಯಲ್ಲಿ ಮೊಬೈಲ್ ಹೊಂದುವುದನ್ನು ಸಂಪೂರ್ಣ ನಿಷೇಧಿಸಿ ಈಗ ಆದೇಶ ಹೊರಡಿಸಲಾಗಿದೆ.

ಸೆ. 1ರಿಂದ ಮುಂಗಡ ಟಿಕೆಟ್ ಕಾಯ್ದಿರಿಸುವ ಬಸ್‌ಗಳ ನಿರ್ವಾಹಕರನ್ನು ಹೊರತುಪಡಿಸಿ ಇತರೆ ಚಾಲಕರು-ನಿರ್ವಾಹಕರು ಮೊಬೈಲ್ ಇಟ್ಟುಕೊಳ್ಳುವಂತಿಲ್ಲ. ನಿಯಮ ಉಲ್ಲಂಘಿಸಿದರೆ ಮೊಬೈಲ್ ಜಪ್ತಿ ಜತೆಗೆ ಅಮಾನತು ಶಿಕ್ಷೆ ಖಚಿತ.

ಅಮಾನತು-ಮೊಬೈಲ್ ಜಪ್ತಿ: ಕರ್ತವ್ಯದ ವೇಳೆ ಮೊಬೈಲ್ ಹೊಂದುವುದನ್ನು ನಿಷೇಧಿಸುವ ಕುರಿತು ಇಲಾಖೆ ಮುಖ್ಯಸ್ಥರ ಸಭೆಯಲ್ಲಿ ನಿರ್ಧರಿಸಲಾಗಿದೆ. ತನಿಖಾ ಸಿಬ್ಬಂದಿಯ ಚಲನವಲನಗಳನ್ನು ನಿರ್ವಾಹಕರು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿರುವುದರಿಂದ ಸಂಸ್ಥೆಯ ಆದಾಯಕ್ಕೆ ಖೋತಾ ಬೀಳುತ್ತಿದೆ. ಹೀಗಾಗಿ ನಿಷೇಧ ಅನಿವಾರ್ಯ ಎಂದು ನಿರ್ಣಯಿಸಲಾಗಿದೆ.

ತನಿಖಾ ಸಿಬ್ಬಂದಿ ನಗದು ಹಾಗೂ ಟಿಕೆಟ್ ಸೇರಿ ಮೊಬೈಲ್ ತಪಾಸಣೆ ಕೂಡ ಮಾಡಲಿದ್ದಾರೆ. ಪತ್ತೆಯಾದ ಮೊಬೈಲ್ನ ಮಾಹಿತಿಯನ್ನು ಆಪಾದನಾ ಪಟ್ಟಿಯಲ್ಲಿ ನಮೂದಿಸಿ ಮುಟ್ಟುಗೋಲು ಹಾಕಿಕೊಳ್ಳಲಿದ್ದಾರೆ.

Advertisement

ಮೊಬೈಲ್ ಹೊಂದಿದ ಪ್ರಕರಣ ದಾಖಲಾದ 30 ದಿನ ಅಥವಾ ವಿಚಾರಣೆ ಪೂರ್ಣಗೊಳ್ಳುವ ದಿನಗಳ ಪೈಕಿ ಯಾವುದು ಮೊದಲೋ ಅದನ್ನು ಪರಿಗಣಿಸಿ ಅಮಾನತು ಆದೇಶ ತೆರವುಗೊಳಿಸಲಾಗುತ್ತದೆ. ಈ ಅಧಿಕಾರವನ್ನು ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ನೀಡಲಾಗಿದೆ.

ಮುಟ್ಟುಗೋಲು ಹಾಕಿಕೊಂಡ ಮೊಬೈಲ್ ಸಾಧಾರಣಕ್ಕೆ ಸಿಬ್ಬಂದಿ ಕೈ ಸೇರಲ್ಲ. ಪ್ರಕರಣದ ವಿಚಾರಣೆಯ ಅಂತಿಮ ಹಂತದ ವೇಳೆ ಸ್ವಯಂ ಸಂರಕ್ಷಣಾ ಹೇಳಿಕೆ ಪಡೆದು ಮೊಬೈಲ್ ಪಡೆಯಬೇಕಾಗುತ್ತದೆ.

ಅವೈಜ್ಞಾನಿಕ ನಿರ್ಧಾರ: ಇಲಾಖೆ ಮುಖ್ಯಸ್ಥರ ಸಭೆಯಲ್ಲಿ ನಿರ್ಧರಿಸಿರುವ ತೀರ್ಮಾನಕ್ಕೆ ಚಾಲಕ-ನಿರ್ವಾಹಕರಿಂದ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಕೆಲವೇ ಸಿಬ್ಬಂದಿಯಿಂದಾದ ದುರುಪಯೋಗ ಹಿನ್ನೆಲೆಯಲ್ಲಿ ಸಾಮೂಹಿಕವಾಗಿ ನಿಷೇಧಿಸುವುದು ಸೂಕ್ತವಲ್ಲ. ಸಂವಹನ ಮಾಧ್ಯಮವಾಗಿ ಮೊಬೈಲ್ ಅಗತ್ಯ ಸಾಧನವಾಗಿದ್ದು, ಕರ್ತವ್ಯ ವೇಳೆಯಲ್ಲಿ ಇಟ್ಟುಕೊಳ್ಳುವುದು ನಿಷಿದ್ಧ ಎನ್ನುವುದು ಅವೈಜ್ಞಾನಿಕ ನಿರ್ಧಾರವಾಗಿದೆ. ಸಂಸ್ಥೆಯ ಆದಾಯ ಸೋರಿಕೆಗೆ ಪ್ರಮುಖವಾಗಿ ಒಂದೇ ಮಾರ್ಗದಲ್ಲಿ ಸಾಕಷ್ಟು ಬಸ್‌ಗಳ ಸಂಚಾರ, ಅವೈಜ್ಞಾನಿಕ ಮಾರ್ಗ ರಚನೆ, ಖಾಸಗಿ ಲಾಬಿಗೆ ಮಣೆ ಸೇರಿದಂತೆ ಸಾಕಷ್ಟು ಕಾರಣಗಳು ಜ್ವಲಂತವಾಗಿ ಉಳಿದುಕೊಂಡಿವೆ. ಇವುಗಳ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದು ಬಿಟ್ಟು ಚಾಲನಾ ಸಿಬ್ಬಂದಿ ಮೇಲೆ ಇಂತಹ ಪ್ರಯೋಗ ಮಾಡಲಾಗುತ್ತಿದೆ. ಕರ್ತವ್ಯ ದೃಷ್ಟಿಯಿಂದ ಮೊಬೈಲ್ ಬಳಕೆ ಅಗತ್ಯವಾಗಿದ್ದು, ಇಂತಹ ನಿಯಮಗಳು ಚಾಲನಾ ಸಿಬ್ಬಂದಿಗೆ ಮಾತ್ರ ಏಕೆ ಎನ್ನುವುದು ಚಾಲಕ-ನಿರ್ವಾಹಕರ ಪ್ರಶ್ನೆಯಾಗಿದೆ.

ಯಾಕೆ ಈ ನಿರ್ಧಾರ?
•ಸಂಸ್ಥೆ ನೀಡಿರುವ ಅವಕಾಶವನ್ನು ಚಾಲಕ-ನಿರ್ವಾಹಕರು ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಚಾಲನೆ ವೇಳೆ ಕೆಲ ಚಾಲಕರು ಮೊಬೈಲ್ ಬಳಸುತ್ತಿರುವುದು ಕಂಡು ಬಂದಿದೆ. ಇನ್ನು ನಿರ್ವಾಹಕರು ಮೊಬೈಲ್ ಬಳಸುತ್ತಿರುವುದರಿಂದ ಸಂಸ್ಥೆಯ ಆದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬ ಕಾರಣ.

•ಕರ್ತವ್ಯ ವೇಳೆ ಮೊಬೈಲ್ ಬಳಸುವುದರಿಂದ ತನಿಖಾ ಸಿಬ್ಬಂದಿಯ ಚಲನವಲನಗಳ ಬಗ್ಗೆ ನಿರ್ವಾಹಕರು ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಪತ್ತೆಯಾಗಿವೆ.

•ಇದು ಸಂಸ್ಥೆಯ ಆದಾಯದಲ್ಲಿನ ಸೋರಿಕೆಗೆ ಪ್ರಮುಖ ಕಾರಣವಾಗಿದ್ದು, ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚುವುದು ಕಷ್ಟಸಾಧ್ಯವಾಗಿರುವುದರಿಂದ ಕರ್ತವ್ಯ ವೇಳೆ ಮೊಬೈಲ್ ಇಟ್ಟುಕೊಳ್ಳುವುದನ್ನು ಕಡ್ಡಾಯವಾಗಿ ನಿಷೇಧಿಸುವುದು ಸೂಕ್ತ ಎನ್ನುವ ನಿರ್ಧಾರಕ್ಕೆ ಸಂಸ್ಥೆ ಬಂದಿದೆ.

ತನಿಖಾ ಸಿಬ್ಬಂದಿ ಬಗ್ಗೆ ಮಾಹಿತಿ ಸೋರಿಕೆಯಾಗುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಕರ್ತವ್ಯದಲ್ಲಿ ಶಿಸ್ತು-ಬದ್ಧತೆ ಮೂಡಿಸುವುದು ಪ್ರಮುಖ ಉದ್ದೇಶ. ಆರಂಭದಲ್ಲಿ ಒಂದಿಷ್ಟು ಎಚ್ಚರಿಕೆ ನೀಡಲಾಗುತ್ತದೆ.
● ಶಿವಯೋಗಿ ಕಳಸದ, ಕೆಎಸ್‌ಆರ್‌ಟಿಸಿ ಎಂಡಿ

● ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next