ಬೆಂಗಳೂರು: ರಾಜ್ಯವನ್ನು ಅದರಲ್ಲೂ ವಿಶೇಷವಾಗಿ ಬೆಳೆಯುತ್ತಿರುವ ಮಕ್ಕಳನ್ನು ಶಾಪವಾಗಿ ಕಾಡುತ್ತಿರುವ ಅಪೌಷ್ಟಿಕ ಸಮಸ್ಯೆಯನ್ನು ಬುಡಸಮೇತ ಕಿತ್ತು ಹಾಕಲು ಸರ್ಕಾರ ಮುಂದಾಗಿದೆ. ಅದಕ್ಕಾಗಿ ಅಪೌಷ್ಟಿಕತೆಗೆ ಮುಖ್ಯ ಕಾರಣಗಳೇನು ಎಂಬುದನ್ನು ಪತ್ತೆ ಹಚ್ಚಲು ರಾಷ್ಟ್ರೀಯ ಆರೋಗ್ಯ ಸಮೀಕ್ಷೆ ಮಾದರಿಯಲ್ಲಿ “ರಾಜ್ಯ ಮಟ್ಟದ ಪೌಷ್ಟಿಕತಾ ಸಮೀಕ್ಷೆ’ ಕೈಗೊಳ್ಳಲು ಯೋಜನೆ ಹಾಕಿಕೊಂಡಿದೆ.
ಈ ಸಮೀಕ್ಷೆ ನಡೆದರೆ ರಾಜ್ಯದಲ್ಲಿ ಅಪೌಷ್ಟಿಕತೆಗೆ ಪ್ರಮುಖ ಕಾರಣಗಳೇನು, ಇದರಲ್ಲಿ ಭೌಗೋಳಿಕತೆ, ಆರೋಗ್ಯ, ಅನುವಂಶೀಯತೆಯ ಪಾತ್ರ ಎಷ್ಟಿದೆ, ಯಾವ ಜಿಲ್ಲೆ, ಯಾವ ತಾಲೂಕುಗಳಲ್ಲಿ ಅಪೌಷ್ಟಿಕತೆ ಸಮಸ್ಯೆ ಹೇಗಿದೆ ಎಂಬ ಬಗ್ಗೆ ಇಡೀ ರಾಜ್ಯದ ಸ್ಪಷ್ಟ ಚಿತ್ರಣ ಸಿಗಲಿದೆ. ಅದರ ಆಧಾರದಲ್ಲಿ ಅಪೌಷ್ಟಿಕತೆ ನಿವಾ ರಣೆಗೆ ಸಮಗ್ರ ಯೋಜನೆ ರೂಪಿಸಲು ಸಾಧ್ಯವಾಗಲಿದೆ. ರಾಷ್ಟ್ರೀಯ ಸಮೀಕ್ಷೆ ಮಾದರಿಯಲ್ಲಿ ರಾಜ್ಯ ಮಟ್ಟದ ಪೌಷ್ಟಿಕತಾ ಸಮೀಕ್ಷೆ ನಡೆಸುವ ಬಗ್ಗೆ 2022-23ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಅದರಂತೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯೋನ್ಮುಖವಾಗಿದ್ದು, ಪೌಷ್ಟಿಕತಾ ಸಮೀಕ್ಷೆ ಬಗ್ಗೆ ಪ್ರಾಥಮಿಕ ಹಂತದ ಸಭೆ, ಸಮಾಲೋಚನೆಗಳನ್ನು ಆರಂಭಿಸಿದೆ. ಸಮೀಕ್ಷೆ ಕುರಿತು ಪರಿಕಲ್ಪನಾ ಕರಡು ಸಿದ್ಧವಾಗಿದ್ದು, ರಾಷ್ಟ್ರಮಟ್ಟದ ಸಮೀಕ್ಷಾ ಸಂಸ್ಥೆಗಳಿಗೆ ಈ ಕರಡು ಸಲ್ಲಿಸಿ ಅಭಿಪ್ರಾಯ ಪಡೆದುಕೊಳ್ಳಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಮೀಕ್ಷೆ ಹೇಗೆ?: ರಾಷ್ಟ್ರೀಯ ಆರೋಗ್ಯ ಸಮೀಕ್ಷೆ ಯಲ್ಲಿ ಮಾಹಿತಿ ಸಂಗ್ರಹಿಸುವ ಮಾದರಿಗಳ (ಸ್ಯಾಂಪಲ್) ಪ್ರಮಾಣ ತುಂಬಾ ಕಡಿಮೆ ಆಗಿರುತ್ತದೆ. ನಮ್ಮ ರಾಜ್ಯದ ರಾಷ್ಟ್ರೀಯ ಆರೋಗ್ಯ ಸಮೀಕ್ಷೆಯ ಮಾದರಿ ಗಳ ಪ್ರಮಾಣ ಅಂದಾಜು 26 ಸಾವಿರವಷ್ಟೇ ಆಗಿ ರು ತ್ತದೆ. ಇದರಿಂದ ಇಡೀ ರಾಜ್ಯದ ನಿಖರ ಮಾಹಿತಿ ಸಿಗುವುದು ಕಷ್ಟ. ಹಾಗಾಗಿ, ರಾಷ್ಟ್ರೀಯ ಆರೋಗ್ಯ ಸಮೀಕ್ಷೆಯ ಮಾದರಿ ಮತ್ತು ಮಾನದಂಡ ಗಳನ್ನು ಮುಂದಿಟ್ಟುಕೊಂಡು ರಾಜ್ಯ ಮಟ್ಟದ ಪೌಷ್ಟಿಕತಾ ಸಮೀಕ್ಷೆಗೆ ಕ್ರಿಯಾ ಯೋಜನೆ ರೂಪಿಸಲಾಗುವುದು. ಎಲ್ಲಾ 31 ಜಿಲ್ಲೆಗಳಲ್ಲೂ ಆಯಾ ಜಿಲ್ಲೆಗಳು, ತಾಲೂಕುಗಳಲ್ಲಿ ಅಲ್ಲಿನ ಪರಿಸ್ಥಿತಿಗಳಿಗೆ ತಕ್ಕಂತೆ ಪ್ರತ್ಯೇಕ ವಿಧಾನ ಮತ್ತು ಮಾನದಂಡ ಅನುಸರಿಸಲಾಗುವುದು. ಈ ರೀತಿ ಸಮೀಕ್ಷೆ ನಡೆಸಿದರೆ ಪ್ರತಿ ಜಿಲ್ಲೆ ಮತ್ತು ಪ್ರತಿ ತಾಲೂಕಿನ ವಸ್ತುನಿಷ್ಠ ಮಾಹಿತಿ ಸಿಗುತ್ತದೆ. ಈ ಸಮೀಕ್ಷೆಯಿಂದ ಅಪೌಷ್ಟಿಕತೆ ನಿವಾರಣೆಗೆ ಪರಿಣಾಮಕಾರಿ ಯೋಜನೆಗಳನ್ನು ರೂಪಿಸಲು ಅನುಕೂಲವಾಗಲಿದೆ. ಜೊತೆಗೆ ಸಮೀಕ್ಷೆಯ ಅಂಕಿ-ಅಂಶಗಳಿಂದ ಆರೋಗ್ಯ, ಶಿಕ್ಷಣ ಸೇರಿ ಸರ್ಕಾರದ ವಿವಿಧ ಇಲಾಖೆಗಳಿಗೆ ಸಹಾಯವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿ ಅಧಿಕಾರಿಗಳು ವಿವರಿಸುತ್ತಾರೆ.
ಅಪೌಷ್ಟಿಕತೆ ನಿವಾರಣೆಗೆ ಸಂಕಲ್ಪ : ವಿವಿಧ ಅಭಿವೃದ್ಧಿ ಸೂಚ್ಯಂಕಗಳಲ್ಲಿ ರಾಜ್ಯ ಸರಾಸರಿಗಿಂತ ಕಡಿಮೆ ಸಾಧನೆ ಮಾಡುತ್ತಿರುವ ತಾಲೂಕುಗಳನ್ನು “ಅಭಿವೃದ್ಧಿ ಆಕಾಂಕ್ಷಿ ತಾಲೂಕು’ಗಳೆಂದು ಗುರುತಿಸಿ ಸರ್ಕಾರ ಈ ತಾಲೂಕುಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಅಪೌಷ್ಟಿಕತೆ ನಿವಾರಣೆ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ಮೂಲಕ ರಾಜ್ಯದಲ್ಲಿ ಅಪೌಷ್ಟಿಕತೆ ಕಡಿಮೆ ಮಾಡಲು ಸರ್ಕಾರ ದೃಢಸಂಕಲ್ಪ ಇಟ್ಟುಕೊಂಡಿದೆ. ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಸಮೀಕ್ಷೆಯಲ್ಲಿ ಅಪೌಷ್ಟಿಕತೆ ಸೂಚಕಗಳು ಕಡಿಮೆಯಾಗಿರುವುದರೊಂದಿಗೆ ಅಪೌಷ್ಟಿಕತೆ ನಿವಾರಣೆಯಲ್ಲಿ ಕರ್ನಾಟಕ ಸ್ಥಿರವಾದ ಪ್ರಗತಿ ಸಾಧಿಸಿದೆ. ಸರ್ಕಾರದ ಮಾತೃಪೂರ್ಣ, ಕ್ಷೀರಭಾಗ್ಯ ಮುಂತಾದ ಯೋಜನೆಗಳ ಅನುಷ್ಠಾನ ಉತ್ತಮ ಫಲಿತಾಂಶ ನೀಡುತ್ತಿದೆ. ಪೌಷ್ಟಿಕ ಕರ್ನಾಟಕ ಎಂಬ ಹೊಸ ಯೋಜನೆ ಜಾರಿಗೆ ತರಲಾಗಿದೆ. ಈಗ ರಾಜ್ಯ ಮಟ್ಟದ ಪೌಷ್ಟಿಕತಾ ಸಮೀಕ್ಷೆ ಕೈಗೊಳ್ಳಲು ನಿರ್ಧರಿಸಲಾಗಿದೆ.
–ರಫೀಕ್ ಅಹ್ಮದ್