Advertisement

Govt ಕೇರಳದಲ್ಲಿ ಸಮೀಕ್ಷೆ; ವಿದ್ಯಾರ್ಥಿಗಳಲ್ಲಿ ರಕ್ತದೊತ್ತಡ ಹೆಚ್ಚಳ

11:47 PM Dec 08, 2023 | Team Udayavani |

ಕಾಸರಗೋಡು: ಕೇರಳದಲ್ಲಿ ಇತ್ತೀಚೆಗೆ ಅಧಿಕ ರಕ್ತದೊತ್ತಡ (ಬಿಪಿ)ದಿಂದ ಬಳಲುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದಾಗಿ ಆರೋಗ್ಯ ಇಲಾಖೆ ನಡೆಸಿದ ಸಮೀಕ್ಷೆಯೊಂದು ಹೇಳಿದೆ.

Advertisement

ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಸರಕಾರಿ ಹೈಯರ್‌ ಸೆಕೆಂಡರಿ ಶಾಲೆಗಳ ವಿದ್ಯಾರ್ಥಿಗಳ ರಕ್ತದೊತ್ತಡ ತಪಾಸಣೆ ನಡೆಸಲು ಸರಕಾರ ಮುಂದಾಗಿದೆ. ಇದರಂತೆ ಮೊದಲ ಹಂತದಲ್ಲಿ ಪ್ಲಸ್‌ ವನ್‌ ಕಲಿಯುತ್ತಿರುವ 1.75 ಲಕ್ಷ ವಿದ್ಯಾರ್ಥಿಗಳ ಬಿಪಿ ತಪಾಸಣೆ ನಡೆಸಲಾಗುವುದು.

ರಾಜ್ಯದಲ್ಲಿ ಒಟ್ಟು 820 ಸರಕಾರಿ ಹೈಯರ್‌ ಸೆಕೆಂಡರಿ ಶಾಲೆಗಳಿವೆ. “ಸಶೃದ್ಧಂ’ ಯೋಜನೆಯಡಿ ವಿದ್ಯಾರ್ಥಿ ಗಳ ತಪಾಸಣೆ ನಡೆಸಲಾಗುವುದು. ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನು ಶಾಲೆಗಳಿಗೆ ಪೂರೈಸಲಾಗುವುದು.

ಮಹಿಳಾ – ಶಿಶು ಕಲ್ಯಾಣ ಇಲಾಖೆ ಮತ್ತು ತಿರುವನಂತಪುರ ಸರಕಾರಿ ವೈದ್ಯಕೀಯ ಕಾಲೇಜನ್ನು ಕೇಂದ್ರವನ್ನಾಗಿಸಿ ಕಾರ್ಯವೆಸಗುತ್ತಿರುವ ಚೈಲ್ಡ್‌ ಡೆವಲಪ್‌ಮೆಂಟ್‌ ಸೆಂಟರ್‌ (ಸಿಜಿಸಿ) ಸಹಕಾರದೊಂದಿಗೆ ಯೋಜನೆಯನ್ನು ಜಾರಿಯಾಗಲಿದೆ.

ಏನಿದು ಸಶೃದ್ಧಂ ಯೋಜನೆ
ರಾಜ್ಯದಲ್ಲಿ ವಿದ್ಯಾರ್ಥಿಗಳ ರಕ್ತದೊತ್ತಡ (ಬಿಪಿ), ಅಮಿತ ದೇಹಭಾರ, ಎತ್ತರ ಇತ್ಯಾದಿ ಮಾಹಿತಿಗಳನ್ನು ಸಂಗ್ರಹಿಸಲು ಆರೋಗ್ಯ ಇಲಾಖೆ “ಸಶೃದ್ಧಂ’ ಹೆಸರಿನ ಯೋಜನೆಯೊಂದಿಗೆ ಸಮೀಕ್ಷೆ ನಡೆಸಲಿದೆ. 20 ನಿಮಿಷಗಳ ಅಂತರದಲ್ಲಿ ಎರಡು ಬಾರಿ ವಿದ್ಯಾರ್ಥಿಗಳ ಬಿಪಿ ತಪಾಸಣೆ ನಡೆಸಲಾಗುವುದು. ಅನಂತರ ಹೆತ್ತವರ ಅನುಮತಿ ಪಡೆದು ಅವರನ್ನು ಆನ್‌ಲೈನ್‌ ಸರ್ವೇಯಲ್ಲೂ ಪಾಲ್ಗೊಳ್ಳುವಂತೆ ಮಾಡಲಾಗುವುದು.

Advertisement

ಆಹಾರ ಸೇವನೆ ರೀತಿ, ದೈಹಿಕ ಶ್ರಮ, ಮಾನಸಿಕ ಒತ್ತಡ ಇತ್ಯಾದಿಗಳ ಬಗ್ಗೆ ಹಾಗೂ ಯಾರಾದರೂ ಮಾದಕ ವಸ್ತು ಸೇವಿಸುವವರಿದ್ದಾರೆಯೇ ಎಂಬ ಬಗ್ಗೆಯೂ ದಾಖಲಿಸಲಾಗುವುದು. ಅತೀ ಹೆಚ್ಚು ರಕ್ತದೊತ್ತಡ ಇರುವವರನ್ನು ಎನ್‌ಎಚ್‌ಎಂ ನರ್ಸ್‌ಗಳಿಂದ ಪುನಃ ತಪಾಸಣೆಗೊಳಪಡಿಸಲಾಗುವುದು. ಆರಂಭಿಕ ಹಂತದಲ್ಲೇ ಚಿಕಿತ್ಸೆ ನೀಡುವುದಲ್ಲದೆ ಆರೋಗ್ಯಪೂರ್ಣ ಜೀವನ ಶೈಲಿ ರೂಢಿಸಿಕೊಂಡು ರೋಗಮುಕ್ತ ರಾಗಿಸುವುದು ಯೋಜನೆಯ ಉದ್ದೇಶ.

ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿ ಆಯೋಜಿಸುವ ವಿವಿಧ ಶಿಬಿರಗಳಲ್ಲಿ ಭಾಗವಹಿಸುವವರ ಪೈಕಿ ಶೇ. 10ರಷ್ಟು ಮಂದಿಯಲ್ಲಿ ಅಧಿಕ ರಕ್ತದೊತ್ತಡ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ಕೋಯಿಕ್ಕೋಡ್‌ ವೈದ್ಯಕೀಯ ಕಾಲೇಜು ಶಿಶು ರೋಗ ವಿಭಾಗದ ಮುಖ್ಯಸ್ಥ ಡಾ| ಎಂ. ವಿಜಯ್‌ ಕುಮಾರ್‌ ತಿಳಿಸಿದ್ದಾರೆ. ಅಮಿತ ದೈಹಿಕ ಭಾರ ಮತ್ತು ದಢೂತಿ ದೇಹವೇ ಅಧಿಕ ರಕ್ತದೊತ್ತಡಕ್ಕೆ ಕಾರಣ. ಆದ್ದರಿಂದ ಮಕ್ಕಳು ವೈಜ್ಞಾನಿಕ ರೀತಿಯ ವ್ಯಾಯಾಮ ಮಾಡಬೇಕು. ಆರೋಗ್ಯಕರವಾದ ಆಹಾರ ಸೇವನೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ಆಶಾ ಸಮೀಕ್ಷೆ
ಆಶಾ ಕಾರ್ಯಕರ್ತೆಯರು ಮನೆಮನೆ ಭೇಟಿ ನೀಡಿ ತಯಾರಿಸಿದ ಎಲ್ಲ ವಯೋಮಾನದವರ ಸಮೀಕ್ಷೆಯಲ್ಲಿ 16,26,408 ಮಂದಿಯಲ್ಲಿ ಅಧಿಕ ರಕ್ತದೊತ್ತಡ, 13,16,080 ಮಂದಿಯಲ್ಲಿ ಮದುಮೇಹ (ಡಯಾಬಿಟಿಸ್‌), 6,17,147 ಮಂದಿಯಲ್ಲಿ ರಕ್ತದೊತ್ತಡ ಹಾಗೂ ಮಧುಮೇಹ, 1,11,931 ಮಂದಿಯಲ್ಲಿ ಕ್ಷಯ, 4,34,725 ಮಂದಿಯಲ್ಲಿ ಶ್ವಾಶಕೋಶ ಸಂಬಂಧಿತ ರೋಗ ಹಾಗೂ 1,06,603 ಮಂದಿ ವಿವಿಧ ರೋಗದಿಂದ ಶಯ್ನಾವಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next