Advertisement
ಇದು ಉತ್ತರ ಕನ್ನಡದಲ್ಲಿರುವ, ಹೆಚ್ಚಿನವರಿಗೆ ಗೊತ್ತಿಲ್ಲದ ಪ್ರೇಕ್ಷಣೀಯ ಸ್ಥಳ. ಯಲ್ಲಾಪುರದಿಂದ ಕಾರವಾರದ ಮಾರ್ಗವಾಗಿ ಹೊರಟಾಗ ಸಿಗುವ ಚಿನ್ನಾಪುರ ಎಂಬಲ್ಲಿ ಶತಮಾನಗಳಷ್ಟು ಹಳೆಯ ಪುಟ್ಟ ಶಿವನ ಗುಡಿ ಸಿಗುತ್ತದೆ. ಅಲ್ಲೊಂದು ಪ್ರದಕ್ಷಿಣೆ ಹಾಕಿ, ಹತ್ತಾರು ತಿರುವುಗಳ ರಸ್ತೆಗಳ ಪಯಣ ಮುಗಿಯುವುದೇ ಇಲ್ಲವೇನೋ ಅಂದುಕೊಳ್ಳುವಷ್ಟರಲ್ಲಿ ಒಂದೊಂದೇ ಮನೆ, ಊರು, ಗದ್ದೆ ಬಯಲು, ಅಡಿಕೆ ತೆಂಗುಗಳ ಸಾಲು ಇದಿರಾಗುತ್ತದೆ. ಮಾವಿನ ಮನೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಈ ಊರು ನಿತ್ಯ ಹರಿದ್ವರ್ಣ ಕಾಡಿನಿಂದಲೇ ಪರಿಚಿತವಾಗುತ್ತದೆ. ಮುಂದೆ ಗೋಗದ್ದೆ ಎನ್ನುವ ಊರು ದಾಟಿ, ಬಾರೆ ಕ್ರಾಸ್ ಎನ್ನುವ ತಂಗುದಾಣ ತಲುಪಿ, ಅಲ್ಲಿಂದ ಬಲಕ್ಕೆ ಹೊರಳಿದಾಗ ಸಿಗುವ ಮಲವಳ್ಳಿಯನ್ನು ದಾಟಿ ಎಡಕ್ಕೆ ಹೊರಳಿದರೆ ಬಾರೆ ಶೀಗೇಕೇರಿ ಸಿಗುತ್ತದೆ. ಸೂರ್ಯಕಲ್ಯಾಣಿ ಗುಡ್ಡಕ್ಕೆ ತೆರದುಕೊಳ್ಳುವ ದಾರಿ ಇಲ್ಲಿಂದ ಮುಂದೆ ಇನ್ನಷ್ಟು ದಟ್ಟ ಕಾಡಿನ ಪಯಣ. ಚಾರಣ ಇಷ್ಟ ಪಡುವವರಿಗೆ ಇದು ಹೇಳಿ ಮಾಡಿಸಿದ ಜಾಗ.
Related Articles
Advertisement
ಹಿಂದೊಮ್ಮೆ ಹುಲಿಗಳಿದ್ದವಂತೆ!
ಮಳೆಗಾಲದಲ್ಲಿ, ಕುಳಿರ್ಗಾಳಿ ಮಂಜಿಗೆ ಸಿಕ್ಕು ಬೆಳ್ಳಗಾಗುವ ಹಸಿರು, ಸೌಂದರ್ಯವೇ ಕೈಗೆಟುಕಿದ ಭಾವ ನಮ್ಮದಾಗುತ್ತದೆ. ಸೂರ್ಯ ಕಂತುವ ಹೊತ್ತಿಗೆ ಇಲ್ಲಿ ಕೂತು ಪ್ರಕೃತಿ ಸೌಂದರ್ಯ ಸವಿಯುತ್ತ, ಹರಟುತ್ತ, ಅಯಾಸ ತಣಿಸಿಕೊಳ್ಳುತ್ತಾ, ಕಾಲ ಕಳೆಯುವ ಪರಿ ವರ್ಣಿಸಲಸದಳ. ಹೊರಜಗತ್ತಿಗೆ ಪರಿಚಯವಿಲ್ಲದ ಈ ಜಾಗಕ್ಕೆ ಇತ್ತೀಚಿಗೆ ಪ್ರವಾಸಿಗರು ಬರಲು ಪ್ರಾರಂಭಿಸಿದ್ದಾರೆ.
60 ವರ್ಷಗಳ ಹಿಂದೆ ನಮ್ಮ ಅಪ್ಪ ಜೊತೆಗಾರರೊಂದಿಗೆ ಬುತ್ತಿ ಕಟ್ಟಿಕೊಂಡು ಗೋಪಾಲಕರಂತೆ ದನ ಕಾಯಲು ಇಲ್ಲಿಗೆ ಬರುತ್ತಿದ್ದರಂತೆ. ಹಾಡು ಹಗಲೇ ದನಕರುಗಳು ಹುಲಿ ಬಾಯಿಗೆ ಆಹಾರವಾದ ಘಟನೆಗಳನ್ನು, ದನಕರುಗಳ ಹುಡುಕುತ್ತಾ ಅಲ್ಲಿ ಕಳೆದ ರಾತ್ರಿಗಳ ಕಥೆಗಳನ್ನು ಅವರು ರೋಚಕವಾಗಿ ಹೇಳುತ್ತಿದ್ದರು.
ಸಾವಿರಾರು ಬಾವಲಿಗಳು…
ಕಾಲ ಕಳೆದಂತೆ ಇದೊಂದು ನೋಡಬೇಕಾದ ಸ್ಥಳವಾಗಿ ಬದಲಾಗುತ್ತಾ ಬಂತು. ಆದರೆ ಈ ಸ್ಥಳ ಹೆಚ್ಚಿನ ಪ್ರಸಿದ್ಧಿ ಪಡೆಯುವುದು ಬೇಡ ಅನ್ನುವುದೇ ಊರ ಜನರ ಮಾತು. ಯಾಕೆಂದರೆ, ಪ್ರವಾಸಿಗರು ಪರಿಸರವನ್ನು ಹಾಳು ಮಾಡುತ್ತಾರೆ. ಕಂಡಕಂಡಲ್ಲಿ ಪ್ಲಾಸ್ಟಿಕ್ ಎಸೆಯುತ್ತಾರೆ ಎನ್ನುವುದು ಎಲ್ಲರ ದೂರು. ಯಾರಾದರೂ ಮನೆಗೆ ಬಂದರೆ ಅವರನ್ನು ವಿಹಾರಕ್ಕಾಗಿ ಕರೆದುಕೊಂಡು ಹೋಗಲಷ್ಟೇ ಈ ಜಾಗವನ್ನು ಆಯ್ದುಕೊಳ್ಳುತ್ತಾರೆ. ಅಲ್ಲೇ ಹತ್ತಿರದಲ್ಲಿ “ಬಾವಲಿ ಗುಹೆ’ ಎಂಬ ಜಾಗ ಇದೆ. ಅತ್ಯಂತ ಪುರಾತನ ಗುಹೆ. ಪಾಂಡವರು ವನವಾಸದಲ್ಲಿದ್ದಾಗ ಈ ಗುಹೆಯಲ್ಲಿ ಆಶ್ರಯ ಪಡೆದಿದ್ದರು ಎನ್ನುವ ಪ್ರತೀತಿ ಇದೆ. ಅಲ್ಲಿ ಕಾಣಿಸುವ ಸಾವಿರಾರು ಬಾವಲಿಗಳು ಭಯ ಉಂಟುಮಾಡುತ್ತವೆ. ಗುಹೆಯ ಮೇಲಿನ ಗುಡ್ಡದಲ್ಲಿರುವ ದೇವತೆ ಈ ಕಾಡನ್ನು ಕಾಯುತ್ತಾಳೆ ಎನ್ನುವುದು ಸ್ಥಳೀಯರ ನಂಬಿಕೆ.
ಪರಿಸರ ಪ್ರಿಯರ ಇಷ್ಟದ ಸ್ಥಳ:
ಇದು ಸಾಹಸಿಗರ ಮತ್ತು ಪರಿಸರ ಪ್ರೇಮಿಗಳ ಅಚ್ಚುಮೆಚ್ಚಿನ ತಾಣ ಕೂಡಾ ಹೌದು. ಇಲ್ಲಿಗೆ ಹೋಗುವ ದಾರಿಯಲ್ಲಿಯೇ ಕಾನೂರು ಪಾಲ್ಸ್ ಸಿಗುತ್ತದೆ. ಹಾಗೇ ದೇವಾRರು ಜಲಪಾತದ ನೆತ್ತಿಗೆ ಕೂಡ ಭೇಟಿ ಕೊಡಬಹುದು. ಇವೆಲ್ಲವನ್ನೂ ಒಂದೇ ರೂಟ್ ನಲ್ಲಿ ನೋಡಿ, ಸೂರ್ಯಾಸ್ತದ ವೇಳೆಗೆ ತುತ್ತ ತುದಿಯ ಮತ್ತು ಕೊನೆಯ ಸೂರ್ಯಕಲ್ಯಾಣಿ ಗುಡ್ಡಕ್ಕೆ ಭೇಟಿ ಕೊಟ್ಟು, ಅತ್ಯಂತ ಕಡಿದಾದ ರಸ್ತೆಯಲ್ಲಿ ಹೆಗ್ಗಾರು ಘಟ್ಟ ಇಳಿದರೆ, ಮತ್ತೆ ಅದೇ ಕಾರವಾರ- ಹುಬ್ಬಳ್ಳಿ ರಸ್ತೆಗೆ ಸೇರಿಕೊಳ್ಳಬಹುದು. ಬಂದ ದಾರಿಯಲ್ಲಿಯೇ ವಾಪಸ್ ಹೋಗಬಹುದು. ಅದು ಸುಮಾರು 35 ಕಿಲೋಮೀಟರ್ ದಾರಿ. ಇವನ್ನೆಲ್ಲ ನೋಡಿ ಪ್ರಕೃತಿಯ ಮಡಿಲಿಂದ ಹೊರಬಿದ್ದವರಿಗೆ ದೃಷ್ಟಿ ಹೊಂದಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ.
ದೇಹದಲ್ಲಿ ಕಸುವಿರಬೇಕು…
ಹೆಗ್ಗಾರು ಘಟ್ಟ ಇಳಿಯಲು ಅಥವಾ ಹತ್ತಲು ಜೀಪುಗಳೇ ಆಗಬೇಕು. ಸೂರ್ಯ ಕಲ್ಯಾಣಿ ಗುಡ್ಡಕ್ಕೆ ಭೇಟಿ ಕೊಡುವವರು ಸ್ಥಳೀಯರ ಸಂಪರ್ಕ ಮಾಡಿದರೆ ಒಳ್ಳೆಯದು. ಮಲೆನಾಡಿನ ಬೆಟ್ಟ- ಗುಡ್ಡ, ಕಾಡುಗಳ ಪರಿಚಯ ಆಗಬೇಕು ಅಂದರೆ ಒಮ್ಮೆ ಈ ಜಾಗಕ್ಕೆ ಭೇಟಿ ಕೊಡಬಹುದು. ಆದರೆ ದೇಹದಲ್ಲಿ ಕಸುವಿರಬೇಕು ಅಷ್ಟೇ. ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳು, ಇಲ್ಲಿಗೆ ಭೇಟಿ ಕೊಡಲು ಸೂಕ್ತ ಸಮಯ.
ಪ್ರವಾಸಿಗರ ಗಮನಕ್ಕೆ…
ಈ ಸ್ಥಳದ ವೀಕ್ಷಣೆಗೆ ಬರುವವರು ಷೂ ಧರಿಸಿ ಬಂದರೆ ಒಳ್ಳೆಯದು. ಕಾರಣ ಇಲ್ಲಿನ ದಾರಿ ಕಿರಿದಾಗಿದೆ. ಇಲ್ಲಿನ ಪರಿಸರಕ್ಕೆ ಚಪ್ಪಲಿಗಳು ಹೊಂದಲಾರವು. ಜೊತೆಗೆ ಅಗತ್ಯವಿರುವಷ್ಟು ಆಹಾರ, ನೀರು ಕೊಂಡೊಯ್ಯಬೇಕು. ಅಲ್ಲಲ್ಲಿ ಸಣ್ಣ ಪುಟ್ಟ ಅಂಗಡಿಗಳು ಸಿಗುತ್ತವೆಯಾದರೂ ಬೇಕಾದಾಗ ಬೇಕೆಂದಲ್ಲಿ ಆಹಾರ ಮತ್ತು ನೀರು ಸಿಗಲಿಕ್ಕಿಲ್ಲ.
-ಸ್ಮಿತಾ ಭಟ್ಟ