ಬೆಂಗಳೂರು: ಕಾಂಗ್ರೆಸ್ ಆಡಳಿತ ನಡೆಸುತ್ತಿರುವ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಜಂಗಲ್ ರಾಜ್ ಸೃಷ್ಟಿಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದ್ದಾರೆ.
ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡ ಜನಪರ ವೇದಿಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ಧ ಸುಶಾಸನ ದಿನಾಚರಣೆ ಮತ್ತು ಅಟಲ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಿಕ್ಸೂಚಿ ಭಾಷಣ ಮಾಡಿದರು.
ಕಾಂಗ್ರೆಸ್ನವರು ಕಾನೂನಿನ ಆಡಳಿತ ಎಂಬ ಪರಿಕಲ್ಪನೆಯ ಅರಿವೇ ಇಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ. ನನ್ನ ಶಿಷ್ಯಂದಿರು ಈ ರೀತಿ ವರ್ತಿಸಬಹುದು ಎಂದು ಅರಿತಿದ್ದ ಮಹಾತ್ಮ ಗಾಂಧಿ ಅವರು ಸ್ವಾತಂತ್ರ ಸಿಕ್ಕ ಬಳಿಕ ಕಾಂಗ್ರೆಸ್ ಅನ್ನು ವಿಸರ್ಜಿಸಬೇಕು ಎಂದು ಹೇಳಿದ್ದರು. ನಮ್ಮ ಸಂವಿಧಾನ ಈವರೆಗೆ ಒಟ್ಟು 106 ಬಾರಿ ತಿದ್ದುಪಡಿ ಆಗಿದ್ದರೆ ಈ ಪೈಕಿ ಕೇಂದ್ರದಲ್ಲಿ ಕಾಂಗ್ರೆಸ್ನ ಆಡಳಿತ ಅವಧಿಯಲ್ಲಿ 75 ಬಾರಿ ತಿದ್ದುಪಡಿ ಆಗಿದೆ. ಕಾಂಗ್ರೆಸ್ನವರು ತಮ್ಮ ಬೆಳಗಾವಿ ಅಧಿವೇಶನದಲ್ಲಿ ಏಕೆ 75 ಬಾರಿ ಸಂವಿಧಾನ ತಿದ್ದುಪಡಿ ಮಾಡಿದ್ದೇವೆ ಎಂಬುದರ ಬಗ್ಗೆ ಚರ್ಚೆ ನಡೆಸಲಿ ಎಂದು ಸಂತೋಷ್ ಸವಾಲೆಸೆದರು.
ಕೇಂದ್ರದಲ್ಲಿ ವಾಜಪೇಯಿ ಸರ್ಕಾರವಿದ್ದಾಗ ಒಟ್ಟು 14 ಬಾರಿ ಸಂವಿಧಾನ ತಿದ್ದುಪಡಿ ಮಾಡಲಾಗಿತ್ತು. ಆದರೆ ಈ ಪೈಕಿ ಬಹುತೇಕ ಬಾರಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಒಳಿತನ್ನು ಗಮನದಲ್ಲಿರಿಸಿಕೊಂಡು ತಿದ್ದುಪಡಿ ಮಾಡಲಾಗಿದೆ. ಅದೇ ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರು ಮಾಡಿದ ಸಂವಿಧಾನದ ಮೊದಲ ತಿದ್ದುಪಡಿಯೇ ಪತ್ರಿಕೆಗಳ ಸ್ವತಂತ್ರ ಹರಣ ಮಾಡುವ ಉದ್ದೇಶ ಹೊಂದಿತ್ತು ಎಂದು ಹೇಳಿದರು.
ಕಾಂಗ್ರೆಸ್ನವರು ಎಂದೂ ಅಂಬೇಡ್ಕರ್ ಅವರ ಆಶಯಗಳ ಈಡೇರಿಕೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಂಬೇಡ್ಕರ್ ಅವರು 1960ರೊಳಗೆ ಕಡ್ಡಾಯ ಶಿಕ್ಷಣ ಜಾರಿ ಕಾಯ್ದೆ ರಚನೆ ಆಗಬೇಕು ಎಂದು ಹೇಳಿದ್ದರು. ಆದರೆ ಶಿಕ್ಷಣ ಕಡ್ಡಾಯವಾಗಲು ವಾಜಪೇಯಿ ಸರ್ಕಾರ ಬರಬೇಕಾಯಿತು ಎಂದು ಸಂತೋಷ್ ಹೇಳಿದರು.