Advertisement

ಶೀಲ ಶಂಕಿಸಿ ಪತ್ನಿಯ ಕೊಲೆ: ಜೀವಾವಧಿ ಸಜೆ

08:00 AM Jul 23, 2017 | Team Udayavani |

ಮಂಗಳೂರು: ಕಾವೂರು ಗಾಂಧಿ ನಗರದಲ್ಲಿ ಮೂರು ವರ್ಷಗಳ ಹಿಂದೆ ಪತ್ನಿ ಮಂಜುಳಾ ಯಾನೆ ಅನ್ನಪೂರ್ಣ (28) 
ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿದ ಆರೋಪಿ ಪಕೀರಯ್ಯ ಯಾನೆ ಪ್ರಕಾಶ್‌ (35) ನಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ  ಮತ್ತು ಸೆಷನ್ಸ್‌ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

Advertisement

ಪಕೀರಯ್ಯ ಮತ್ತು ಮಂಜುಳಾ ಅವರು ಮೂಲತಃ ಕೊಪ್ಪಳ ಜಿಲ್ಲೆಯವರಾಗಿದ್ದು, ಕೂಲಿ ಕೆಲಸಕ್ಕಾಗಿ ಮಂಗಳೂರಿಗೆ ಬಂದು ಗಾಂಧಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ದಂಪತಿಗೆ ವಿರೂಪಾಕ್ಷ (8) ಮತ್ತು ಭಾವನಾ (5) ಎಂಬ ಇಬ್ಬರು ಚಿಕ್ಕ ಮಕ್ಕಳಿದ್ದು, ಅವರು ಊರಿನಲ್ಲಿ (ಕೊಪ್ಪಳ) ಅಜ್ಜಿ ಮನೆಯಲ್ಲಿದ್ದು, ಶಾಲೆಗೆ ಹೋಗುತ್ತಿದ್ದರು. 
ಈ ಹಿಂದೆ ಕೊಪ್ಪಳದಲ್ಲಿದ್ದಾಗ ಪತ್ನಿ ಮಂಜುಳಾ ಅವರಿಗೆ ಪರ ಪುರುಷನ ಜತೆ ಸಂಬಂಧವಿತ್ತು ಎಂಬ ಸಂಶಯವನ್ನು ಪಕೀರಯ್ಯ ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ  ಅವರೊಳಗೆ ಆಗಿಂದಾಗ್ಗೆ ಜಗಳ ನಡೆಯುತ್ತಿತ್ತು.  2014ರ ಜು. 30 ರಂದು ರಾತ್ರಿ ಇಬ್ಬರೂ ಊಟ ಮಾಡಿ ಮಲಗಿದ್ದು, ಪಕೀರಯ್ಯ ಅಂದು ಮದ್ಯ ಸೇವಿಸಿದ್ದನು. ಮಧ್ಯ ರಾತ್ರಿ  ವೇಳೆ ಪಕೀರಯ್ಯ ಪತ್ನಿ ಮಂಜುಳಾ ಅವರ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಮರುದಿನ ಮುಂಜಾನೆ ವೇಳೆ ಪರಾರಿಯಾಗಿದ್ದನು. 

ಪಕ್ಕದ ಮನೆಯಲ್ಲಿ ವಾಸವಾಗಿರುವ ಮಂಜುಳಾ ಅವರ ಸಂಬಂಧಿ ನೀಲಂ ಅವರು ಬೆಳಗ್ಗೆ ಎದ್ದಾಗ ಮಂಜುಳಾ ಅವರ ಮನೆಯ ಮುಂಭಾಗದ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿರುವುದನ್ನು ಗಮನಿಸಿದ್ದರು. ಕೂಗಿ ಕರೆದಾಗ ಪ್ರತಿಸ್ಪಂದನ ಇರಲಿಲ್ಲ. ಸಂಶಯದಿಂದ ಬಾಗಿಲು ತೆರೆದು ನೋಡಿದಾಗ ಮಂಜುಳಾ ಅವರು ಕೊಲೆಯಾಗಿರುವುದು ಹಾಗೂ ಪಕೀರಯ್ಯ ಅಲ್ಲಿಂದ ನಾಪತ್ತೆಯಾಗಿರುವುದು ಕಂಡು ಬಂದಿತ್ತು. 

ಕಾವೂರು ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಪಕೀರಯ್ಯ ಅವರನ್ನು 2014ರ ಆಗಸ್ಟ್‌  1ರಂದು ಕೊಪ್ಪಳದಲ್ಲಿ ಬಂಧಿಸಿದ್ದರು. ಪಣಂಬೂರು ಪೊಲೀಸ್‌ ಇನ್ಸ್‌ ಪೆಕ್ಟರ್‌ ಲೋಕೇಶ್‌ ಅವರು ತನಿಖೆ ನಡೆಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. 

ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಮಂಗಳೂರಿನ 3 ನೇ ಹೆಚ್ಚುವರಿ ಜಿಲ್ಲಾ  ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಮುರಳೀಧರ ಪೈ ಆರೋಪ ಸಾಬೀತಾಗಿದೆ ಎಂಬ ತೀರ್ಮಾನಕ್ಕೆ ಬಂದು ಆರೋಪಿ ಪಕೀರಯ್ಯನಿಗೆ ಜೀವಾವಧಿ ಶಿಕ್ಷೆ  ಮತ್ತು 10,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಹೆಚ್ಚುವರಿಯಾಗಿ 3 ತಿಂಗಳ ಶಿಕ್ಷೆಯನ್ನು  ಅನುಭವಿಸ ಬೇಕೆಂದು ಜು. 22ರಂದು ತೀರ್ಪು ನೀಡಿದರು. 

Advertisement

ತಂದೆಗೆ ಶಿಕ್ಷೆಯಾಗಿರುವ ಕಾರಣ ಮಕ್ಕಳಿಬ್ಬರು ಅನಾಥರಾಗಿದ್ದು, ಅವರಿಗೆ ಸರಕಾರದಿಂದ ಸೂಕ್ತ ಪರಿಹಾರ ಒದಗಿಸಲು ವ್ಯವಸ್ಥೆ ಮಾಡುವಂತೆ ನ್ಯಾಯಾಧೀಶರು ಜಿಲ್ಲಾ  ಕಾನೂನು ಸೇವಾ ಪ್ರಾಧಿಕಾರಕ್ಕೆ ಸೂಚಿಸಿದ್ದಾರೆ.  ಸರಕಾರದ ಪರವಾಗಿ ನಾರಾಯಣ ಶೇರಿಗಾರ್‌ ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next