ಚೆನ್ನೈ/ತಮಿಳುನಾಡು:ಡಿಎಂಕೆ (ದ್ರಾವಿಡ ಮುನ್ನೇತ್ರಾ ಕಳಗಂ)ಪಕ್ಷದಿಂದ ಅಮಾನತುಗೊಂಡಿದ್ದ ಕೆಪಿ ರಾಮಲಿಂಗಂ ಶನಿವಾರ(ನವೆಂಬರ್ 21, 2020)ದಂದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಎಂಕೆ ಅಳಗಿರಿಯ ಕಟ್ಟಾ ಅನುಯಾಯಿಯಾಗಿರುವ ರಾಮಲಿಂಗಂ, ತಾನು ಅಳಗಿರಿಯನ್ನು ಕೂಡಾ ಬಿಜೆಪಿಗೆ ಕರೆತರಲು ಪ್ರಯತ್ನಿಸುವುದಾಗಿ ಈ ಸಂದರ್ಭದಲ್ಲಿ ಹೇಳಿದರು.
ತಮಿಳುನಾಡು ಬಿಜೆಪಿ ಉಸ್ತುವಾರಿ ಸಿಟಿ ರವಿ, ಬಿಜೆಪಿ ರಾಜ್ಯಾಧ್ಯಕ್ಷ ಎಲ್.ಮುರುಗನ್ ಅವರ ಸಮ್ಮುಖದಲ್ಲಿ ಕೆಪಿ ರಾಮಲಿಂಗಂ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಪೊನ್ ರಾಧಾಕೃಷ್ಣನ್ ಹಾಗೂ ಎಚ್.ರಾಜಾ ಅವರು ಕೂಡಾ ಬಿಜೆಪಿ ಮುಖಂಡ ಜತೆ ಗುರುತಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ಕೋವಿಡ್ 19 ಸೋಂಕಿನ ವಿಚಾರದಲ್ಲಿ ಎಂಕೆ ಸ್ಟಾಲಿನ್ ಅವರ ಪ್ರಸ್ತಾಪದ ವಿರುದ್ಧ ಮಾತನಾಡಿದ್ದ ಕೆಪಿ ರಾಮಲಿಂಗಂ ಅವರನ್ನು ಡಿಎಂಕೆ ನಾಯಕ ಎಂಕೆ ಸ್ಟಾಲಿನ್, ಶಿಸ್ತುಕ್ರಮದ ಹಿನ್ನೆಲೆಯಲ್ಲಿ ರಾಮಲಿಂಗಂ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದ್ದರು.
ಡಿಎಂಕೆ ವಿರುದ್ಧ ಮುನಿಸಿಕೊಂಡಿರುವ ರಾಮಲಿಂಗಂ ಬಿಜೆಪಿ ಸೇರ್ಪಡೆ ನಂತರ ಮಾತನಾಡಿದ ಅವರು, ಎಂಕೆ ಸ್ಟಾಲಿನ್ ಸಹೋದರ ಎಂಕೆ ಅಳಗಿರಿಯನ್ನು ಕೂಡಾ ಬಿಜೆಪಿಗೆ ಕರೆತರಲು ಪ್ರಯತ್ನಿಸುವುದಾಗಿ ಹೇಳಿದರು.
ತಮಿಳುನಾಡಿನಲ್ಲಿ ಭಾರತೀಯ ಜನತಾ ಪಕ್ಷವನ್ನು ಕಟ್ಟಲು ಶ್ರಮವಹಿಸಿ ದುಡಿಯುವುದಾಗಿ ಕೆಪಿ ರಾಮಲಿಂಗಂ ತಿಳಿಸಿದರು. ತಾನು 30 ವರ್ಷಗಳ ಹಿಂದೆ ಡಿಎಂಕೆ ಪಕ್ಷಕ್ಕೆ ಸೇರಿದಾಗ ಪಕ್ಷ ದೊಡ್ಡ ಹಿನ್ನಡೆ ಅನುಭವಿಸಿತ್ತು. ಆದರೆ ತಾವು ಡಿಎಂಕೆ ಪಕ್ಷಕ್ಕಾಗಿ ಕಷ್ಟಪಟ್ಟು ದುಡಿದಿರುವುದಾಗಿ ಹೇಳಿದರು.