Advertisement

ಶರಾವತಿ ಹಿನ್ನೀರಲ್ಲಿ ಈಜಿದ ಪೋರಿ!

05:04 PM Mar 26, 2019 | pallavi |
ಸಾಗರ: ಪೌಢ ವಯಸ್ಕರು ನೋಡಿದರೆ ಭಯ ಬೀಳುವ ಶರಾವತಿ ಹಿನ್ನೀರಿನಲ್ಲಿ ಕೇವಲ 3 ವರ್ಷ 8 ತಿಂಗಳಿನ ಕುವರಿಯೊಬ್ಬಳು ಒಂದು ತಾಸಿನಲ್ಲಿ ಒಂದು ಕಿ.ಮೀ. ಈಜಿ ಜನರನ್ನು ಬೆಕ್ಕಸ ಬೆರಗಾಗಿಸಿದ ಘಟನೆ ಭಾನುವಾರ ನಡೆದಿದ್ದು ತಡವಾಗಿ ಮಾಹಿತಿ ಲಭಿಸಿದೆ. ಶರಾವತಿ ಹಿನ್ನೀರಿನ ಹಸಿರುಮಕ್ಕಿಯಲ್ಲಿ ಬಾಲೆ ಮಿಥಿಲಾ ಈ ಸಾಹಸ ಮೆರೆದಿದ್ದಾಳೆ.
ಸಾಗರ- ಹೊಸನಗರ ದಡಕ್ಕೆ ಸಂಪರ್ಕವಾಗಿರುವ ಶರಾವತಿ ಹಿನ್ನೀರಿನಲ್ಲಿ ಭಾನುವಾರ ಬೆಳಗ್ಗೆ 7 ಗಂಟೆಗೆ ಈಜಲು ಆರಂಭಿಸಿದ ಕಿಪ್ಪಡಿಯ ಮಿಥಿಲಾ ಎಂಟು ಗಂಟೆಗೆ ಹಸಿರುಮಕ್ಕಿಯ ಮತ್ತೂಂದು ದಡವನ್ನು ಈಜಿ ಸೇರಿದಳು.
ಜಲಮೂಲ ಹಾಗೂ ಪರಿಸರ ಉಳಿಸಿ ಅಭಿಯಾನವನ್ನು ಸಾಗರದ ಜಲಯೋಗ ಸಂಸ್ಥೆ ಹಮ್ಮಿಕೊಂಡಿದ್ದು
ಅದಕ್ಕೆ ಕಿರೀಟವಿರಿಸುವ ರೀತಿಯಲ್ಲಿ ಮಿಥಿಲಾ ಈಜಿದ್ದಾಳೆ.
ಬರೀ ಈಜುವುದಷ್ಟೇ ಅಲ್ಲ, ಮಿಥಿಲಾ ಮಧ್ಯ ನೀರಿನಲ್ಲಿ ಪದ್ಮಾಸನ ಹಾಕಿ ಕುಳಿತಳು. ಜತೆಯಲ್ಲಿ ವಜ್ರಾಸನ, ಅಷ್ಟೂ ಸಾಲದಂತೆ ನೀರಿನಲ್ಲಿ ತೇಲುತ್ತಲೇ ಶವಾಸನದ ಭಂಗಿ ಪ್ರದರ್ಶಿಸಿ ಜನರ ಗಮನ ಸೆಳೆದಳು.
ಒಂದು ಘಂಟೆಯ ಈಜಿನ ನಂತರವೂ ಆಕೆ ಉಲ್ಲಸಿತಳಾಗಿಯೇ ಇದ್ದುದು ಅವಳನ್ನು ಹಿಂಬಾಲಿಸಿಕೊಂಡು ಬಂದಿದ್ದ ಜಲಯೋಗ ಸಂಸ್ಥೆಯ ಮುಖ್ಯಸ್ಥ ಹರೀಶ್‌ ನವಾಥೆ ಹಾಗೂ ಅವರ 20 ಜನರ ತಂಡವನ್ನು ಅಚ್ಚರಿಗೆ ತಳ್ಳಿತು. ಸಹ ಈಜುಗಾರರು ಬಣ್ಣ ಬಣ್ಣದ ಬಲೂನುಗಳನ್ನು ಆಕೆಗೆ ಕೊಟ್ಟು ಸ್ವಾಗತಿಸಿದರು.
ಇದೇ ಮೊದಲ ಬಾರಿ ಅಲ್ಲ!: ಎರಡೂವರೆ ವರ್ಷದಲ್ಲಿಯೇ ಈಜು ಕಲಿತ ಮಿಥಿಲಾಳಿಗೆ ಆವಿನಹಳ್ಳಿ ಹೋಬಳಿ ಕೋಳೂರು
ಗ್ರಾಪಂ ವ್ಯಾಪ್ತಿಯ ನಿವಾಸಿ ತಂದೆ ಗಿರೀಶ್‌, ತಾಯಿ ವಿನುತಾ ಮತ್ತು ಕುಟುಂಬದವರು, ಗ್ರಾಮಸ್ಥರು ಅವಳ ಜತೆಯಲ್ಲಿಯೆ ಕಿಪ್ಪಡಿಯ ಹಿನ್ನೀರಿನಲ್ಲಿ ಈಜುತ್ತಾ ತರಬೇತಿ ನೀಡಿದರು.
ಜಲಯೋಗ ಸಂಸ್ಥೆ ಆಕೆಗೆ ನೀಡಿದ ತರಬೇತಿ ಈಕೆಯ ಸಾಹಸದಲ್ಲಿ ಪ್ರತಿಫಲಿಸಿದೆ. ಮಿಥಿಲಾ ಕಳೆದ ವರ್ಷ ಕೂಡ
ಇದೇ ಹಿನ್ನೀರಿನಲ್ಲಿ ಈಜಿ ಗಮನ ಸೆಳೆದಿದ್ದಳು. ಆಗ ಈಕೆಗೆ ಕೇವಲ 2 ವರ್ಷ 11 ತಿಂಗಳಾಗಿತ್ತು.
ಕಳೆದ ಕೆಲವು ವರ್ಷಗಳಿಂದ ಸಾಗರ ಸುತ್ತಮುತ್ತಲಿನ ಹಳ್ಳಿಗಳಲ್ಲಿರುವ ಕೆರೆ, ಹಿನ್ನೀರು ಮುಂತಾದ ಪ್ರದೇಶಗಳಲ್ಲಿ ಊರಿನ ಜನರನ್ನು ನೀರಿಗಿಳಿಸಿ ಈಜು ಕಲಿಸಿ ಜಲಯೋಗ ಮಾಡುವ ಕಾರ್ಯಕ್ರಮವನ್ನು ಪ್ರಚುರಪಡಿಸುತ್ತಿದೆ. ಭೀಮನಕೋಣೆ, ನೀಚಡಿ ಮೊದಲಾದೆಡೆಯೂ ನಾವು ತರಬೇತಿ ನೀಡುತ್ತಿದ್ದೇವೆ. ನಮ್ಮ ಸಂಘಟನೆ ಇಂತಹ ಶಿಬಿರಗಳನ್ನು ನಡೆಸಿ ಯುವಜನರಲ್ಲಿ ಜಲಯೋಗದ ಬಗ್ಗೆ ಅರಿವು ಮೂಡಿಸುತ್ತಿದೆ ಎಂದು ಹರೀಶ್‌ ನವಾಥೆ ತಿಳಿಸುತ್ತಾರೆ.
ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ಈ ಕಾರ್ಯಕ್ರಮದ ಆಯೋಜನೆಗೆ ಸಾಥ್‌ ನೀಡಿದ್ದ ಹಕ್ಕಲಳ್ಳಿ ಹೆರಿಟೇಜ್‌
ಹೋಮ್‌ ಮುಖ್ಯಸ್ಥ ಎಂ.ಸಿ. ಗಂಗಾಧರ ಗೌಡ, ಶರಾವತಿ ಹಿನ್ನೀರು ಒಂದು ಸುಂದರ ಪ್ರವಾಸಿ ತಾಣ. ಇಲ್ಲಿಯ ನಡುಗಡ್ಡೆಗಳು ಜನರನ್ನು ಆಕರ್ಷಿಸುತ್ತವೆ.
ಪ್ರವಾಸೋದ್ಯಮವನ್ನು ಪರಿಸರಕ್ಕೆ ಪೂರಕವಾಗಿ ನಡೆಸಬೇಕಾಗಿದೆ. ಶರಾವತಿ ಹಿನ್ನೀರಿನಲ್ಲಿ ಈಜುವುದು ಸುಲಭದ ಮಾತಲ್ಲ. ಆಳ ಅಗಲ ಗೊತ್ತಿದ್ದವರೆ ಇಲ್ಲಿ ಈಜಲು ಭಯ ಪಡುತ್ತಾರೆ. ಅಂತಹುದರಲ್ಲಿ ಹಸುಳೆ ಇಂತಹ ಸಾಧನೆ ಮಾಡಿರುವುದು ಭವಿಷ್ಯದಲ್ಲಿ ಒಳ್ಳೆಯ ದಿನಗಳು ಆಕೆಗೆ ಬರಲಿವೆ ಎಂದರು.
Advertisement

Udayavani is now on Telegram. Click here to join our channel and stay updated with the latest news.

Next