ಮಂಗಳೂರು: “ಜಿಎಸ್‌ಟಿ ಜಾರಿ ಹಿನ್ನೆಲೆಯಲ್ಲಿ ಸರಕು ಸೇವಾ ತೆರಿಗೆಯನ್ನು ಏಕಗಂಟಿನಲ್ಲಿ ಮುಂಚಿತವಾಗಿ ಪಾವತಿಸಿದ ಬಳಿಕವೇ ವಾಹನಗಳು ಸರಕು ಸಾಗಿಸುವುದರಿಂದ ಚೆಕ್‌ಪೋಸ್ಟ್‌ಗಳನ್ನು ಮುಚ್ಚಲಾಗಿದೆ. ಹಾಗಾಗಿ ಇನ್ನು ಮುಂದೆ ಸರಕು ಸಾಗಾಟ ವಾಹನಗಳ ತಪಾಸಣೆ ಇರುವುದಿಲ್ಲ. ಜಿಎಸ್‌ಟಿ ಜಾರಿಗೆ ಬಂದರೂ ಅಕ್ರಮ ಎಸಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹಾಗಾಗಿ ಮುನ್ನೆಚ್ಚರಿಕೆಯ ಕ್ರಮವಾಗಿ ಸುಮಾರು ಒಂದು ವಾರ ಕಾಲ ಸರಕು ಸಾಗಾಟ ವಾಹನ ಚಾಲಕ/ಮಾಲಕರ ಮೇಲೆ ಕಣ್ಗಾವಲು ಇರಿಸಲಾಗುವುದು’ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಮಂಗಳೂರು ವಿಭಾಗದ ಜಂಟಿ ಆಯುಕ್ತ ನಾಣಿಯಪ್ಪ ತಿಳಿಸಿದ್ದಾರೆ.
ಮಂಗಳೂರು ವಿಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಕೋಟೆಕಾರ್ ಮತ್ತು ಸುರತ್ಕಲ್ ಚೆಕ್‌ಪೋಸ್ಟ್ ಸಹಿತ ರಾಜ್ಯದ 21 ಚೆಕ್‌ಪೋಸ್ಟ್‌ಗಳು ನಿನ್ನೆ (ಶುಕ್ರವಾರ) ಮಧ್ಯರಾತ್ರಿ 12 ಗಂಟೆ ಬಳಿಕ ಕಾರ್ಯಾಚರಣೆ ನಿಲ್ಲಿಸಿವೆ.
ಸುರತ್ಕಲ್ ಚೆಕ್‌ಪೋಸ್ಟ್ 2006ರಿಂದ ಕಾರ್ಯನಿರ್ವಹಿಸುತ್ತಿದ್ದು, ದಿನಕ್ಕೆ ಸರಾಸರಿ 100 ಸರಕು ವಾಹನಗಳು ಈ ಚೆಕ್‌ಪೋಸ್ಟ್ ಮೂಲಕ ಹಾದು ಹೋಗುತ್ತಿದ್ದವು. ಕೋಟೆಕಾರು ಚೆಕ್‌ಪೋಸ್ಟ್ 1991ರಿಂದ ಕಾರ್ಯ ನಿರ್ವಹಿಸುತ್ತಿದ್ದು, ದಿನಂಪ್ರತಿ ಸರಾಸರಿ 2,000 ಸರಕು ಸಾಗಾಟ ವಾಹನಗಳು ಇಲ್ಲಿ ದಾಖಲೆ ಪತ್ರಗಳನ್ನು ಪರಿಶೀಲನೆಗೆ ಒಳಪಡಿಸಿ ಮುಂದುವರಿಯುತ್ತಿದ್ದವು.
ಈ ಎರಡೂ ಕಡೆ 3 ಪಾಳಿಗಳಲ್ಲಿ 6ರಿಂದ 10 ಸಿಬಂದಿ ಕಾರ್ಯ ನಿರ್ವಹಿಸುತ್ತಿದ್ದರು. ಚೆಕ್‌ಪೋಸ್ಟ್ ಮುಚ್ಚುಗಡೆ ಆಗಿರುವುದರಿಂದ ಈ ಸಿಬಂದಿಯನ್ನು ವಾಣಿಜ್ಯ ತೆರಿಗೆ ಇಲಾಖೆಯು ಬೇರೆ ಕರ್ತವ್ಯಗಳಿಗೆ ನಿಯೋಜಿಸಲಿದೆ.