Advertisement
ಬುಧವಾರ ವಿಕಾಸಸೌಧದಲ್ಲಿ ಸಭೆ ನಡೆಸಿದ ಅವರು, ರೈತರ ಈ ಸಮಸ್ಯೆಗಳಿಗೆ ಮುಕ್ತಿಯೇ ಇಲ್ಲವೇ? ಪ್ರತಿನಿಧಿಗಳಾದ ನಾವು ಜನರಿಗೆ ಏನೆಂದು ಉತ್ತರಿಸಬೇಕೆಂದು ಅಧಿಕಾರಿಗಳನ್ನು ಪ್ರಶ್ನಿಸಿದರು.ಪಹಣಿ 3 ಮತ್ತು 9 ವ್ಯತ್ಯಾಸವಿರುವ 54,175 ಪ್ರಕರಣಗಳು ದಾಖಲಾಗಿವೆ. ಇನ್ನು ಆಕಾರಬಂದ್ ಮತ್ತು ಆರ್‌ಟಿಸಿ ವ್ಯತ್ಯಾಸಕ್ಕೆ ಸಂಬಂಧಿಸಿ ಒಟ್ಟು 1,12,865 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ಇತ್ಯರ್ಥಕ್ಕಾಗಿ ರೈತರು ಸರಕಾರಿ ಕಚೇರಿಗೆ ಅಲೆದು ಸಾಕಾಗಿದ್ದಾರೆ. ಈ ಎಲ್ಲ ತಿದ್ದುಪಡಿ ಪ್ರಕರಣಗಳಿಗೆ ಅಳತೆಯ ಆವಶ್ಯಕತೆ ಇದೆಯೇ ಎಂಬುದನ್ನು ಅಧಿಕಾರಿಗಳು ಖಾತ್ರಿಪಡಿಸಿಕೊಳ್ಳಬೇಕು ಮತ್ತು ಸರ್ವೇ ಇಲಾಖೆ ತಹಶೀಲ್ದಾರ್ ಗ್ರೇಡ್ ಅಧಿಕಾರಿಗಳಿಗೆ ತಿಂಗಳು ಅಥವಾ ವಾರಕ್ಕೆ ಇಂತಿಷ್ಟು ಪ್ರಕರಣ ಎಂದು ಗುರಿ ನಿಗದಿಪಡಿಸಿ ರೈತರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದರು.
ರಾಜ್ಯದಲ್ಲಿ ಈಗಾಗಲೇ 17,000 ಗ್ರಾಮಗಳನ್ನು ಪೋಡಿ ಮುಕ್ತ ಗ್ರಾಮಗಳು ಎಂದು ಘೋಷಿಸಲಾಗಿದೆ. ಇನ್ನೂ 14,000 ಗ್ರಾಮಗಳನ್ನು ಪೋಡಿ ಮುಕ್ತ ಗ್ರಾಮ ಎಂದು ಘೋಷಿಸುವುದು ಬಾಕಿ ಇದೆ. ರಾಮನಗರ ಜಿಲ್ಲೆಯಲ್ಲಿ ಡ್ರೋನ್ ತಂತ್ರಜ್ಞಾನ ಆಧಾರಿತ ಭೂ ಮರು ಮಾಪನಕ್ಕೆ (ರೀ ಸರ್ವೇ) ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿತ್ತು. ಈ ಪ್ರಯೋಗ ಯಶಸ್ವಿಯಾಗಿದ್ದು, ಇದನ್ನೇ ಆಧರಿಸಿ ರಾಜ್ಯಾದ್ಯಂತ ಮತ್ತೂಮ್ಮೆ ಭೂ ಮರು ಮಾಪನ ಮಾಡಿ ಪೋಡಿ ಮರು ಅಭಿಯಾನಕ್ಕೆ ಚಾಲನೆ ನೀಡಿ ಎಂದರು. ನಮೂನೆ 57ರ ಅರ್ಜಿಯ ಅಡಿಯಲ್ಲಿ ಈ ಹಿಂದೆಯೇ ಭೂಮಿ ಮಂಜೂರಾಗಿದ್ದರೆ ಅಧಿಕಾರಿಗಳು ಪೋಡಿ ಮುಕ್ತ ಮಾಡುವ ಅಥವಾ ಏಕ ವ್ಯಕ್ತಿ ಅಡಿಯಲ್ಲಿ ಪೋಡಿ ನೀಡುವ ಬಗ್ಗೆ ಕ್ರಮ ಕೈಗೊಳ್ಳಿ, ಮುಂದಿನ ದಿನಗಳಲ್ಲಿ ಫಾರಂ 57ರ ಅರ್ಜಿಗಳನ್ನು ಮಂಜೂರು ಮಾಡುವ ಮುನ್ನ ಭೂಮಿಯನ್ನು ಅಳತೆ ಮಾಡಿ ಮಂಜೂರು ನಕ್ಷೆ ತಯಾರಿಸಿದ ಬಳಿಕ ಸಾಗುವಳಿ ಚೀಟಿ ನೀಡಿ ಪೋಡಿ ಪ್ರಕ್ರಿಯೆ ನಡೆಸಿ ನೋಂದಾಯಿಸಿ ಹಕ್ಕು ದಾಖಲೆಗಳನ್ನು ತಯಾರಿಸಿ ಎಂಬ ಸೂಚನೆಯನ್ನೂ ಅಧಿಕಾರಿಗಳಿಗೆ ರವಾನಿಸಿದರು.
Related Articles
Advertisement