ಮಾಲೂರು: ತಾಲೂಕಾದ್ಯಂತ ಇತ್ತೀಚೆಗೆ ಬಿದ್ದಿರುವ ಆಲಿಕಲ್ಲು ಮಳೆ ಹಾಗೂ ಬಿರುಗಾಳಿಗೆ ನಾಶವಾಗಿರುವ ಬೆಳೆ ನಷ್ಟದ ಸಮೀಕ್ಷೆಗೆ ವಿಶೇಷ ತಂಡ ರಚನೆ ಮಾಡಿ, ಪ್ರತಿ ಎಕರೆಗೆ ಒಂದು ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿ ರೈತ ಸಂಘದಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಸತತ ಬರಗಾಲಕ್ಕೆ ತುತ್ತಾಗಿ ಮಳೆಯಾಶ್ರಿತ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದ್ದು, ಜೊತೆಗೆ ಸರ್ಕಾರವೇ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ. ಇಂತಹ ಸಂದರ್ಭದಲ್ಲಿ ಕೊಳವೆ ಬಾವಿ ತೋಡಿ ನೀರು ತೆಗೆದು ಮಾಡಿದ ಬೆಳೆಗೂ ಸಂಚಕಾರ ಬಂದಿದೆ ಎಂದರು.
ಬೆಳೆ ನಾಶ: ಲೋಕಸಭಾ ಚುನಾವಣೇ ನೆಪದಲ್ಲಿ ಯಾವುದೇ ಬೆಳೆ ಪರಿಹಾರ ರೈತರಿಗೆ ತಲುಪಿಲ್ಲ ಜೊತೆಗೆ ಕೊಳವೆ ಬಾವಿಗಳು ಕೈಕೊಟ್ಟು ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ಸಾವಿರಾರು ರೂ. ಖರ್ಚು ಮಾಡಿ ಬೆಳೆಗಳಿಗೆ ನೀರು ಹಾಯಿಸಿ ಬೆಳೆದ ಬೆಳೆಯೂ ನಾಶವಾಗಿದೆ ಎಂದು ಹೇಳಿದರು.
ರೈತರ ನೆರವಿಗೆ ಬನ್ನಿ: ಕೂಡಲೇ ಮಾಲೂರು ತಾಲೂಕಾದ್ಯಂತ ಮಳೆ ಗಾಳಿಗೆ ನಾಶವಾಗಿರುವ ಮಾವು ಹಾಗೂ ಮತ್ತಿತರ ವಾಣಿಜ್ಯ ಬೆಳೆಗಳ ನಷ್ಟದ ಬಗ್ಗೆ ಪರಿಶೀಲನೆ ಮಾಡಲು ವಿಶೇಷ ತಂಡ ರಚನೆ ಮಾಡಿ ಬೆಳೆ ನಷ್ಟದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಪ್ರತಿ ಎಕರೆಗೆ ಲಕ್ಷ ಪರಿಹಾರ ನೀಡಿ, ನಷ್ಟದಲ್ಲಿರುವ ರೈತರ ನೆರವಿಗೆ ಬರಬೇಕೆಂದು ಒತ್ತಾಯಿಸಿದರು.
ಮೇಲಧಿಕಾರಿಗಳ ಗಮನಕ್ಕೆ: ಮನವಿ ಸ್ವೀಕರಿಸಿದ ತಹಶೀಲ್ದಾರ್ ನಾಗರಾಜ್, ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನಾಶವಾಗಿರುವ ಬೆಳೆ ನಷ್ಟ ಪರಿಶೀಲನೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳೊಡನೆ ಸಭೆ ಕರೆದು ಅಂಕಿ ಅಂಶಗಳ ಪ್ರಕಾರ ವರದಿ ತರಿಸಿಕೊಂಡು ರೈತರಿಗೆ ಪರಿಹಾರ ನೀಡುವ ಜೊತೆಗೆ ಹೆಚ್ಚಿನ ಪರಿಹಾರಕ್ಕಾಗಿ ಮೇಲಧಿಕಾರಿಗಳ ಗಮನಕ್ಕೆ ತರುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್, ತಾಲೂಕು ಅಧ್ಯಕ್ಷ ಮಾಸ್ತಿ ವೆಂಕಟೇಶ್, ಮುನಿಯಪ್ಪ, ಪುತ್ತೇರಿ ರಾಜು, ವಕ್ಕಲೇರಿ ಹನುಮಯ್ಯ, ಚಂದ್ರಪ್ಪ, ಕೃಷ್ಣೇಗೌಡ ಮುಂತಾದವರಿದ್ದರು.