Advertisement

ಸುಷ್ಮಾ ಸ್ವರಾಜ್‌ ಇಲ್ಲ ಎಂದರೆ ನಂಬಲಾಗುತ್ತಿಲ್ಲ

12:59 AM Aug 08, 2019 | Team Udayavani |

ಬೆಂಗಳೂರು: ಪಕ್ಷದ ಹಿರಿಯ ನಾಯಕಿ ಸುಷ್ಮಾ ಸ್ವರಾಜ್‌ ಅವರ ನಿಧನದಿಂದ ತೀವ್ರ ಆಘಾತವಾಗಿದೆ. ಅವರ ಅಗಲಿಕೆಯಿಂದ ಬಿಜೆಪಿ ತಬ್ಬಲಿಯಾಗಿದ್ದಲ್ಲದೆ ದೇಶದ ರಾಜಕೀಯ ಮಹಿಳಾ ನೇತೃತ್ವ ಶೂನ್ಯತೆ ಅನುಭವಿಸುತ್ತಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನೋವಿನಿಂದ ನುಡಿದರು.

Advertisement

ರಾಜ್ಯ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಸುಷ್ಮಾ ಸ್ವರಾಜ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಷ್ಮಾ ಅವರ ರಾಜಕೀಯ ಪ್ರವೇಶ ತುರ್ತು ಪರಿಸ್ಥಿತಿ ಸಂದರ್ಭದಲ್ಲಾದರೂ 1977ರಲ್ಲಿ ಮೊದಲ ಬಾರಿಗೆ ಹರ್ಯಾಣದಿಂದ ಶಾಸಕಿಯಾಗಿ, ಯುವ ಸಚಿವೆಯಾಗಿ ಕಾರ್ಯ ನಿರ್ವಹಿಸಿದ್ದರು. ನಂತರ, ರಾಷ್ಟ್ರ ರಾಜಕಾರಣಕ್ಕೆ ಕಾಲಿಟ್ಟು ಬಿಜೆಪಿಯ ಅಗ್ರಗಣ್ಯ ನಾಯಕಿಯಾಗಿ ಜನರ ಮೇಲೆ ಪ್ರಭಾವ ಬೀರುವಷ್ಟರ ಮಟ್ಟಿಗೆ ಬೆಳೆದರು ಎಂದು ಸ್ಮರಿಸಿದರು.

ಸುಷ್ಮಾಜೀ ಭಾರತಮಾತೆಯ ಪ್ರತಿರೂಪವಾಗಿ ಕಾಣುತ್ತಾರೆ. ಭಾರತೀಯತೆಯನ್ನೇ ಮೈಗೂಡಿಸಿಕೊಂಡು ಮಂದಹಾಸದ ಮುಖದಲ್ಲಿ ಅಗಲವಾದ ಹಣೆ ಬೊಟ್ಟು ಧರಿಸುವ ಅವರನ್ನು ಕಂಡಾಗ ದೇವರ ಭಾವಚಿತ್ರ ನೋಡಿದಂತೆ ಭಾಸವಾಗಿದ್ದರೆ ಅಚ್ಚರಿಯಲ್ಲ. 1999ರಲ್ಲಿ ಬಳ್ಳಾರಿ ಕ್ಷೇತ್ರದಿಂದ ಅವರು ಸ್ಪರ್ಧಿಸಿದಾಗ ಶಂಕರಮೂರ್ತಿ ಅವರು ಆ ಚುನಾವಣೆಯ ಉಸ್ತುವಾರಿಯಾಗಿದ್ದರು. ಅವರಿಗೆ ಶಂಕರಮೂರ್ತಿ, ಎಂ.ಪಿ.ಪ್ರಕಾಶ್‌ ಅವರು ಕನ್ನಡ ಕಲಿಸಿದ್ದರು. ಕನ್ನಡ ಕಲಿತು ಕನ್ನಡತಿಯೇ ಅನ್ನುವಷ್ಟರ ಮಟ್ಟಿಗೆ ಕನ್ನಡ ಬಳಸುತ್ತಿದ್ದರು ಎಂದರು.

ಮೈಸೂರ್‌ ಪಾಕ್‌ ಅಂದ್ರೆ ಇಷ್ಟ: ಅವರಿಗೆ ಮೈಸೂರ್‌ ಪಾಕ್‌ ಬಹಳ ಪ್ರಿಯವಾಗಿತ್ತು. ಬಳ್ಳಾರಿಯ ಸಂಜಯ್‌ ಎಂಬವರಿಂದ ಮೈಸೂರು ಪಾಕ್‌ ತರಿಸಿಕೊಂಡು ಸವಿದಿದ್ದರು. ನಾನು 1999ರಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾಗ ಚಿಕ್ಕಮಗಳೂರಿಗೆ ಅವರು ಪ್ರಚಾರಕ್ಕೆ ಬಂದಿದ್ದರು. ಅಂದು ನನ್ನನ್ನು ನೆನಪಿಟ್ಟುಕೊಂಡವರು ಮುಂದೆ ಎದುರಾದಾಗಲೆಲ್ಲಾ “ಹೇಗಿದ್ದೀಯಾ ರವಿ’ ಎನ್ನುತ್ತಿದ್ದರು.

ಯಾರೇ ಟ್ವೀಟ್‌ ಮಾಡಿ ಸಮಸ್ಯೆ ಹೇಳಿಕೊಂಡರೂ ಅವರಿಗೆ ಸ್ಪಂದಿಸುತ್ತಿದ್ದ ಅಮ್ಮ ಇಲ್ಲ ಎಂಬ ನೋವು ಕಾಡುತ್ತಿದೆ ಎಂದು ಸಿ.ಟಿ.ರವಿ ವಿಷಾದಿಸಿದರು. ದೇಶದ ಆರೋಗ್ಯದ ಬಗ್ಗೆ ಗಮನ ಕೊಡುತ್ತಿದ್ದ ಅವರು ತಮ್ಮ ವ್ಯಕ್ತಿಗತ ಆರೋಗ್ಯದತ್ತ ಗಮನ ಕೊಡಲಿಲ್ಲ. ಗಾಲಿ ಕುರ್ಚಿಯಲ್ಲಿದ್ದರೂ ಅಧಿಕಾರ ಬಿಟ್ಟು ಕೊಡದವರ ನಡುವೆ 2019ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಪ್ರಕಟಿಸುವ ಮೂಲಕ ಅವರು ಮೇಲ್ಪಂಕ್ತಿ ಹಾಕಿ ಕೊಟ್ಟಿದ್ದಾರೆ ಎಂದು ಹೇಳಿದರು.

Advertisement

ಲಕ್ಷಾಂತರ ಮಹಿಳೆಯರಿಗೆ ಸ್ಫೂರ್ತಿ: ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಮಾತನಾಡಿ, ಮಹಿಳೆಯರು ಕೂಡ ರಾಜಕಾರಣಕ್ಕೆ ಬಂದು ಸಕ್ರಿಯವಾಗಿ ತೊಡಗಿಸಿಕೊಂಡು ಕೆಲಸ ಮಾಡಬಹುದು ಎಂಬುದನ್ನು ಸಾಧಿಸಿ ತೋರಿಸಿದ ಸುಷ್ಮಾ ಅವರು ಲಕ್ಷಾಂತರ ಮಹಿಳೆಯರಿಗೆ ಪ್ರೇರಣೆಯಾಗಿರಬಹುದು. ಸರಳವಾಗಿ ಜನ ಸಾಮಾನ್ಯರೊಂದಿಗೆ ಒಡನಾಟ ಇಟ್ಟುಕೊಂಡು ಮಹಿಳೆಯರು ರಾಜಕಾರಣ ಮಾಡಬಹುದು ಎಂಬುದನ್ನು ಗೊತ್ತು ಮಾಡಿ ದೊಡ್ಡ ವ್ಯಕ್ತಿಯಾಗಿ ಬೆಳೆದರು ಎಂದು ಬಣ್ಣಿಸಿದರು.

ಹಿಂದೊಮ್ಮೆ ಅವರು ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಆ ಸಂದರ್ಭದಲ್ಲಿ ವಿದ್ಯಾರ್ಥಿನಿಯೊಬ್ಬರು ವಿದೇಶದಲ್ಲಿ ಪ್ರಬಂಧ ಮಂಡಿಸಲು ತೆರಳಬೇಕಿತ್ತು. ಆದರೆ, ವೀಸಾ ಇಲ್ಲದೆ ಪರದಾಡುತ್ತಿದ್ದರು. ಆ ವಿಚಾರ ಗೊತ್ತಾಗಿ ಸುಷ್ಮಾ ಸ್ವರಾಜ್‌ ಅವರು ವಿದ್ಯಾರ್ಥಿನಿಯನ್ನು ಕರೆಸಿಕೊಂಡು ವೀಸಾ ಸಿಗುವಂತೆ ಮಾಡಿದ್ದರು. ವಿದೇಶಗಳಲ್ಲಿ ಭಾರತೀಯರು ಯಾವುದೇ ಸಂಕಷ್ಟಕ್ಕೆ ಸಿಲುಕಿ ಟ್ವೀಟ್‌, ಫೇಸ್‌ಬುಕ್‌, ಇ-ಮೇಲ್‌ ಮೂಲಕ ತಮ್ಮ ಅಹವಾಲು ಸಲ್ಲಿಸಿದರೂ ಸ್ಪಂದಿಸುತ್ತಿದ್ದರು ಎಂದು ಬಣ್ಣಿಸಿದರು.

ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್‌ ಕುಮಾರ್‌, ವಿಧಾನ ಪರಿಷತ್‌ ಸದಸ್ಯ ಲೆಹರ್‌ ಸಿಂಗ್‌, ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ, ರಾಜ್ಯ ಬಿಜೆಪಿ ಕಾರ್ಯದರ್ಶಿ ಜಗದೀಶ್‌ ಹಿರೇಮನಿ, ಜಯದೇವ್‌ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next