ನೀರ್ಚಾಲು: ಶಿಕ್ಷಣದ ವ್ಯಾಪ್ತಿ ವಿಶಾಲವಾದುದಾಗಿದ್ದು, ಪಠ್ಯಗಳ ಜತೆಗೆ ಭಾರತೀಯ ಪರಂಪರೆ, ಕಲೆಗಳ ಬಗ್ಗೆ ಸ್ಥೂಲವಾದ ಅರಿವು ಸಂಪಾದಿಸುವುದು ಬದುಕಿನ ಸುಲಲಿತತೆಗೆ ಪೂರಕವಾಗಿರುತ್ತದೆ. ಈ ನಿಟ್ಟಿನಲ್ಲಿ ಬಹುಮುಖೀ ಆಯಾಮಗಳಲ್ಲಿ ಗಡಿನಾಡಿನಲ್ಲಿ ತನ್ನದೇ ಕೊಡುಗೆಗಳ ಮೂಲಕ ಮುಂಚೂಣಿಯಲ್ಲಿರುವ ರಂಗಚಿನ್ನಾರಿ ಕಾಸರಗೋಡು ಪ್ರಸ್ತುತ ಹಮ್ಮಿಕೊಂಡಿರುವ ಶಿಕ್ಷಣಕ್ಕಾಗಿ ನೃತ್ಯ ತಕಜಣುತಾ ಸ್ತುತ್ಯರ್ಹ ಕಾರ್ಯಯೋಜನೆಯಾಗಿದೆ ಎಂದು ಹಿರಿಯ ಸಾಹಿತಿ, ನಿವೃತ್ತ ಶಿಕ್ಷಕ, ಚಿತ್ರ ಕಲಾವಿದ ಬಾಲ ಮಧುರಕಾನನ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಸರಗೋಡಿನ ಸಾಂಸ್ಕೃತಿಕ, ಸಾಮಾ ಜಿಕ ಸಂಸ್ಥೆಯಾದ ರಂಗಚಿನ್ನಾರಿಯು ಹಮ್ಮಿಕೊಂಡಿರುವ ಸರಣಿ ಕಾರ್ಯಕ್ರಮದ 9ನೇ ಪ್ರಾತ್ಯಕ್ಷಿಕೆಯನ್ನು ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ದೀಪ ಬೆಳಗಿಸಿ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿ ದಿಶೆಯಲ್ಲಿ ಎಲ್ಲ ಉತ್ತಮ ವಿಚಾರಗಳನ್ನು ಕಲಿತುಕೊಳ್ಳುವುದರಿಂದ ಜ್ಞಾನ ವಿಸ್ತರಿಸುತ್ತದೆ. ಭರತನಾಟ್ಯದಂತಹ ಶಾಸ್ತ್ರೀಯ ನೃತ್ಯ ಪ್ರಕಾರಗಳ ಆಸಕ್ತಿಯು ವ್ಯಕ್ತಿಯ ಜೀವನದ ಭಾಗವಾದಾಗ ಬದುಕು ಸುಂದರವಾಗುತ್ತದೆ. ನೃತ್ಯದ ವಿವಿಧ ಮುದ್ರೆ, ಆಸನ, ಅಭಿನಯಗಳೇ ಮೊದಲಾದ ಅಂಗ ಗಳು ದೇಹ, ಮನಸ್ಸುಗಳ ಸುಸ್ಥಿರತೆಗೆ ಪೂರಕ ವಾಗಿದ್ದು, ವಿದ್ಯಾರ್ಥಿಗಳ ನೆನಪು ಶಕ್ತಿ, ಏಕಾಗ್ರತೆಗೆ ನೃತ್ಯಗಳ ಅಭ್ಯಾಸ ಮಹತ್ತರ ವಾದ ಶಕ್ತಿ ನೀಡುತ್ತದೆ ಎಂದು ತಿಳಿಸಿದರು.
ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾಸರಗೋಡಿನ ಕನ್ನಡ ಭಾಷಾ ಅಸ್ಮಿತೆ, ರಂಗ ಶಿಕ್ಷಣ ಸಹಿತ ವಿವಿಧ ಆಯಾಮಗಳಲ್ಲಿ ರಂಗಚಿನ್ನಾರಿಯು ದಶಕಗಳಿಂದ ಆಯೋಜಿಸುತ್ತಿರುವ ಕಾರ್ಯ ಚಟುವಟಿಕೆಗಳು ಅಪೂರ್ವವಾದವುಗಳು ಎಂದು ತಿಳಿಸಿದರು. ಜನಸಾಮಾನ್ಯರಿಗೆ ನೃತ್ಯಗಳ ಬಗೆಗಿನ ಅರ್ಥೈಸುವಿಕೆಗೆ ಪೂರಕವಾದ ಪೂರ್ವ ಪ್ರಾತ್ಯಕ್ಷಿಕೆ ಪ್ರಸ್ತುತ ಸಾಕಾರವಾಗುತ್ತಿರುವುದು ಹೆಮ್ಮೆ ಮೂಡಿಸಿದೆ ಎಂದು ಶ್ಲಾಘಿಸಿದರು.
ರಂಗಚಿನ್ನಾರಿಯ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ತಕಜಣುತಾ ನೃತ್ಯ ಪ್ರಾತ್ಯಕ್ಷಿಕೆ ಯೋಜನೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಶಾಲಾ ಹಿರಿಯ ಶಿಕ್ಷಕಿ ವಿನೋದಿನಿ, ರಂಗಚಿನ್ನಾರಿ ನಿರ್ದೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ, ನೃತ್ಯ ಪ್ರಾತ್ಯಕ್ಷಿಕೆ ನೀಡುವ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಹಾಗೂ ಭವ್ಯಾ ಪುತ್ತಿಗೆ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿನಿ ಹರ್ಷಿತಾ ಸ್ವಾಗತಿಸಿ, ವಂದಿಸಿದಳು. ಶಿಕ್ಷಕಿ ವಾಣಿ ಪಿ.ಎಸ್. ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಹಾಗೂ ಭವ್ಯಾ ಪುತ್ತಿಗೆ ಅವರಿಂದ ಭರತನಾಟ್ಯದ ಆಂಗಿಕಾಭಿನಯ, ಹೆಜ್ಜೆಗಾರಿಕೆಗಳ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು. ಪುರುಷೋತ್ತಮ ಕೊಪ್ಪಲ್ ಸಹಕರಿಸಿದರು.