ಹನೂರು: ತಾಳಬೆಟ್ಟದಿಂದ ಮಹದೇಶ್ವರಬೆಟ್ಟದವರೆಗೆ 11 ಕಿ.ಮೀ ಮೆಟ್ಟಿಲುಗಳ ನಿರ್ಮಾಣ ಕಾರ್ಯಕ್ಕೆ ಸರ್ವೆ ನಡೆಸಿ ಸಮಗ್ರ ಯೋಜನಾ ವರದಿ ತಯಾರಿಸಲು 10 ಲಕ್ಷ ರೂ.ವೆಚ್ಚದಲ್ಲಿ ಟೆಂಡರ್ ಕರೆಯಲಾಗುತ್ತಿದೆ ಎಂದು ಹಿಂದುಳಿದ ವರ್ಗಗಳ ಸಚಿವ ಪುಟ್ಟರಂಗಶೆಟ್ಟಿ ತಿಳಿಸಿದರು.
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ ಹಿನ್ನೆಲೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಬೆಟ್ಟದಲ್ಲಿ ತಿರುಪತಿ ಮಾದರಿ ಮೆಟ್ಟಿಲು ನಿರ್ಮಿಸಲು ನಡೆಸಲಾಗುವ ಸರ್ವೆ ಕಾರ್ಯಕ್ಕೆ ಅರಣ್ಯ ಇಲಾಖೆ ಸಹಕರಿಸಬೇಕೆಂದರು.
ಕ್ಷೇತ್ರದಲ್ಲಿ ಕೈಗೊಂಡಿರುವ ದೀಪದ ಒಡ್ಡುವಿನಲ್ಲಿ ಬೃಹತ್ ಪ್ರತಿಮೆ ನಿರ್ಮಾಣ ಕಾಮಗಾರಿ, ಒಳಚರಂಡಿ ವ್ಯವಸ್ಥೆ, ನೂತನ ಜೇನುಮಲೆ ಭವನಕ್ಕೆ ಪಿಠೊಪಕರಣ ಖರೀದಿ, ಅಂತರಗಂಗೆ ಕಾಮಗಾರಿ, ಶೌಚಾಲಯ ನಿರ್ಮಾಣ, 523 ಕೊಠಡಿಗಳ ವಸತಿ ಸಮುಚ್ಛಯ ನಿರ್ಮಾಣ, ಅತ್ಯಾಧುನಿಕ ಹೋಟೆಲ್ ನಿರ್ಮಾಣ ಕಾಮಗಾರಿ, ನೂತನ ಡಾರ್ಮಿಟರಿ ಕಟ್ಟಡಗಳ ನಿರ್ಮಾಣ,
ಪ್ರಾಧಿಕಾರದ ವಸತಿಗೃಹಗಳ ದುರಸ್ತಿ ಮತ್ತು ನವೀಕರಣ ಕಾಮಗಾರಿ, ಪರಮಾಡುವ ಸ್ಥಳಗಳಲ್ಲಿ ಕಾಂಕ್ರೀಟ್ ನೆಲಹಾಸು ಅಳವಡಿಸುವ ಕಾಮಗಾರಿ, ದಾಸೋಹ ಭವನದ ಪುನರುಜ್ಜೀವನ ಕಾಮಗಾರಿ, ಲಾಡು ತಯಾರಿಕಾ ಅಡುಗೆ ಕೋಣೆಯ ವಿಸ್ತರಣೆ, ತಾಳಬೆಟ್ಟದಲ್ಲಿನ ಪ್ರಾಧಿಕಾರದ ಅಂಗಡಿ ಮಳಿಗೆಗಳ ಟೆಂಡರ್ ಮಾಡುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.
4 ಬಸ್ಸು ಖರೀದಿ: ಪ್ರಾಧಿಕಾರದ ಬಸ್‌ಗಳ ದುರಸ್ತಿ ಬಗ್ಗೆ ಪರಿಶೀಲಿಸಿದಾಗ ಈಗಾಗಲೇ 4 ಬಸ್‌ಗಳನ್ನು ದುರಸ್ತಿಪಡಿಸಿ ಈ ಮಾರ್ಗದಲ್ಲಿ ಬಿಡಲಾಗಿದೆ. ಇನ್ನೂ 4 ಹೊಸ ಬಸ್ ಖರೀದಿಸಬೇಕು ಎಂದು ಅಧಿಕಾರಿಗಳು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಅಶೋಕ ಲೈಲ್ಯಾಂಡ್ ಸಂಸ್ಥೆಯಿಂದ ಖರೀದಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಶಿವನ ಪ್ರತಿಮೆ: ಶಾಸಕ ನರೇಂದ್ರ ಮಾತನಾಡಿ, ಅಂತರಗಂಗೆ ಮಧ್ಯಭಾಗದಲ್ಲಿ ಬೃಹತ್ ಶಿವನ ಪ್ರತಿಮೆ ಪ್ರತಿಷ್ಠಾಪಿಸಲು ಅಮೃತಶಿಲೆ ಅಥವಾ ಕಂಚಿನ ಪ್ರತಿಮೆ ಬೇಕೇ ಎಂಬುದರ ಬಗ್ಗೆ ಕೂಡಲೇ ತೀರ್ಮಾನ ಕೈಗೊಂಡು ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು. ಜಾತ್ರೆ ಹಿನ್ನೆಲೆ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ತಾತ್ಕಾಲಿಕ ಶೌಚಾಲಯ, ಸ್ನಾನದ ವ್ಯವಸ್ಥೆ, ನೆರಳಿನ ಸೌಕರ್ಯ, ನಿರಂತರ ದಾಸೋಹ ಮತ್ತಿತರ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ತಾಕೀತು ಮಾಡಿದರು.
ದಾಸೋಹ: ಸುಳ್ವಾಡಿಯಲ್ಲಿ 17 ಮಂದಿ ಬಲಿ ಪಡೆದ ವಿಷಪ್ರಸಾದ ದುರಂತವನ್ನು ಗಮನದಲ್ಲಿಟ್ಟಿಕೊಂಡು ದಾಸೋಹ ಭವನದ ಅಡುಗೆ ಕೋಣೆ ಮತ್ತು ಪ್ರಸಾದ ವಿತರಣಾ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಮತ್ತು ಓರ್ವ ಆರೋಗ್ಯಾಧಿಕಾರಿ ನೇಮಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.