Advertisement

SulyaPadavu: ಚೆಕ್‌ಪೋಸ್ಟ್‌ ತಪ್ಪಿಸಿ ವಾಹನ ಸಂಚಾರ

10:27 AM Mar 30, 2024 | Team Udayavani |

ಸುಳ್ಯಪದವು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇರಳ-ಕರ್ನಾಟಕ ಗಡಿಭಾಗದ ಮೇನಾಲ ಮತ್ತು ಪಾಣಾಜೆ ಚೆಕ್‌ ಪೋಸ್ಟ್‌ಗಳಲ್ಲಿ ವಾಹನ ತಪಾಸಣೆ ಚುರುಕುಗೊಂಡಿದೆ. ಪರಿಣಾಮವಾಗಿ ಗಡಿಭಾಗವಾದ ಸುಳ್ಯ ಪದವಿನಲ್ಲಿ ವಾಹನ ಸಂಚಾರ ಹೆಚ್ಚಳಗೊಂಡಿದೆ. ಕಾರಣ ಇಲ್ಲಿ ಯಾವುದೇ ಚೆಕ್‌ಪೋಸ್ಟ್‌ ಇಲ್ಲ. ಕೊರೊನಾ ಮತ್ತು ವಿಧಾನಸಭಾ ಚುನಾವಣೆ ಸಂದರ್ಭಗಳಲ್ಲಿ ಇಲ್ಲಿ ನಾಕಾಬಂದಿ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಚೆಕ್‌ಪೋಸ್ಟ್‌ ನಿರ್ಮಾಣವಾಗಿಲ್ಲ.

Advertisement

ಮೇನಾಲ ಮತ್ತು ಪಾಣಾಜೆಯಲ್ಲಿ ಕರ್ನಾಟಕದ ಚೆಕ್‌ಪೋಸ್ಟ್‌ಗಳು ಇರುವುದರಿಂದ ಮತ್ತು ಪಲ್ಲತ್ತೂರಿನಲ್ಲಿ ಕೇರಳ ರಾಜ್ಯದ ಚೆಕ್‌ಪೋಸ್ಟ್‌ ನಿರ್ಮಾಣಗೊಂಡು ತಪಾಸಣೆ ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ವಾಹನ ಚಾಲಕರು ಸುಳ್ಯ ಪದವು ರಸ್ತೆಯನ್ನು ಅವಲಂಬಿಸಿದ್ದಾರೆ. ಚುನಾವಣೆ ಘೋಷಣೆಯಾದ ಬಳಿಕ ಇಲ್ಲಿ ವಾಹನ ಸಂಚಾರ ಹೆಚ್ಚಾಗಿರುವುದು ಸಂಶಯಕ್ಕೆ ಕಾರಣವಾಗಿದೆ.

ಅದರಲ್ಲೂ ಸಂಜೆಯ ಬಳಿಕ ಹೆಚ್ಚು ವಾಹನಗಳ ಓಡಾಟ ನಡೆಯುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಚೆಕ್‌ ಪೋಸ್ಟ್‌ ಇಲ್ಲದಿರುವುದರಿಂದ ಜನರು ಇದರ ದುರುಪಯೋಗ ಪಡೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಇಲ್ಲಿಯೂ ಚೆಕ್‌ಪೋಸ್ಟ್‌ ರಚಿಸಿ ತಪಾಸಣೆ ಆರಂಭಿಸು ವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಕೇರಳದ ಮಿಂಚಿಪದವು, ವಾಣಿ ನಗರ, ಸ್ವರ್ಗದ ಮೂಲಕ ಕರ್ನಾಟಕವನ್ನು ಸಂಪರ್ಕಿಸಲು ಸುಳ್ಯಪದವು ರಸ್ತೆ ಸಮೀಪದ್ದಾಗಿದೆ. ಜತೆಗೆ ಕೇರಳದ ಏತಡ್ಕ -ಬದಿಯಡ್ಕ -ಸುಳ್ಯಪದವು ಅಂತಾರಾಜ್ಯ ರಸ್ತೆ ಅಭಿವೃದ್ಧಿಗೊಂಡು ಸಂಚಾರಕ್ಕೆ ಯೋಗ್ಯವಾಗಿದೆ.

ಕೇರಳದ ಅಧಿಕಾರಿಗಳಿಗೆ ಕರ್ನಾಟಕದ ಚೆಕ್‌ಪೋಸ್ಟ್‌

ಕೇರಳ -ಕರ್ನಾಟಕದ ಗಡಿಭಾಗವಾದ ಪಲ್ಲತ್ತೂರು ಎಂಬಲ್ಲಿ ಕೇರಳದ ಚುನಾವಣಾಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ವಾಹನ ತಪಾಸಣೆ ನಡೆಸುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಪಲ್ಲತ್ತೂರಿನಲ್ಲಿ ಚೆಕ್‌ಪೋಸ್ಟ್‌ ನಿರ್ಮಿಸ ಲಾಗಿತ್ತು. ಇಲ್ಲಿಂದ ಮೇನಾಲಕ್ಕೆ ಚೆಕ್‌ಪೋಸ್ಟ್‌ ವರ್ಗಾಯಿಸಲಾಯಿತು. ಈಗ ಪಲ್ಲತ್ತೂರಿನ ಚೆಕ್‌ಪೋಸ್ಟನ್ನು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇರಳದ ಚುನಾವಣಾಧಿಕಾರಿಗಳಿಗೆ ಉಪಯೋಗಕ್ಕೆ ನೀಡಲಾಗಿದೆ. ನೆಟ್ಟಣಿಗೆ ಮುಟ್ನೂರು ಗ್ರಾ.ಪಂ.ನಿಂದ ಮೂಲ ಸೌಕರ್ಯ ಒದಗಿಸಲಾಗಿದೆ.

Advertisement

ಹೊಸಂಗಡಿ: ಪೊಲೀಸ್‌ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ

ಸಿದ್ದಾಪುರ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಗಡಿ ಭಾಗವಾದ ಹೊಸಂಗಡಿ ಚೆಕ್‌ ಪೋಸ್ಟ್‌ನಲ್ಲಿ ಅಮಾಸೆಬೈಲು ಪೊಲೀಸ್‌ರಿಂದ ಬಿರುಸಿನ ತಪಾಸಣೆ ನಡೆಯುತ್ತಿದೆ. ಉಡುಪಿ ಜಿಲ್ಲಾ ಗಡಿ ಭಾಗವಾದ ಹೊಸಂಗಡಿ ಚೆಕ್‌ ಪೋಸ್ಟ್‌ ಕಂದಾಯ ಇಲಾಖೆಯದ್ದಾಗಿದ್ದು, ಅಮಾಸೆಬೈಲು ಪೊಲೀಸರು ನಿರ್ವಹಿಸುತ್ತಿದ್ದಾರೆ.

ಚುನಾವಣೆಯ ಹಿನ್ನಲೆಯಲ್ಲಿ ಅಮಾಸೆಬೈಲು ಪೊಲೀಸ್‌ ಠಾಣೆಯ ಪೊಲೀಸ್‌ ಉಪ ನಿರೀಕ್ಷಕರಾದ ಸೌಮ್ಯಾ ಅವರ ನೇತೃತ್ವದಲ್ಲಿ ಮೂರು ಪಾಳಿಗಳಲ್ಲಿ ತಪಾಸಣೆ ನಡೆಯುತ್ತಿದೆ. ಪ್ರತೀ ಹಂತದಲ್ಲಿ ನಾಲ್ಕು ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಬ್ಬರು ಪೊಲೀಸ್‌ ಸಿಬಂದಿ ಮತ್ತು ಇತರ ಇಲಾಖೆಗಳ ತಲಾ ಒಬ್ಬರಂತೆ ಇಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next