Advertisement

ಸೋಂಕು ಶಂಕಿತ ವೃದ್ಧ ಕೊನೆಯುಸಿರು

11:16 PM Mar 11, 2020 | Team Udayavani |

ಬೆಂಗಳೂರು: ಕೊರೊನಾ ಸೋಂಕು ಶಂಕಿತ ವೃದ್ಧ (76) ಸೋಂಕು ಲಕ್ಷಣ ಜತೆಗೆ ಇತರೆ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದು, ಚಿಕಿತ್ಸೆ ಫ‌ಲಕಾರಿ ಯಾಗದೆ ಮಂಗಳವಾರ ಸಾವಿಗೀಡಾಗಿದ್ದಾರೆ. ಸತತ ಜಾಗೃತಿ ಹಾಗೂ ಮುನ್ನೆಚ್ಚರಿಕೆ ಕ್ರಮದ ಫ‌ಲವಾಗಿ ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿದ್ದು, ಒಂದು ಲಕ್ಷ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ.

Advertisement

ಈ ನಡುವೆ, ಕಲಬುರಗಿಯಲ್ಲಿ ವೃದ್ಧರೊಬ್ಬರು ಸಾವನ್ನಪ್ಪಿದ್ದು ಆತಂಕ ಸೃಷ್ಟಿಸಿತ್ತು.ಸೌದಿ ಅರೇಬಿಯಾ ದಿಂದ ಮರಳಿದ್ದ ಅವರು ಜ್ವರದಿಂದ ಬಳಲುತ್ತಿದ್ದು, ಕೊರೊನಾ ಸೋಂಕು ಪರೀಕ್ಷೆಗೆ ಒಳಪಟ್ಟಿದ್ದರು. ವರದಿ ಬರುವ ಮೊದಲೇ ಅವರು ಸಾವನ್ನಪ್ಪಿದ್ದಾರೆ. ಕೊರೊನಾ ಶಂಕಿತ ವೃದ್ಧ ತೀವ್ರ ಅಸ್ತಮಾ, ಅಧಿಕ ರಕ್ತದೊತ್ತಡದಂತಹ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ ನ್ಯುಮೋನಿಯಾ ಕೂಡಾ ಇತ್ತು. ಸಾರ್ವಜನಿಕರು ಅನಗತ್ಯ ಭಯಪಡಬಾರದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದರು.

ಭಯದಿಂದ ಬರಬೇಡಿ: ರಾಜ್ಯದ ಬಹುತೇಕ ಕಡೆ ನಮಗೂ ಕೊರೊನಾ ತಗುಲಿರಬಹುದು ಎಂಬ ಭಯದಿಂದ ಆಸ್ಪತ್ರೆಗೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಅನಗತ್ಯ ಭಯಪಡದೆ ಸೋಂಕಿನ ಲಕ್ಷಣಗಳಿದ್ದರೆ ಮಾತ್ರ ಆಸ್ಪತ್ರೆ ಕಡೆ ಬನ್ನಿ. ಇಲ್ಲದಿದ್ದರೆ ವಿದೇಶದಿಂದ ಬಂದ 28 ದಿನಗಳು ಮನೆಯಲ್ಲಿಯೇ ಪ್ರತ್ಯೇಕವಾಗಿದ್ದು ಬಳಿಕ ಮುಕ್ತವಾಗಿ ಹೊರಗಡೆ ಓಡಾಟ ನಡೆಸಿ ಎಂದು ಸಚಿವರು ಸಲಹೆ ನೀಡಿದರು.

ಸೋಂಕಿತರ ಸಂಖ್ಯೆ ಏರಿಕೆಯಾಗಿಲ್ಲ: ರಾಜ್ಯದ ಎರಡು ವಿಮಾನ ನಿಲ್ದಾಣ ಹಾಗೂ ಎರಡು ಬಂದರುಗಳಲ್ಲಿ ಜ.21 ರಿಂದ ಮಾರ್ಚ್‌ 10ರವರೆಗೂ ಒಟ್ಟು ಒಂದು ಲಕ್ಷ ಪ್ರಯಾಣಿಕರನ್ನು ತಪಾಸಣೆ ಮಾಡಲಾಗಿದೆ. ಈ ಪೈಕಿ 1,142 ಮಂದಿಯನ್ನು ಅವಲೋಕನಕ್ಕೆ ನೋಂದಾಯಿಸಿಕೊಳ್ಳಲಾಗಿತ್ತು. ಇದರಲ್ಲಿ 287 ಮಂದಿಯ 28 ದಿನಗಳ ಅವಲೋಕ ಅವಧಿ ಮುಕ್ತಾಯವಾಗಿದೆ.

526 ಮಂದಿ ಸೋಂಕು ಪರೀಕ್ಷೆ ಮಾಡಿದ್ದು, 441 ಮಂದಿ ವರದಿ ನೆಗೆಟಿವ್‌ ಬಂದಿವೆ. ಸದ್ಯ 10 ಮಂದಿ ಬೆಂಗಳೂರಿನ ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ, ಇಬ್ಬರು ದಕ್ಷಿಣ ಕನ್ನಡದಲ್ಲಿ ಜಿಲ್ಲಾಸ್ಪತ್ರೆ ಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ನಾಲ್ಕು ಸೋಂಕಿತರನ್ನು ಹೊರತುಪಡಿಸಿ ರಾಜ್ಯದಲ್ಲಿ ಹೊಸದಾಗಿ ಯಾರಲ್ಲೂ ಕೊರೊನಾ ಸೋಂಕು ದೃಢಪಟ್ಟಿಲ್ಲ ಎಂದು ಮಾಹಿತಿ ನೀಡಿದರು.

Advertisement

ಯು.ಕೆ.ಆರೋಗ್ಯ ಸಚಿವರಿಗೇ ಸೋಂಕು: ಯುನೈಟೆಡ್‌ ಕಿಂಗ್‌ಡಮ್‌ನ ಆರೋಗ್ಯ ಸಚಿವೆ ನಾಡಿನ್‌ ಡೊರಿಸ್‌ (62)ಅವರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಕನ್ಸರ್ವೇಟಿವ್‌ ಪಕ್ಷದ ಸಂಸದರೂ ಆಗಿರುವ ಡೊರಿಸ್‌ ಅವರೇ ಈ ಬಗ್ಗೆ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next