ಬೆಂಗಳೂರು: ಬೆಂಗಳೂರು ಸೇರಿ ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಿದ್ಧತೆ ನಡೆಸಿದ್ದ ಲಷ್ಕರ್ -ಎ-ತೊಯ್ಬಾದ ಐವರು ಶಂಕಿತ ಉಗ್ರರಿಗೆ ಗ್ರೇನೇಡ್ ಬಳಕೆ ಬಗ್ಗೆ ತಿಳಿದಿಲ್ಲ ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಮತ್ತೂಂದೆಡೆ ಶಂಕಿತ ಜಾಹೀದ್ ತಬ್ರೇಜ್ ಮನೆಯಲ್ಲಿ ದೊರೆತ ಗ್ರೇನೇಡ್‌ಗಳು ವಿದೇಶದಿಂದ ಬಂದಿವೆ ಎಂಬುದು ಖಚಿತವಾಗಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ಸರಣಿ ಬಾಂಬ್ ಸ್ಫೋಟ ಹಾಗೂ ಐಐಎಸ್‌ಸಿ ಸ್ಫೋಟ ಪ್ರಕರಣದ ರೂವಾರಿ ಹಾಗೂ ಎಲ್‌ಇಟಿ ಸಂಘಟನೆಯ ದಕ್ಷಿಣ ಭಾರತದ ಕಮಾಂಡರ್ ಟಿ.ನಾಜೀರ್ ಮತ್ತು ಮಧ್ಯ ಪ್ರಾಚ್ಯ ರಾಷ್ಟ್ರದಲ್ಲಿ ತಲೆಮರೆಸಿಕೊಂಡಿರುವ ಜುನೈದ್ ಸೂಚನೆ ಮೇರೆಗೆ ಕಾರು ಚಾಲಕನಾಗಿದ್ದ ಜಾಹೀದ್ ತಬ್ರೇಜ್ ನೆಲಮಂಗಲ ಬಳಿ ಗ್ರೇನೇಡ್ ಗಳನ್ನು ಪಡೆದುಕೊಂಡಿದ್ದ. ಈ ವಿಚಾರವನ್ನು ಇತರೆ ನಾಲ್ವರು ಆರೋಪಿಗಳಿಗೆ ತಿಳಿಸಿದ್ದ. ಆದರೆ, ನಾಜೀರ್ ಮತ್ತು ಜುನೈದ್, ಐವರಿಂದ ಆಣೆ ಪ್ರಮಾಣ ಮಾಡಿಸಿಕೊಂಡಿದ್ದರಿಂದ ಈ ವಿಚಾರ ಹೊರಗಡೆ ಬಾಯಿಬಿಟ್ಟಿರಲಿಲ್ಲ. ಜತೆಗೆ ಆ ಪಾರ್ಸಲ್ ತೆರೆದು ನೋಡಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
3ನೇ ಹಂತ ಯಾವುದು ತಿಳಿಯಬೇಕು: ಶಂಕಿತರ ಬಳಿ ಸಿಕ್ಕಿರುವ ಗ್ರೇನೇಡ್‌ಗಳು ವಿದೇಶದಿಂದ ಬಂದಿರುವುದು ಖಚಿತವಾಗಿದೆ. ಗಡಿಭಾಗದಿಂದಲೇ ಬಂದಿವೆ ಎಂಬ ಬಲವಾದ ಅನುಮಾನವಿದೆ. ಮತ್ತೂಂದೆಡೆ ಬಂಧಿತರಿಗೆ ಎಲ್ಲಿಂದ ಬಂದಿದೆ ಎಂಬುದು ಗೊತ್ತಿಲ್ಲ. ಅವುಗಳನ್ನು ಯಾವಾಗ? ಎಲ್ಲಿ? ಸ್ಫೋಟಿಸಬೇಕು. ಯಾರ ಮೂಲಕ ಸ್ಫೋಟಿಕಬೇಕು? ಹಾಗೇ ನಾವೇ ಸ್ಫೋಟಿಸಬೇಕಾ? ಅಥವಾ ಬೇರೆ ವ್ಯಕ್ತಿಗಳಿಗೆ ಹಸ್ತಾಂತರಿಸಬೇಕಾ? ಎಂಬುದು ತಿಳಿದು ಬಂದಿಲ್ಲ. ಹೀಗಾಗಿ ಕೃತ್ಯದ ಎರಡು ಹಂತದ ವ್ಯಕ್ತಿಗಳ ಮಾಹಿತಿ ಸಿಕ್ಕಿದೆ. ಮೂರನೇ ಹಂತದ ವ್ಯಕ್ತಿ ಯಾರು ಅಥವಾ ಸಂಚು ಏನೆಂಬುದು ಜುನೈದ್ ಬಂಧನದ ಬಳಿಕ ತಿಳಿಯಲಿದೆ.
ಐವರು ಶಂಕಿತರ ಬ್ಯಾಂಕ್ ಖಾತೆಗಳಿಗೆ ವಿದೇಶದಿಂದ ಲಕ್ಷಾಂತರ ರೂ. ವರ್ಗಾವಣೆ ಆಗಿದೆ. ಬ್ಯಾಂಕ್ ಮಾಹಿತಿ ಪಡೆದಾಗ ಈ ಅಂಶ ಬೆಳಕಿಗೆ ಬಂದಿದೆ. ಪ್ರತಿಯೊಬ್ಬ ಶಂಕಿತರಿಗೆ 20ಕ್ಕೂ ಅಧಿಕ ಹಣ ವರ್ಗಾವಣೆ ಆಗಿದೆ ಎಂದು ಮೂಲಗಳು ತಿಳಿಸಿವೆ.