ಹೊಸದಿಲ್ಲಿ: ಜಿತೇಂದರ್ ಕುಮಾರ್ ಅವರೊಂದಿಗೆ ಮಂಗಳವಾರ ನಡೆದ ಆಯ್ಕೆ ಟ್ರಯಲ್ಸ್ನಲ್ಲಿ ತೀವ್ರ ಪೈಪೋಟಿಯಿಂದ ಹೋರಾಡಿದ ಸುಶೀಲ್ ಕುಮಾರ್ 4-2 ಅಂತರದಿಂದ ಜಯ ಸಾಧಿಸಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಗಳಿಸಿದರು.
ಇಲ್ಲಿನ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಈ ಆಯ್ಕೆ ಟ್ರಯಲ್ಸ್ನ 74 ಕೆ.ಜಿ. ವಿಭಾಗದಲ್ಲಿ ಇಬ್ಬರು ಬಲಿಷ್ಠ ಕುಸ್ತಿಪಟುಗಳು ನಿರಂತರ ಆಕ್ರಮಣಗೈಯುತ್ತ ಹೋರಾಡಿದರು. ತೀವ್ರ ಗತಿಯಲ್ಲಿ ಹೋರಾಡಿದ ಸುಶೀಲ್ ಆರಂಭದಲ್ಲಿ 4-0 ಮುನ್ನಡೆ ಸಾಧಿಸಿದರು.
ದ್ವಿತೀಯ ಅವಧಿಯ ಆರಂಭದಲ್ಲಿ ಜಿತೇಂದರ್ ಅವರ ಕಣ್ಣಿಗೆ ಸ್ವಲ್ಪ ಗಾಯವಾಗಿತ್ತು. ತತ್‌ಕ್ಷಣ ಸುಶೀಲ್ ಕ್ಷಮೆ ಕೇಳಿದ್ದರು. ಆಬಳಿಕ ಜಿತೇಂದರ್ ಮೂರು ಬಾರಿ ಸುಶೀಲ್ ಅವರ ಬಲ ಕಾಲನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸಿದ್ದರೂ ಅಂಕ ಗಳಿಸಲು ಸಾಧ್ಯವಾಗಲಿಲ್ಲ.
ಪ್ರತಿಯೊಬ್ಬರು ಅವರು (ಸುಶೀಲ್) ಯಾವ ರೀತಿ ಹೋರಾಡಿದ್ದಾರೆ ಎಂಬುದನ್ನು ನೋಡಿದ್ದಾರೆ. ನಾನು ಕುಸ್ತಿ ಆಡುತ್ತಿದ್ದೆ ಮತ್ತು ಅವರು ಸರಿಯಾಗಿ ಹೋರಾಡಿಲ್ಲ ಮತ್ತು ಅನಗತ್ಯವಾಗಿ ಬ್ರೇಕ್ ತೆಗೆದುಕೊಳ್ಳುತ್ತಿದ್ದರು. ಕಣ್ಣು ನೋವಿನ ಬಳಿಕ ನನಗೆ ನೋಡಲು ಕಷ್ಟವಾಗುತ್ತಿತ್ತು ಎಂದು ಪಂದ್ಯದ ಬಳಿಕ ಜಿತೇಂದರ್ ಹೇಳಿದ್ದಾರೆ.
ಜಿತೇಂದರ್ ಮಾತಿಗೆ ಅವರ ಕೋಚ್ ಜೈವೀರ್ ಧ್ವನಿಗೂಡಿಸಿದರು. ಸುಶೀಲ್ ನ್ಯಾಯವಾಗಿ ಹೋರಾಡಲಿಲ್ಲ ಎಂದು ಜೈವೀರ್ ಆರೋಪಿಸಿದರು. ಅವರು ಯಾವುದೋ ಉದ್ದೇಶದಿಂದ ಹೀಗೆ ಮಾಡಿದ್ದಾರೆ. ಇದೇ ತಂತ್ರವನ್ನು 2012ರ ಒಲಿಂಪಿಕ್ಸ್ ನಲ್ಲೂ ಅಳವಡಿಸಿದ್ದಾರೆ. ಇದನ್ನು ಉದ್ದೇಶಪೂರ್ವಕ ವಾಗಿ ಮಾಡಿದ್ದಾರೆ.
ಸುಶೀಲ್ ವಿರುದ್ಧ ಯಾರೂ ಗೆಲ್ಲುವುದು ಅವರಿಗೆ ಇಷ್ಟವಿಲ್ಲ ಎಂದು ಜೈವೀರ್ ಆರೋಪಿಸಿದರು.
ನಾನು ಉದ್ದೇಶಪೂರ್ವಕವಾಗಿ ಈ ರೀತಿ ಹೋರಾಡಿಲ್ಲ. ಅವರು ನನಗೆ ಸಹೋದರ ಇದ್ದಂತೆ. ಇದೊಂದು ಒಳ್ಳೆಯ ಹೋರಾಟ ವಾಗಿತ್ತು ಎಂದು ಸುಶೀಲ್ ಹೇಳಿದ್ದಾರೆ.