ಶಿವಮೊಗ್ಗ: ಮಲೆನಾಡು ಜಿಲ್ಲೆಯಲ್ಲಿ ಝೀಕಾ ವೈರಸ್ ಸೋಂಕಿನಿಂದ ಬಳಲುತ್ತಿದ್ದ 74 ವರ್ಷದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆದರೆ ಆರೋಗ್ಯ ಇಲಾಖೆ ಝೀಕಾ ಸೋಂಕಿನಿಂದಾಗಿ ಅವರು ಮೃತಪಟ್ಟಿಲ್ಲ ಎಂದು ಸ್ಪಷ್ಟಪಡಿಸಿದೆ.
ರಾಜ್ಯದ ಮೊದಲ ಶಂಕಿತ ಝೀಕಾ ಪ್ರಕರಣ ಇದಾಗಿದ್ದು, ಮಲೆನಾಡು ಜನರಲ್ಲಿ ಆತಂಕ ಸೃಷ್ಟಿಸಿದೆ. ಅಲ್ಲದೆ ಸಾಗರ ತಾಲೂಕಿನ 24 ವರ್ಷದ ಯುವಕನಿಗೂ ಝೀಕಾ ಸೋಂಕು ತಗಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಸೊಳ್ಳೆಯಿಂದ ಹರಡುವ ಕಾಯಿಲೆ ಯಾಗಿರುವ ಇದು ಕೇರಳ, ಮಹಾರಾಷ್ಟ್ರದಲ್ಲಿ ಮಾತ್ರ ಕಾಣಿಸಿಕೊಂಡಿತ್ತು.
ಕೆಲವು ದಿನಗಳ ಹಿಂದೆ ಚಿಕ್ಕ ಬಳ್ಳಾಪುರದ ಸೊಳ್ಳೆಯಲ್ಲಿ ವೈರಸ್ ಇರುವುದು ದೃಢಪಟ್ಟಿತ್ತು. ಈಗ ಶಿವಮೊಗ್ಗದಲ್ಲೂ ದೃಢವಾಗಿದೆ. ಶಿವಮೊಗ್ಗದ ಪ್ರಮುಖ ಬಡಾವಣೆ ಯಲ್ಲಿ ವಾಸವಾಗಿದ್ದ ಮೃತ ವೃದ್ಧರನ್ನು ಜೂ. 21ರಂದು ಜ್ವರದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡೆಂಗ್ಯೂ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಝೀಕಾ ಪರೀಕ್ಷೆ ಮಾಡಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಅವರು ಶನಿವಾರ ಮೃತಪಟ್ಟಿದ್ದಾರೆ. ಝೀಕಾ ವೈರಸ್‌ನಿಂದ ಯಾವುದೇ ವ್ಯಕ್ತಿ ಸಾವಿಗೀಡಾಗುವುದಿಲ್ಲ. ಈ ವೃದ್ಧರು ಬಹು ಅಂಗಾಂಗ ವೈಫಲ್ಯ ದಿಂದ ಬಳಲುತ್ತಿದ್ದರು. ಹಾಗಾಗಿ ಮೃತಪಟ್ಟಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾ ಆರೋಗ್ಯಾ ಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.
ಮೂಲ ಪತ್ತೆಯಾಗಿಲ್ಲ
ಝೀಕಾ ಸೋಂಕಿಗೆ ಈಡಾಗಿರುವ ಶಿವಮೊಗ್ಗದ 74 ವರ್ಷದ ವ್ಯಕ್ತಿ ಹಾಗೂ ಸಾಗರದ 24 ವರ್ಷದ ಯುವಕನಿಗೆ ಯಾವುದೇ ಪ್ರವಾಸದ ಹಿನ್ನೆಲೆ ಇಲ್ಲ. ಝೀಕಾ ವೈರಾಣು ಹೊಂದಿದ್ದ ಸೊಳ್ಳೆ ಕಚ್ಚಿರುವುದರಿಂದ ಕಾಯಿಲೆ ಹರಡಿದೆ. ಆದರೆ ಎರಡೂ ಪ್ರಕರಣಗಳು ಬೇರೆ ಬೇರೆ ತಾಲೂಕುಗಳಲ್ಲಿ ವರದಿಯಾಗಿರುವುದರಿಂದ ಕಾಯಿಲೆ ಮೂಲ ಪತ್ತೆ ಕಷ್ಟಕರವಾಗಿದೆ.
ಗಾಂಧಿನಗರದ 11 ಮಂದಿ ಹಾಗೂ ಸೊಳ್ಳೆಗಳ ಮಾದರಿ, ಸಾಗರದಲ್ಲಿ 20 ಮಂದಿಯ ಮಾದರಿಗಳನ್ನು ಮೆಗ್ಗಾನ್ ಲ್ಯಾಬ್ ಹಾಗೂ ಬೆಂಗಳೂರಿನ ಎನ್‌ಐವಿ ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಲಾಗಿದ್ದು, ನೆಗಟಿವ್ ಬಂದಿದೆ. ಸಾಗರದಲ್ಲಿ ಸೊಳ್ಳೆಯ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
ರೋಗ ಲಕ್ಷಣಗಳೇನು?
ಜ್ವರ, ತಲೆನೋವು, ಕಣ್ಣು ಕೆಂಪಾಗುವಿಕೆ, ದದ್ದುಗಳು, ಕೀಲು ಮತ್ತು ಸ್ನಾಯುಗಳಲ್ಲಿ ನೋವು ಮತ್ತಿತರ ಲಕ್ಷಣಗಳು ಕಾಣಿಸಿ ಕೊಳ್ಳುತ್ತವೆ. ಬಹುತೇಕ ಸೋಂಕು ಪೀಡಿತರಿಗೆ ರೋಗ ಲಕ್ಷಣಗಳು ಕಂಡುಬರುವುದಿಲ್ಲ. ಉಳಿದಂತೆ ರೋಗ ಲಕ್ಷಣಗಳು ಸೌಮ್ಯ ಹಾಗೂ ಸಾಧಾರಣ ಸ್ವರೂಪದಲ್ಲಿದ್ದು, 2-7 ದಿನಗಳ ವರೆಗೆ ಇರುತ್ತವೆ. ಗರ್ಭಿಣಿಗೆ ಈ ಸೋಂಕು ಉಂಟಾದಲ್ಲಿ ಜನಿಸುವ ಶಿಶುವಿನ ತಲೆಯ ಗಾತ್ರದಲ್ಲಿ ವ್ಯತ್ಯಯ (ಮೈಕ್ರೊಸೆಫಾಲಿ) ಕಂಡು ಬರಬಹುದು.
ಏನಿದು ಝೀಕಾ?
ಝೀಕಾ ಎಂಬುದು ವೈರಸ್ ಸೋಂಕು.
ಡೆಂಗ್ಯೂ, ಚಿಕೂನ್‌ಗುನ್ಯಾಗಳಂತೆಯೇ ಈಡಿಸ್ ಜಾತಿಯ ಸೊಳ್ಳೆ ಗಳಿಂದ ಹರಡುತ್ತದೆ.
ಈ ಸೊಳ್ಳೆಗಳು ಸಾಮಾನ್ಯ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ.