Advertisement
ಬೆಳ್ತಂಗಡಿ ತಹಶೀಲ್ದಾರ್ ಸುರೇಶ್ ಕುಮಾರ್ ನೇತೃತ್ವದಲ್ಲಿ ಜಾಗದ ಸರ್ವೇ ಕಾರ್ಯ ನಡೆಸಲಾಗಿದ್ದು, ಸರ್ವೇಯಲ್ಲಿ ಈ ಹಿಂದೆ ಆರೋಪಿ ಬೆಂಕಿ ನೀಡಿದ್ದ ಕೊರಗಜ್ಜನ ಕಟ್ಟೆ ಇರುವ ಸ್ಥಳ ಸರಕಾರಕ್ಕೆ ಸೇರಿದ್ದು ಎಂದು ತಿಳಿದು ಬಂದಿದೆ. ಆದರೆ ಪ್ರಸ್ತುತ ಕೊರಗಜ್ಜನ ಹೊಸ ಕಟ್ಟೆಯನ್ನು ಮಾಡಲು ಹೊರಟಿರುವ ಸ್ಥಳ ಕುಟುಂಬಸ್ಥರ ವರ್ಗ ಜಮೀನಿನಲ್ಲಿರುವ ಬಗ್ಗೆ ಸರ್ವೇ ವೇಳೆ ತಿಳಿದು ಬಂದಿದೆ.
ಶ್ರೀ ಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್ , ಕೊರಗಕಲ್ಲು, ಬಾಡಾರು ಈ ಹೆಸರಿನಲ್ಲಿ ಸಾರ್ವಜನಿಕ ಸ್ಥಳದಲ್ಲಿದ್ದ ಕೊರಗಜ್ಜನ ಕಟ್ಟೆಯನ್ನು ಊರಮಂದಿ ಆರಾಧಿಸುತ್ತಾ ಬರುತ್ತಿದ್ದರು. ಆದರೆ ಈ ಸ್ಥಳದಲ್ಲಿದ್ದ ಕೊರಗಜ್ಜನ ಕಟ್ಟೆ ಒಂದು ಕುಟುಂಬವರ್ಗಕ್ಕೆ ಸೇರಿದ್ದು ಎಂಬ ಹಿನ್ನೆಲೆಯಲ್ಲಿ ವಿವಾದವೆದ್ದು ಕುಟುಂಬಸ್ಥರ ಸ್ಥಳದಲ್ಲಿ ಸ್ಥಳ ಸಾನಿಧ್ಯ ಪ್ರಶ್ನೆಯನ್ನು ಇಡಲಾಗಿತ್ತು. ಪ್ರಶ್ನೆಯಲ್ಲಿ ಕಂಡುಬಂದಂತೆ ಇದು ಕುಟುಂಬಕ್ಕೆ ಸೇರಿದ ಕೊರಗಜ್ಜನ ಸಾನಿಧ್ಯ ಎಂಬ ಹಿನ್ನೆಲೆಯಲ್ಲಿ ಕಟ್ಟೆಯನ್ನು ಕುಟುಂಬಸ್ಥರ ಜಾಗದಲ್ಲಿ ನಿರ್ಮಾಣ ಮಾಡುವ ಉದ್ದೇಶದಿಂದ ಕೆಸರು ಕಲ್ಲು ಹಾಕಲಾಗಿದೆ. ಆ ಬಳಿಕ ಸಾರ್ವಜನಿಕ ಸ್ಥಳದಲ್ಲಿ ಇದ್ದ ಕಟ್ಟೆಗೆ ಬೆಂಕಿ ಕೊಡುವ ಘಟನೆ ನಡೆದಿದ್ದು ಪ್ರಕರಣ ಪೋಲೀಸ್ ಮೆಟ್ಟಿಲೇರಿತ್ತು. ದೀಪ ಇಡುವಂತಿಲ್ಲ
ಈಗ ಜಮೀನಿನ ಸರ್ವೇ ಕಾರ್ಯ ನಡೆದಿದ್ದು, ವಿವಾದಿತ ಕೊರಗಜ್ಜನ ಕಟ್ಟೆ ಸರಕಾರಿ ಜಾಗದಲ್ಲಿರುವುದು ಕಂಡುಬಂದಿದ್ದು, ಕೆಸರು ಕಲ್ಲು ಹಾಕಿರುವ ಕೊರಗಜ್ಜ ಸಾನಿಧ್ಯ ಕುಟುಂಬದ ವರ್ಗ ಜಮೀನಿನಲ್ಲಿ ಇದೆ ಎಂದು ತಿಳಿದುಬಂದಿದೆ. ಪ್ರಸ್ತುತ ಸರಕಾರಿ ಜಾಗದಲ್ಲಿರುವ ಗುಡಿಗೆ ತಾತ್ಕಾಲಿಕವಾಗಿ ಸರಕಾರದ ವತಿಯಿಂದಲೇ ಚಪ್ಪರ ಹಾಕಿಕೊಡಲಾಗುವುದು. ಡಿಸೆಂಬರ್‌ವರೆಗೆ ಯಾವುದೇ ಜೀರ್ಣೋದ್ಧಾರ ಕಾರ್ಯ ಮಾಡುವಂತಿಲ್ಲ. ಸಾರ್ವಜನಿಕ ಟ್ರಸ್ಟ್ ಹಾಗೂ ರಾಜೇಶ್ ಕುಟುಂಬದ ನಡುವೆ ಭಿನ್ನಾಭಿಪ್ರಾಯ ಇದ್ದುದರಿಂದ ಒಂದು ತಿಂಗಳ ಮಟ್ಟಿಗೆ ಕಟ್ಟೆಯಲ್ಲಿ ಯಾರೂ ದೀಪ ಉರಿಸುವಂತಿಲ್ಲ. ಇಚ್ಚೆಯಿದ್ದವರು ದೈವದ ಗುಡಿಗೆ ಕೈ ಮುಗಿದು ಹೋಗಬಹುದು. ಈ ಪ್ರದೇಶದಲ್ಲಿ ಜಾರಿ ಮಾಡಿದ್ದ 144 ಸೆಕ್ಷನ್ ನಿಷೇಧಾಜ್ಞೆ ಹಿಂಪಡೆಯಲಾಗಿದೆ. ಮುಜರಾಯಿ ಇಲಾಖೆಯ ಒಪ್ಪಿಗೆ ಪಡೆದು ಮುಂದಿನ ಕಾರ್ಯ ಮಾಡುವಂತೆ ಬೆಳ್ತಂಗಡಿ ತಹಶಿಲ್ದಾರ್ ಸುರೇಶ್ ಕುಮಾರ್ ಟಿ. ಎರಡೂ ಕಡೆಯವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
Related Articles
Advertisement