Advertisement

ಸರಕಾರಿ ಹಾಸ್ಟೆಲ್‌ ದುಃಸ್ಥಿತಿ ಸರಿಪಡಿಸದಿದ್ದರೆ ರಾಜ್ಯವ್ಯಾಪಿ ಹೋರಾಟ

11:05 AM Aug 11, 2018 | Team Udayavani |

ಮಹಾನಗರ: ರಾಜ್ಯದಲ್ಲಿ ಸರಕಾರಿ ವಿದ್ಯಾರ್ಥಿನಿಲಯಗಳ ದುಃಸ್ಥಿತಿಯನ್ನು 2 ತಿಂಗಳೊಳಗೆ ಸರಿಪಡಿಸದಿದ್ದರೆ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ರಾಜ್ಯವ್ಯಾಪಿ ಹೋರಾಟ ಹಮ್ಮಿಕೊಳ್ಳಲಿದೆ ಎಂದು ವಿಧಾನಪರಿಷತ್‌ ವಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ರಾಜ್ಯ ಬಿಜೆಪಿ ಎಸ್‌ಟಿ, ಎಸ್‌ಸಿ, ಒಬಿಸಿ ಮೋರ್ಚಾಗಳ ಕಾರ್ಯಕರ್ತರ ತಂಡ ರಾಜ್ಯದ ಎಲ್ಲ ಜಿಲ್ಲೆಗಳ ಪ್ರತಿ ಹಾಸ್ಟೆಲ್‌ಗೆ ಭೇಟಿ ನೀಡಿ ಸಮೀಕ್ಷೆ ನಡೆಸಿತ್ತು. ಹಾಸ್ಟೆಲ್‌ಗ‌ಳಲ್ಲಿ ಅನೇಕ ಲೋಪಗಳು, ಅವ್ಯವಸ್ಥೆಗಳು ಕಂಡುಬಂದಿದ್ದವು. ಬಹುತೇಕ ಹಾಸ್ಟೆಲ್‌ ಗಳಲ್ಲಿ ವಿದ್ಯಾರ್ಥಿಗಳಿಗೆ ಕುಡಿಯಲು ನೀರಿನ ಕೊರತೆ, ಉಪಯೋಗಿಸಲು ಯೋಗ್ಯವಲ್ಲದ ಶೌಚಾಲಯಗಳು, ಸ್ನಾನಗೃಹಗಳು, ಮಲಗಲು ಮಂಚ, ಹಾಸಿಗೆ, ದಿಂಬುಗಳ ಕೊರತೆ, ಓದಲು ಮೇಜು, ಕುರ್ಚಿಗಳಿಲ್ಲ, ಕಳಪೆ ಮಟ್ಟದ ಆಹಾರ, ಹಾಸ್ಟೆಲ್‌ ಕಟ್ಟಡಗಳಲ್ಲಿ ಹಂದಿಗಳಿಗೂ ಆಶ್ರಯ ಸಹಿತ ಗಂಭೀರ ಸಮಸ್ಯೆಗಳು ಕಂಡುಬಂದಿದ್ದವು. ಈ ಬಗ್ಗೆ ವರದಿಯನ್ನು ಸರಕಾರಕ್ಕೆ ನೀಡಲಾಗಿತ್ತು ಪರಿಶೀಲನೆಗೆ ಸದನ ಸಮಿತಿಯನ್ನು ರಚಿಸುವಂತೆ ಸರಕಾರವನ್ನು ಆಗ್ರಹಿಸಿದ್ದೆವು. ಹಾಸ್ಟೆಲ್‌ ಗಳ ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ಬಿಜೆಪಿ ನಿರಂತರವಾಗಿ ಆಗ್ರಹಿಸುತ್ತ ಬಂದಿದ್ದರೂ ಸರಕಾರ ಈವರೆಗೆ ಇದಕ್ಕೆ ಸ್ಪಂದಿಸಿಲ್ಲ ಎಂದರು.

ಸಮೀಕ್ಷಾ ವರದಿ
ಬಿಜೆಪಿ ಎಸ್‌ಟಿ, ಎಸ್‌ಸಿ, ಒಬಿಸಿ ಮೋರ್ಚಾಗಳ ಕಾರ್ಯಕರ್ತರ ತಂಡ 2016-17ರಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಹಾಸ್ಟೆಲ್‌ಗ‌ಳಿಗೆ ಭೇಟಿ ನೀಡಿ ನಡೆಸಿದ ಸಮೀಕ್ಷಾ ವರದಿ ಪ್ರತಿಯನ್ನು ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದರು. ಶಾಸಕ ವೇದವ್ಯಾಸ ಕಾಮತ್‌, ಬಿಜೆಪಿ ಮುಖಂಡರಾದ ನಿತಿನ್‌ ಕುಮಾರ್‌, ರವಿಶಂಕರ ಮಿಜಾರ್‌, ಜಿತೇಂದ್ರ ಕೊಟ್ಟಾರಿ, ಸಂಜಯ ಪ್ರಭು, ದಿನೇಶ್‌ ಅಮ್ಟೂರು, ಭಾಸ್ಕರಚಂದ್ರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ರಾಜೀನಾಮೆಗೆ ಒತ್ತಾಯ
ಹಾಸ್ಟೆಲ್‌ಗ‌ಳ ದುಸ್ಥಿತಿಯನ್ನು ಸರಿಪಡಿಸಿ ಇಲ್ಲವೆ ರಾಜೀನಾಮೆ ಕೊಡಿ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆಯವರನ್ನು ವಿಪಕ್ಷದ ನಾಯಕನಾಗಿ ನಾನು ಆಗ್ರಹಿಸಿದರೆ ನೀವು ನನ್ನ ರಾಜೀನಾಮೆ ಕೇಳಿದರೆ ನಾನು ನರೇಂದ್ರ ಮೋದಿಯವರ ರಾಜೀನಾಮೆ ಕೇಳುತ್ತೇನೆ ಎಂದು ಪ್ರಿಯಾಂಕ ಖರ್ಗೆ ಹೇಳುತ್ತಿದ್ದಾರೆ. ಹಾಸ್ಟೆಲ್‌ಗ‌ಳ ದುಸ್ಥಿತಿಯನ್ನು ಸರಿಪಡಿಸುವ ಬದಲು ಸಚಿವರು ಈ ರೀತಿಯ ಉತ್ತರ ನೀಡುವುದು ಎಷ್ಟು ಸರಿ ಎಂದು ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next