ಹೊಸದಿಲ್ಲಿ: ಭಾರತ-ಚೀನ ನಡುವೆ ಎದ್ದಿರುವ ಡೋಕ್ಲಾಮ್ ಗಡಿ ವಿವಾದ ಇತ್ಯರ್ಥಕ್ಕೆ ಯುದ್ಧವೊಂದೇ ಪರಿಹಾರವಲ್ಲ, ರಾಜತಾಂತ್ರಿಕ ಮಾತು ಕತೆ ಮೂಲಕವೂ ಪರಿಹರಿಸಿಕೊಳ್ಳಬಹುದು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪ್ರತಿಪಾದಿಸಿದ್ದಾರೆ. ಚೀನ ಜತೆಗಿನ ಡೋಕ್ಲಾಮ್ ಗಡಿ ವಿವಾದ, ಪಾಕ್‌ನಲ್ಲಿ ಹೆಚ್ಚುತ್ತಿರುವ ಚೀನದ ಪ್ರಭಾವ ಸಹಿತ ಹಲವಾರು ವಿಚಾರಗಳ ಬಗ್ಗೆ ಪ್ರಸ್ತಾವಿಸಿದ ವಿಪಕ್ಷಗಳು, ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡವು. ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಹಾಕಿಕೊಟ್ಟ ಭದ್ರ ವಿದೇಶಿ ನೀತಿಯ ಅಡಿಪಾಯವೇ ಇಂದು ಅಲ್ಲಾಡುವ ಸ್ಥಿತಿಯಲ್ಲಿದೆ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ, ಪ್ರಧಾನಿ ನರೇಂದ್ರ ಮೋದಿ ಮೌನವೇಕೆ ಎಂದು ಪ್ರಶ್ನಿಸಿದರು.
ಇದಕ್ಕೆ ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಗಡಿ ವಿವಾದ ಕಾಣಿಸಿಕೊಂಡಿದೆ ಎಂದಾಕ್ಷಣ ತಾಳ್ಮೆ ಬಿಟ್ಟು ಪ್ರತಿಕ್ರಿಯೆ ನೀಡಲು ಆಗಲ್ಲ. ಚೀನ ಜತೆಗಿನ ಸಮಸ್ಯೆ ಬಗೆಹರಿಸಿಕೊಳ್ಳಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ತಾಳ್ಮೆ ಮತ್ತು ಪ್ರತಿಕ್ರಿಯೆಗಳ ಮೇಲಿನ ಹಿಡಿತ ಸಮಸ್ಯೆಯನ್ನು ಬಗೆಹರಿಸಲು ಇರುವ ಪ್ರಬಲ ಸಾಧನಗಳು. ಅಲ್ಲದೆ, ಯುದ್ಧವೊಂದೇ ಎಲ್ಲ ರೀತಿಯ ಸಮಸ್ಯೆಗಳಿಗೆ ಪರಿಹಾರ ಅಲ್ಲ ಎಂದು ಹೇಳಿದರು.
ಇಷ್ಟೇ ಅಲ್ಲ, ಯುದ್ಧದ ಅನಂತರವೂ ಸಮಸ್ಯೆ ಪರಿಹಾರಕ್ಕೆ ಮಾತುಕತೆಯೊಂದೇ ಇರುವ ಏಕೈಕ ಮಾರ್ಗ. ಹೀಗಾಗಿ, ಯುದ್ಧವಿಲ್ಲದೆ ಮಾತುಕತೆ ಮೂಲಕವೇ ತಾಳ್ಮೆ, ಮಾತಿನ ಮೇಲೆ ಹಿಡಿತ ಮತ್ತು ರಾಜತಾಂತ್ರಿಕತೆ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದ ಸುಷ್ಮಾ ಸ್ವರಾಜ್, ಹಾಗಂಥ ಭಾರತ ಎಲ್ಲವನ್ನೂ ತಾಳ್ಮೆಯಿಂದಲೇ ನೋಡುತ್ತಿದೆ ಎಂದರ್ಥವೂ ಅಲ್ಲ. ನಮ್ಮ ಸೇನೆ ಕೂಡ ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧವಾಗಿದೆ ಎಂದರು.
ಚೀನದ ಒನ್ ಬೆಲ್ಟ್ ಒನ್ ರೋಡ್ ಯೋಜನೆಯಿಂದ ಹಿಂದೆ ಸರಿದಿದ್ದಕ್ಕೆ ಟೀಕಿಸಿದ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡ ಸುಷ್ಮಾ ಸ್ವರಾಜ್, ಈ ಮಾರ್ಗ ಎಲ್ಲಿ ಹಾದುಹೋಗುತ್ತದೆ ಎಂಬುದು ನಿಮಗೆ ಗೊತ್ತಿದೆಯೇ ಎಂದು ಪ್ರಶ್ನಿಸಿದರು. ಒಂದು ವೇಳೆ ನಿಮಗೆ ಇದು ಗೊತ್ತಿದ್ದರೆ ಇಂಥ ಪ್ರಶ್ನೆಯನ್ನೇ ಕೇಳುತ್ತಿರಲಿಲ್ಲ ಎಂದರು. ನಿಮ್ಮದು ಪ್ರಮುಖ ವಿಪಕ್ಷವಾಗಿದ್ದು, ಜವಾಬ್ದಾರಿಯಿಂದ ವರ್ತಿಸಬೇಕು ಎಂಬ ಬುದ್ಧಿವಾದವನ್ನೂ ಹೇಳಿದರು. ಮಧ್ಯಪ್ರವೇಶಿಸಿದ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಇದು ರಾಜೀವ್ ಶುಕ್ಲಾ ಅವರ ವೈಯಕ್ತಿಕ ಅಭಿಪ್ರಾಯ ಎಂದರು.