ನವದೆಹಲಿ:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಇದೀಗ ಪ್ರೇಯಸಿ, ನಟಿ ರಿಯಾ ಚಕ್ರವರ್ತಿ ಕಳೆದ ಹನ್ನೊಂದು ತಿಂಗಳ ಕಾಲ ಮಾಡಿದ್ದ ಖರ್ಚು, ವೆಚ್ಚದ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.
34ವರ್ಷದ ನಟ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣಾದ ನಂತರ ಪ್ರೇಯಸಿ ರಿಯಾ ಚಕ್ರವರ್ತಿ ವಿರುದ್ಧ ಬಳಳಷ್ಟು ಟೀಕೆ, ಆರೋಪಗಳು ಕೇಳಿ ಬಂದಿದ್ದವು. ಮೂಲಗಳ ಪ್ರಕಾರ, 2019ರಲ್ಲಿ ರಿಯಾ ಜಾಹೀರಾತು ಚಿತ್ರೀಕರಣಕ್ಕಾಗಿ ಯುರೋಪ್ ಗೆ ತೆರಳಿದ್ದಳು. ಈ ಸಂದರ್ಭದಲ್ಲಿ ಟಿಕೆಟ್ ಸೇರಿದಂತೆ ಪ್ರತಿಯೊಂದು ಖರ್ಚನ್ನು ಭರಿಸಿದ್ದು ಸುಶಾಂತ್ ಸಿಂಗ್!
ಕಳೆದ ಹನ್ನೊಂದು ತಿಂಗಳಿನಿಂದ ರಿಯಾ ಚಕ್ರವರ್ತಿ ಸುಶಾಂತ್ ಖಾತೆಯಿಂದ ಭಾರೀ ಮೊತ್ತದ ಹಣವನ್ನು ಖರ್ಚು ಮಾಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ರಿಯಾ ಚಕ್ರವರ್ತಿ ನಿಖರವಾಗಿ ಎಷ್ಟು ಹಣವನ್ನು ಖರ್ಚು ಮಾಡಿದ್ದಾಳೆ ಎಂಬ ಬಗ್ಗೆ ವಿಚಾರಣೆ ನಡೆಸುತ್ತಿರುವುದಾಗಿ ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.
2020ರ ಜೂನ್ 14ರಂದು ಸುಶಾಂತ್ ಸಿಂಗ್ ಮುಂಬೈನ ಬಾಂದ್ರಾದ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಕೊನೆಗೂ ಪ್ರೇಯಸಿ ರಿಯಾ ಚಕ್ರವರ್ತಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮನವಿ ಮಾಡಿಕೊಂಡಿದ್ದರು. ಸುಶಾಂತ್ ಸಿಂಗ್ ಪ್ರಕರಣದಲ್ಲಿ ಮುಂಬೈ ಪೊಲೀಸರು ಈಗಾಗಲೇ ಸುಮಾರು 35 ಮಂದಿಯನ್ನು ವಿಚಾರಣೆಗೊಳಪಡಿಸಿದ್ದಾರೆ.