Advertisement

ಶಿಕ್ಷಕ ವೃತ್ತಿ ತ್ಯಜಿಸಿ ಹಸುರು ಕ್ರಾಂತಿ ಮಾಡಿದ ಸುರ್ಯದ ಶ್ರಮಿಕ

09:32 PM Dec 19, 2019 | Sriram |

ನಾವು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿ ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

Advertisement

ಬೆಳ್ತಂಗಡಿ: ಸರಕಾರಿ ಶಿಕ್ಷಕ ಹುದ್ದೆ ತ್ಯಜಿಸಿ ಕೃಷಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕೆಂದು ಪಣ ತೊಟ್ಟು ಬರಡು ಭೂಮಿಯಲ್ಲಿ ಹಸುರು ಕ್ರಾಂತಿ ಮೂಡಿಸಿದ ಸಾಧಕನನ್ನು ನಾವಿಂದು ಪರಿಚಯಿಸುತ್ತಿದ್ದೇವೆ. ಬೆಳ್ತಂಗಡಿ ತಾ|ನ ನಡ ಗ್ರಾಮದ ಸುರ್ಯ ನಿವಾಸಿ ಪ್ರಭಾಕರ ಮಯ್ಯ ತನ್ನ 5 ಎಕ್ರೆ ಬರಡು ಜಮೀನಿನಲ್ಲಿ ಕೃಷಿ ಸಂಶೋಧನೆ ನಡೆಸುತ್ತಾ 20 ವರ್ಷಗಳಲ್ಲಿ ಬಂಗಾರದಂತಹ ಬೆಳೆ ತೆಗೆದು ವಿವಿಗಳಿಗೆ ಬೆರಗು ಮೂಡಿಸಿದ್ದಾರೆ. ಇವರು ಸರಿಸುಮಾರು 15 ವರ್ಷಗಳ ಹಿಂದೆಯೇ ಶೇ. 80ರಷ್ಟು ಸಾವಯವ ಪದ್ಧತಿಯಿಂದ ಸಮಗ್ರ ಕೃಷಿ ಆರಂಭಿಸಿದ್ದರು.

ಇವರ ಸಮಗ್ರ ಕೃಷಿ ಪದ್ಧತಿ ಕಂಡು ಕೃಷಿ ವಿಶ್ವವಿದ್ಯಾಲಯವೂ ಅದನ್ನು ಅಳವಡಿಕೆ ಮಾಡಿಕೊಂಡಿರುವುದು ಇವರ ಸಾಧನೆಗೆ ಹಿರಿಮೆ. ತನ್ನ 5 ಎಕ್ರೆ ಜಮೀನಿನಲ್ಲಿ 1 ಎಕ್ರೆ ಗದ್ದೆ, ಉಳಿದಂತೆ 1,500 ಅಡಿಕೆ ಗಿಡ, 100 ತೆಂಗಿನ ಮರ, 500 ಕೊಕ್ಕೊ, ಕಾಳುಮೆಣಸು 250 ಬುಡ, 300 ಕಾಫಿ ಗಿಡ, ಕಬ್ಬು, ವೀಳ್ಯದೆಲೆ, ವಿವಿಧ ತರಕಾರಿ, ರಂಬೂಟಾನ್‌, ಅಗರ್‌ವುಡ್‌, ಲಿಂಬೆ, ಸುವರ್ಣಗೆಡ್ಡೆ, ಕೋಳಿ, ಮೀನು, ಹೈನುಗಾರಿಕೆ ಸಹಿತ ಕೃಷಿಯಲ್ಲಿ ಅಗಾಧವಾಗಿ ಬೇರೂರಿದ್ದಾರೆ.

25 -30ಲೀ. ಪ್ರತಿನಿತ್ಯ ಹಾಲು
ಮಯ್ಯರು 5 ದನ, 4 ಕರು ಸಹಿತ 9 ಹಸು ಸಾಕಿದ್ದಾರೆ. ಪ್ರತಿನಿತ್ಯ 25ರಿಂದ 30 ಲೀ. ಹಾಲು ಪಡೆಯುತ್ತಿದ್ದಾರೆ. ಇದರ ಸೆಗಣಿ ಗಂಜಲ ಎಲ್ಲೂ ಪೋಲಾಗದಂತೆ ಬಯೋ ಡೈಜೆಸ್ಟ್‌ (ಸ್ಲೆರಿ) ಗುಂಡಿ ಅಳವಡಿಸಿಕೊಂಡು ತೋಟಗಳಿಗೆ ಸೆಗಣಿ ಗೊಬ್ಬರ ಬಳಸುವುದರಿಂದ ವಾರ್ಷಿಕ ಸರಾಸರಿ 25 ಕ್ವಿಂಟಾಲ್‌ ಅಡಿಕೆ ಬೆಳೆಯುತ್ತಾರೆ.

ಆಧುನಿಕ ಯಂತ್ರೋಪಕರಣ ಬಳಕೆ
ಕೂಲಿ ಆಳುಗಳ ಸಮಸ್ಯೆ ಇದೆ ಎಂದು ಮರುಗದೆ, ಆಧುನಿಕ ತಂತ್ರಜ್ಞಾನ ಬಳಸಿ ಟಿಲ್ಲರ್‌, ಸ್ಪ್ರೆàಗನ್‌, ಗರಗಸ, ಹುಲ್ಲು ಕಟಾವು, ಅಗೆತ ಎಲ್ಲದಕ್ಕೂ ಯಂತ್ರಗಳ ಪ್ರಯೋಗ ನಡೆಸಿದ್ದಾರೆ.

Advertisement

ಪ್ರಶಸ್ತಿ-ಸಮ್ಮಾನ
– 2010ರಲ್ಲಿ ಸಾಧನಾಶ್ರೀ ಪ್ರಶಸ್ತಿ
– 2011ರಲ್ಲಿ ಬೆಂಗಳೂರು ಗಾಂಧಿ ಕೃಷಿ ವಿವಿ ಪ್ರಗತಿಶೀಲ ರೈತ ಪ್ರಶಸ್ತಿ
– 2012ರಲ್ಲಿ ಆಲ್‌ ಇಂಡಿಯಾ ಫೆಡರೇಶನ್‌ ಅವಾರ್ಡ್‌-ಸಿ.ಪಿ.ಸಿ.ಆರ್‌.ಐ. ಕಾಸರಗೋಡು ಕೇರಳ ಇವರಿಂದ ಉತ್ತಮ ಅಡಿಕೆ ಬೆಳೆಗಾರ ಪ್ರಶಸ್ತಿ
– 2013ರಲ್ಲಿ ಗುಜರಾತ್‌ ಸರಕಾರದ ನರೇಂದ್ರ ಮೋದಿಯಿಂದ ಶ್ರೇಷ್ಠ ಕಿಸಾನ್‌ ಪುರಸ್ಕಾರ್‌
– 2013ರಲ್ಲಿ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿಯಿಂದ ಉತ್ತಮ ಕೃಷಿಕ ಪ್ರಶಸ್ತಿ
– 2015ರಲ್ಲಿ ಆರ್ಟ್‌ ಆಫ್‌ ಲಿವಿಂಗ್‌ನ ರವಿಶಂಕರ್‌ ಗುರೂಜಿಯವರಿಂದ ಕೃಷಿಕ ಪ್ರಶಸ್ತಿ
– 2015ರಲ್ಲಿ ಕರ್ನಾಟಕ ಸರಕಾರದ ಆತ್ಮಯೋಜನೆ ಶ್ರೇಷ್ಠ ಕೃಷಿಕ ಪ್ರಶಸ್ತಿ
2016ರಲ್ಲಿ ಭಾರತೀಯ ಕೃಷಿ ಅನುಸಂದಾನ ಸಂಸ್ಥೆ ಭಾರತ ಸರಕಾರ ಇವರಿಂದ ರಾಷ್ಟ್ರಮಟ್ಟದ ಇನೊವೇಟಿವ್‌ ಕೃಷಿಕ ಪ್ರಶಸ್ತಿ
– 2016ರಲ್ಲಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ನಿರಂತರ ಶ್ರಮ
ಕೃಷಿಯಲ್ಲಿ ಆದಾಯ ತರುವಲ್ಲಿ ಮಿಶ್ರಬೆಳೆಯಿಂದ ಆದಾಯ ವೃದ್ಧಿಸಲು ಸಾಧ್ಯ. ನಿರಂತರ ಶ್ರಮದಿಂದ ಇಷ್ಟ ಜತೆಗೆ ಪರಿಶ್ರಮಪಟ್ಟು ಕೃಷಿಯನ್ನು ಪೂರ್ಣಕಾಲಿಕ ಉದ್ಯೋಗವಾಗಿ ಸ್ವೀಕರಿಸಿದಲ್ಲಿ ಕೃಷಿಯಿಂದ ನಷ್ಟ ಆಗದು ಎಂಬುವುದನ್ನು ನಾನು ಕಂಡುಕೊಂಡಿದ್ದೇನೆ. ಯುವ ಸಮುದಾಯ ಕೃಷಿಯ ಕುರಿತು ಪೂರ್ವ ಮಾಹಿತಿ ಪಡೆದು ವ್ಯವಹಾರ, ಉದ್ಯೋಗದ ಜತೆಗೆ ಕೃಷಿಯಲ್ಲಿ ತೊಡಗಿಸಿ ಕೊಂಡಾಗ ಉದ್ಯೋಗ ಕಳೆದುಕೊಂಡರೂ ನೆಮ್ಮದಿಯ ಜೀವನ ನಡೆಸಬಹುದು.
-ಪ್ರಭಾಕರ ಮಯ್ಯ, ಸುರ್ಯ
ಕೃಷಿ ಸಾಧಕರು

ಹೆಸರು: ಪ್ರಭಾಕರ ಮಯ್ಯ
ಏನು ಕೃಷಿ: ಮಿಶ್ರಬೆಳೆ
ವಯಸ್ಸು: 52
ಕೃಷಿ ಪ್ರದೇಶ: 5 ಎಕ್ರೆ
-ಜಪಾನ್‌ ಮಾದರಿ ಗೊಬ್ಬರ ಗುಂಡಿ
– ಅಗ್ರಿ ಫಾರೆಸ್ಟ್‌
-ಬಯೋ ಡೈಜೆಸ್ಟರ್‌
-ಅಧುನಿಕ ಯಂತ್ರೋಪಕರಣ ಬಳಕೆ
– 1 ಎಕ್ರೆಯಲ್ಲಿ ಒಂದು ಬೆಳೆಗೆ 25 ಕೆ.ಜಿ. ಅಕ್ಕಿ
– ಮೊಬೈಲ್‌ ಸಂಖ್ಯೆ- 9686329327

-ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next