Advertisement

ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ ಪ್ರಶಸ್ತಿ: ಕೃತಿಗಳ ಆಹ್ವಾನ

03:39 PM Jul 11, 2019 | Vishnu Das |

ಮುಂಬಯಿ: ಮುಂಬಯಿ ಸಾಹಿತ್ಯ, ಸಾಂಸ್ಕೃತಿಕ, ಸಾಂಘಿಕ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲರಾಗಿದ್ದು, ಮುಂಬಯಿಯ ಕನ್ನಡ ಸಾಹಿತ್ಯ ಲೋಕ ಬಹಳಷ್ಟನ್ನು ನಿರೀಕ್ಷಿಸುತ್ತಿದ್ದಾಗಲೇ ಇಹಯಾತ್ರೆಯನ್ನು ಮುಗಿಸಿದ ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿಯವರ ಸ್ಮರಣಾರ್ಥ ಜಗಜ್ಯೋತಿ ಕಲಾವೃಂದವು ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ ಕಥಾ ಪ್ರಶಸ್ತಿ ಮತ್ತು ಕವಿತಾ ಪ್ರಶಸ್ತಿಯನ್ನು ಕಳೆದ 21 ವರ್ಷಗಳಿಂದ ಆಯೋಜಿಸುತ್ತಿದ್ದು, 2019ನೇ ವಾರ್ಷಿಕ ಪ್ರಶಸ್ತಿಗಾಗಿ ಕನ್ನಡದ ಸಮಸ್ತ ಮಹಿಳೆಯರಿಗಾಗಿ ಅಖೀಲ ಭಾರತ ಮಟ್ಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ವಿಜೇತ ಸ್ಪರ್ಧಿಗಳಿಗೆ ಎರಡೂ ವಿಭಾಗಗಳಲ್ಲೂ ಪ್ರತ್ಯೇಕವಾಗಿ 7 ಸಾವಿರ ರೂ. ನಗದು, ಪ್ರಶಸ್ತಿ ಫಲಕ, ಪ್ರಮಾಣ ಪತ್ರವನ್ನಿತ್ತು ಗೌರವಿಸಲಾಗುವುದು.
ಈ ಸ್ಪರ್ಧೆಯು ರಾಷ್ಟ್ರದಾದ್ಯಂತದ ಸಮಸ್ತ ಕನ್ನಡ ಮಹಿಳೆಯರಿಗಾಗಿ ನಡೆಯಲಿದೆ. ಪ್ರಕಟನೆಗೆ ಸಿದ್ಧವಾದ ಸ್ವರಚಿತ ಕಥಾ, ಕವಿತಾ ಸಂಗ್ರಹವಾಗಿರಬೇಕು.

Advertisement

ಸ್ಪರ್ಧೆಯಲ್ಲಿ ಭಾಗವಹಿಸುವವರು ಕಥಾ ಪ್ರಶಸ್ತಿಗೆ ಒಂದು ಕಥಾ ಸಂಕಲನ ಅಥವಾ ಕವಿತಾ ಪ್ರಶಸ್ತಿಗೆ ಒಂದು ಕವನ ಸಂಕಲನವನ್ನು ಕಳುಹಿಸಬಹುದು. ಒಬ್ಬರೇ ಎರಡೂ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು.ಕತೆ, ಕವಿತೆಗಳನ್ನು ಹಾಳೆಯ ಒಂದೇ ಮಗ್ಗುಲಲ್ಲಿ ಸ್ಪುಟವಾಗಿ ಬರೆದಿರಬೇಕು ಅಥವಾ ಟೈಪ್‌ ಮಾಡಿ ರಬೇಕು. ಕಾರ್ಬನ್‌ ಪ್ರತಿ, ಝೆರಾಕ್ಸ್‌ ಪ್ರತಿಯನ್ನು ಸ್ವೀಕರಿಸಲಾಗುವುದಿಲ್ಲ. ಕಥಾ ಪ್ರಶಸ್ತಿಗೆ ಹಸ್ತ ಪ್ರತಿಯು ಫುಲ್‌ಸ್ಕೇಪ್‌ ಹಾಳೆಯಲ್ಲಿ 100 ಪುಟಗಳಿಂದ 130 ಪುಟಗಳ ಮಿತಿಯಲ್ಲಿರಬೇಕು.

ಕವನ ಸಂಕಲನದಲ್ಲಿ ಕಡಿಮೆಯೆಂದರೂ 30 ಕವಿತೆಗಳಿರಬೇಕು. ಖಂಡಕಾವ್ಯ ಅಥವಾ ಚುಟುಕು, ಹನಿಗವನ ಕವಿತೆಗಳಾಗಿರಬಾರದು. ಹಸ್ತಪ್ರತಿಯಲ್ಲಿ ಹೆಸರು ನಮೂದಿಸಿರಬಾರದು. ಹೆಸರು, ವಿಳಾಸ, ಪರಿಚಯ, ದೂರವಾಣಿ ಸಂಖ್ಯೆ, ಇತ್ತೀಚೆಗಿನ ಭಾವಚಿತ್ರದೊಂದಿಗೆ ಹಸ್ತ
ಪ್ರತಿಯ ಜತೆಗೆ ಪ್ರತ್ಯೇಕವಾಗಿ ಕಳುಹಿಸಬೇಕು. ಸ್ಪರ್ಧೆಗೆ ಪ್ರವೇಶ ಶುಲ್ಕ ಇರುವುದಿಲ್ಲ. ಸ್ಪರ್ಧೆಗೆ ಬಂದ ಕೃತಿಗಳನ್ನು ಹಿಂದಿರುಗಿಸಲಾಗುವುದಿಲ್ಲ. ಪ್ರಶಸ್ತಿ ಪಡೆದ ಪ್ರತಿಗಳನ್ನು ಮುದ್ರಿಸುವಾಗ ಪುಟದ ಮೇಲ್ಗಡೆ ಹಾಗೂ ಪ್ರಥಮ ಒಳಪುಟದಲ್ಲಿ ಜಗಜ್ಯೋತಿ ಕಲಾವೃಂದದ ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ ಕಥಾ/ಕವಿತಾ ಪ್ರಶಸ್ತಿ ವಿಜೇತ ಕೃತಿ 2019 ಎಂದು ಮುದ್ರಿಸತಕ್ಕದ್ದು. ಪ್ರಶಸ್ತಿ ಪ್ರಧಾನ ಸಮಾರಂಭವು ಸಂಸ್ಥೆಯ ವಾರ್ಷಿಕೋತ್ಸವ ಸಂದರ್ಭದಲ್ಲಿ ನಡೆಯಲಿದೆ.

ಒಮ್ಮೆ ಒಂದು ವಿಭಾಗದಲ್ಲಿ ಪ್ರಶಸ್ತಿ ಪಡೆದವರು ಅದೇ ವಿಭಾಗದಿಂದ ಸ್ಪರ್ಧೆಗೆ ಮತ್ತೆ ಭಾಗವಹಿಸುವಂತಿಲ್ಲ. ಸ್ಪರ್ಧೆಯ ಬಗ್ಗೆ ಯಾವುದೇ ತೀರ್ಮಾನವನ್ನು ಕೈಗೊಳ್ಳುವ ಹಕ್ಕನ್ನು ವೃಂದವು ಕಾಯ್ದಿರಿಸಿಕೊಂಡಿದೆ. ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿದ್ದು, ಯಾವುದೇ ಪತ್ರ ವ್ಯವಹಾರಗಳಿಗೆ ಅವಕಾಶವಿಲ್ಲ. ಕೃತಿಗಳನ್ನು ಅಕ್ಟೋಬರ್‌ 30ರೊಳಗೆ ಸುಕುಮಾರ್‌ ಎನ್‌. ಶೆಟ್ಟಿ, ಸಿ/ಒ. ಎಸ್‌. ಎನ್‌.; ಅಸೋಸಿಯೇಟ್ಸ್‌, ತಳಮಹಡಿ, ರೂಮ್‌ ನಂಬರ್‌ 5, ನೀಲಕಂಠ ಸಾಗರ್‌ ಸಿಎಚ್‌ಎಸ್‌, ಮಹಾತ್ಮಾ ಫುಲೆ ರೋಡ್‌, ಡೊಂಬಿವಲಿ ಪಶ್ಚಿಮ-421202 ಈ ವಿಳಾಸಕ್ಕೆ ಕಳುಹಿಸಿಕೊಡತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಸಂತೋಷ್‌ ಪಿ. ಶೆಟ್ಟಿ (9892110826), ವಸಂತ್‌ ಸುವರ್ಣ (9892833623) ಇವರನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next