ಹೊಸದಿಲ್ಲಿ : ಆಸ್ಟ್ರೇಲಿಯದಿಂದ ಭಾರತಕ್ಕೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಕೌಲಾಲಂಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಠಾತ್ ನಿಧನ ಹೊಂದಿದ ತನ್ನ ಪುತ್ರನೊಂದಿಗೆ ಅಲ್ಲೇ ಬಾಕಿ ಉಳಿದ ಭಾರತೀಯ ಮಹಿಳೆಗೆ ತನ್ನ ಪುತ್ರನ ಶವವನ್ನು ಸ್ವದೇಶಕ್ಕೆ ತರುವಲ್ಲಿ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಅತ್ಯಂತ ಚುರುಕಿನಿಂದ ಸಕಾಲದಲ್ಲಿ ನೆರವಾಗಿ ಕರ್ತವ್ಯ ಪ್ರಜ್ಞೆಯನ್ನು ಮೆರೆದಿದ್ದಾರೆ.
ಮೃತ ವ್ಯಕ್ತಿಯ ಸ್ನೇಹಿತರೋರ್ವರು “ತನ್ನ ಪುತ್ರನ ಶವವೊಂದಿಗೆ ಸ್ವದೇಶಕ್ಕೆ ಬರುವ ಯಾವುದೇ ಉಪಾಯ ಕಾಣದೆ ಕೌಲಾಲಂಪುರ ವಿಮಾನ ನಿಲ್ದಾಣದಲ್ಲಿ ಏಕಾಂಗಿಯಾಗಿ ಉಳಿದಿರುವ ಭಾರತೀಯ ಮಹಿಳೆಗೆ ದಯವಿಟ್ಟು ಕೂಡಲೇ ನೆರವಾಗಿ’ ಎಂದು ಸಚಿವೆ ಸುಶ್ಮಾ ಸ್ವರಾಜ್ ಅವರಿಗೆ ಟ್ಟಿಟರ್ ಮೂಲಕ ಮನವಿ ಮಾಡಿಕೊಂಡಿದ್ದರು.
ಒಡನೆಯೇ ಕಾರ್ಯೋನ್ಮುಖರಾದ ಸುಶ್ಮಾ ಸ್ವರಾಜ್ ಕೌಲಾಲಂಪುರದಲ್ಲಿ ಉಳಿದಿದ್ದ ಭಾರತೀಯ ಮಹಿಳೆಗೆ ತನ್ನ ಪುತ್ರನ ಶವವನ್ನು ಭಾರತಕ್ಕೆ ತರುವಲು ನೆರವಾದರು.
ಕೌಲಾಲಂಪುರದಲ್ಲಿನ ಭಾರತೀಯ ಹೈಕಮಿಶನ್ ಮೂಲಕ ನೆರವಿನ ಭರವಸೆ ನೀಡಿದ ಸುಶ್ಮಾ, ಭಾರತ ಸರಕಾರದ ಖರ್ಚಿನಲ್ಲೇ ಮೃತ ವ್ಯಕ್ತಿಯ ದೇಹವನ್ನು ಭಾರತಕ್ಕೆ ತರಲಾಗುವುದು ಎಂದು ಹೇಳಿದರಲ್ಲದೆ ಮೃತರ ಕುಟುಂಬಕ್ಕೆ ತನ್ನ ಸಂತಾಪ, ಸಾಂತ್ವನ ಹೇಳಿದರು.