ಮಹಾನಗರ, ಅ. 11: ಮಂಗಳೂರು ನಗರದಲ್ಲಿ ಸಂಚಾರ ಸಂಬಂಧಿತ ಸಮಸ್ಯೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ನೋ ಪಾರ್ಕಿಂಗ್ ವಲಯಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಇದೀಗ ಪಾರ್ಕಿಂಗ್ ವಲಯಗಳನ್ನು ಗುರುತಿಸುವ ಬಗ್ಗೆ ಟ್ರಾಫಿಕ್ ಪೊಲೀಸ್ ವತಿಯಿಂದ ಸರ್ವೇ ಕಾರ್ಯ ಆರಂಭವಾಗಿದೆ.
ಟ್ರಾಫಿಕ್ ಪೊಲೀಸರು ನಗರದ ವಿವಿಧ ಪ್ರಮುಖ ರಸ್ತೆಗಳು, ಈ ರಸ್ತೆಗಳಿಗೆ ಹೊಂದಿಕೊಂಡು ವಾಹನ ನಿಲುಗಡೆಗೆ ಲಭ್ಯವಿರುವ ಖಾಲಿ ಸ್ಥಳಗಳನ್ನು ಗುರುತಿಸಿ ಪಟ್ಟಿ ಮಾಡುತ್ತಿದ್ದು, 2- 3 ದಿನಗಳಲ್ಲಿ ಈ ಬಗ್ಗೆ ವರದಿಯನ್ನು ಮಂಗಳೂರು ಮಹಾನಗರ ಪಾಲಿಕೆಗೆ ಸಲ್ಲಿಸುವ ನಿರೀಕ್ಷೆ ಇದೆ.
ಈಗಿರುವ ಅಧಿಕೃತ ಪಾರ್ಕಿಂಗ್ ಸ್ಥಳ : ನಗರದಲ್ಲಿ ಪ್ರಸ್ತುತ ವಾಹನಗಳ ನಿಲುಗಡೆಗಾಗಿ ಇರುವ ಅಧಿಕೃತ ಪಾರ್ಕಿಂಗ್ ಸ್ಥಳಗಳು ಕೇವಲ 8 ಮಾತ್ರ. ಅವು ಕೆಲವು ವರ್ಷಗಳ ಹಿಂದೆ ಗುರುತಿಸಿದ ತಾಣಗಳು. ಫುಟ್‌ಬಾಲ್ ಮೈದಾನ್ ಬಳಿ (ಲೇಡಿಗೋಶನ್ ಆಸ್ಪತ್ರೆ ಎದುರು), ಹ್ಯಾಮಿಲ್ಟನ್ ವೃತ್ತದ ಬಳಿ, ಹಂಪನಕಟ್ಟೆ ಹಳೆ ಬಸ್ ನಿಲ್ದಾಣ, ಜ್ಯೋತಿ ಜಂಕ್ಷನ್- ಬಲ್ಮಠ ರಸ್ತೆಯ ಎರಡೂ ಬದಿ, ಲಾಲ್‌ಬಾಗ್‌ನ ಪಬಾrಸ್ ಎದುರು, ಕರಾವಳಿ ಉತ್ಸವ ಮೈದಾನ್ ಎದುರು, ಮಂಗಳಾ ಕ್ರೀಡಾಂಗಣದ ಎಡಬದಿ, ಕಾರ್‌ಸ್ಟ್ರೀಟ್‌ನಿಂದ ನ್ಯೂಚಿತ್ರಾ ಜಂಕ್ಷನ್ ವರೆಗಿನ ರಸ್ತೆಯ ಒಂದು ಬದಿ (ಪರ್ಯಾಯವಾಗಿ ಒಂದೊಂದು ದಿನ ಒಂದೊಂದು ಬದಿ)- ಇವು ಈಗಿರುವ ಪಾರ್ಕಿಂಗ್ ಜಾಗಗಳು.
ಈ 8 ಸ್ಥಳಗಳ ಹೊರತಾಗಿ ನಗರದ ವಿವಿಧ ರಸ್ತೆಗಳ ಬದಿ, ಅದಕ್ಕೆ ಹೊಂದಿಕೊಂಡಂತೆ ಇರುವ ಖಾಲಿ ಜಾಗಗಳನ್ನು ಪಾರ್ಕಿಂಗ್‌ಗಾಗಿ ಕಾದಿರಿಸಿದ್ದು, ಈಗ ಅತಿಕ್ರಮಣ ಆಗಿರುವ ತಾಣಗಳನ್ನು ಪೊಲೀಸರು ಗುರುತಿಸಿ ಪಟ್ಟಿ ಮಾಡುತ್ತಿದ್ದಾರೆ. ಈಗಾಗಲೇ ಸರ್ವೇ ಮಾಡಿ ಸುಮಾರು 50 ಕಡೆ ಪಾರ್ಕಿಂಗ್ ತಾಣಗಳನ್ನು ಗುರುತಿಸಿದ್ದಾರೆ.
ನೋ ಪಾರ್ಕಿಂಗ್‌ಗೆ ಸಂಬಂಧಿಸಿ 61 ವಲಯಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಅವರು ಈ ಬಗ್ಗೆ ವಾರದ ಹಿಂದೆ ಆದೇಶವನ್ನು ಹೊರಡಿಸಿದ್ದಾರೆ. ಅದೇ ರೀತಿ ಈಗ ಪಾರ್ಕಿಂಗ್ ವಲಯಗಳ ಬಗ್ಗೆ ಕೂಡ ಆದೇಶ ಹೊರಡಿಸಲು ನಿರ್ಧರಿಸಿದ ಆಯುಕ್ತರು ಈ ಬಗ್ಗೆ ಸರ್ವೇ ನಡೆಸಿ ಪಾಲಿಕೆಗೆ ಸಲ್ಲಿಸುವಂತೆ ಟ್ರಾಫಿಕ್ ಪೊಲೀಸರಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಸರ್ವೇ ನಡೆಸಲಾಗುತ್ತಿದೆ.
ಅತಿಕ್ರಮಣ ತೆರವು ಅಗತ್ಯ : ಈ ಹಿಂದೆ ವಾಹನ ಪಾರ್ಕಿಂಗ್‌ಗಾಗಿ ಕಾದಿರಿಸಿದ ಕೆಲವು ತಾಣಗಳನ್ನು ಈಗ ಅತಿಕ್ರಮಿಸಿ ಅದನ್ನು ಬೇರೆ ಉದ್ದೇಶಕ್ಕೆ ಬಳಸಲಾಗಿದೆ. ಅದನ್ನು ತೆರವು ಮಾಡಬೇಕಾಗಿದೆ. ಇನ್ನೂ ಕೆಲವು ಕಡೆ ದುರಸ್ತಿಪಡಿಸಿ ವಾಹನ ಪಾರ್ಕಿಂಗ್‌ಗೆ
ಯೋಗ್ಯವನ್ನಾಗಿ ಮಾಡಬೇಕಾಗಿದೆ. ಈ ಬಗ್ಗೆ ಸೂಕ್ತ ವರದಿಯನ್ನು ಪಾಲಿಕೆಗೆ ನೀಡಲಾಗುವುದು ಎಂದು ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಉದಯವಾಣಿಗೆ ತಿಳಿಸಿದ್ದಾರೆ.
ನಗರದಲ್ಲಿ ವಾಹನ ಸಂಚಾರ ದಟ್ಟಣೆ ಕಡಿಮೆ ಮಾಡಲು ಹಾಗೂ ವಾಹನಗಳ ನಿಲುಗಡೆಗೆ ಸರಿ ಯಾದ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಪಾರ್ಕಿಂಗ್ ತಾಣಗಳನ್ನು ಗುರುತಿಸಿ ಅಧಿಕೃತಗೊಳಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಸರ್ವೇ ಕಾರ್ಯ ಈಗಾಗಲೇ ಆರಂಭ ವಾಗಿದ್ದು, ಪ್ರಗತಿಯಲ್ಲಿದೆ. ಮುಂದಿನ 2- 3 ದಿನ ಗಳಲ್ಲಿ ಪೂರ್ತಿಗೊಂಡು ಬಳಿಕ ಪಾಲಿಕೆಗೆ ವರದಿ ಸಲ್ಲಿಸಲಾಗುವುದು.
-ವಿನಯ್ ಎ. ಗಾಂವ್‌ಕರ್, ಡಿಸಿಪಿ(ಟ್ರಾಫಿಕ್)
ಈ ಹಿಂದೆ ವಾಹನ ಪಾರ್ಕಿಂಗ್‌ಗಾಗಿ ಕಾದಿರಿಸಿದ್ದ ತಾಣಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವುದು ಕಂಡು ಬಂದಿದ್ದು, ಅದನ್ನು ತೆರವು ಮಾಡಿಸಬೇಕಿದೆ. ಹಾಗೆಯೇ ಇನ್ನೂ ಕೆಲವು ಕಡೆ ಜಾಗ ಖಾಲಿ ಇದ್ದರೂ ಅದನ್ನು ದುರಸ್ತಿ ಪಡಿಸಿ ಪಾರ್ಕಿಂಗ್‌ಗೆ ವ್ಯವಸ್ಥೆಗೊಳಿಸಬೇಕಿದೆ. ಈ ಬಗ್ಗೆ ಪಾಲಿಕೆಗೆ ಬರೆಯ ಲಾಗುವುದು. ಪಾರ್ಕಿಂಗ್‌ಗೆ ಕಾದಿರಿಸಿದ ಜಾಗದ ಬಗ್ಗೆ ಪಾಲಿಕೆಯ ಬಳಿ ಮಾಹಿತಿ ಇದ್ದು, ಇದೀಗ ಟ್ರಾಫಿಕ್ ಪೊಲೀಸರು ನೀಡುವ ವರದಿಯನ್ನು ಪರಿಶೀಲಿಸಿ ಪಾಲಿಕೆಯು ಸೂಕ್ತ ನಿರ್ಧಾರಕ್ಕೆ ಬಂದು ಅಧಿಕೃತ ಪಾರ್ಕಿಂಗ್ ವಲಯಗಳನ್ನು ಪ್ರಕಟಿಸಬೇಕಿದೆ. ಅತಿಕ್ರಮಣ ಆಗಿದ್ದರೆ ಕಾನೂನು ರೀತಿ ತೆರವು ಮಾಡಿ ಪಾರ್ಕಿಂಗ್‌ಗೆ ನೀಡಬೇಕು.
-ನಟರಾಜ್ ಎಂ.ಎ., ಎಸಿಪಿ (ಟ್ರಾಫಿಕ್)